More

    ಮಧ್ಯಪ್ರದೇಶದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಧರಣಿ ಕುಳಿತ ಮತ್ತೊಬ್ಬ ಕಾಂಗ್ರೆಸ್ ಶಾಸಕ !

    ಭೋಪಾಲ: ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತ, ಶಾಸಕ ಮುನ್ನಾಲಾಲ್ ಗೋಯಲ್ ಮಧ್ಯಪ್ರದೇಶ ವಿಧಾನಸೌಧದ ಎದುರು ಶನಿವಾರ ಧರಣಿ ಕುಳಿತು ದೇಶದ ಗಮನಸೆಳೆದಿದ್ದಾರೆ.

    ತಮ್ಮ ಪಕ್ಷದ ಸರ್ಕಾರದ ವಿರುದ್ಧ ಅವರು ಧರಣಿ ಕುಳಿತ ಕಾರಣ, ಅನೇಕರ ಹುಬ್ಬು ಮೇಲೇರಿದೆ. ಶನಿವಾರ ಅಪರಾಹ್ನ ಅವರ ಧರಣಿ ಆರಂಭವಾದ ಬಗೆ ಇದು. ಬೆಂಬಲಿಗರೊಂದಿಗೆ ಆಗಮಿಸಿದ ಅವರು, ವಿಧಾನಸೌಧದ ಆವರಣದಲ್ಲಿರುವ ಬ್ಯಾರಿಕೇಡ್ ಹಾರಿ ಒಳಗೆ ನುಗ್ಗಿ ಗಾಂಧಿ ಪ್ರತಿಮೆ ಸನಿಹಕ್ಕೆ ಆಗಮಿಸಿದರು. ಅಲ್ಲಿ ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದರು.

    ಪ್ರತಿಭಟನೆಗೆ ಇದು ಕಾರಣ: ಆಡಳಿತಾರೂಢ ಪಕ್ಷವಾಗಿ ಕಾಂಗ್ರೆಸ್ ಇದೀಗ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆ ಈಡೇರಿಸುವ ಕಡೆಗೆ ಗಮನಹರಿಸಬೇಕು. ಪ್ರಣಾಳಿಕೆ ಎಂದರೆ ಅದು ಪ್ರಾಮಿಸರಿ ನೋಟ್ ಎಂದು ಹೇಳುತ್ತ ಪ್ರಚಾರ ನಡೆಸಿದವರು ನಾವು. ಈಗ ಅದು ಆಗುತ್ತಿಲ್ಲ ಎಂದರೆ ಹೇಗೆ ಎಂದು ಗೋಯಲ್ ಪ್ರಶ್ನಿಸಿದ್ದಾರೆ. ನನಗೆ ಮುಖ್ಯಮಂತ್ರಿ ಅಥವಾ ಯಾವುದೇ ಸಚಿವರ ವಿರುದ್ಧ ಕೋಪವಿಲ್ಲ. ಆದರೆ, ನನ್ನ ಕ್ಷೇತ್ರದ ಜನರ ವಿಶ್ವಾಸ ನನ್ನ ಮೇಲಿರಬೇಕು. ಹೀಗಾಗಿ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು.

    ಗೋಯಲ್ ಪ್ರತಿಭಟನೆ ಕೂರುವ ವಿಚಾರವನ್ನು ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಲಿಖಿತವಾಗಿ ಸಲ್ಲಿಸಿದ್ದು, ಶುಕ್ರವಾರ ಧರಣಿ ಘೋಷಿಸಿದ್ದರು ಕೂಡ. ನನ್ನ ಕ್ಷೇತ್ರದಲ್ಲಿ ಬಡವರ ಮನೆಗಳನ್ನು ಬುಲ್ಡೋಜರ್​ಗಳು ನೆಲಸಮ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇವೆ. ವಸತಿ ಕಳೆದುಕೊಂಡು ಚಳಿಗೆ ನಡುಗುತ್ತಿದ್ದ ಅವರೆದುರು ನಾವು ಅಸಹಾಯಕರಾಗಿದ್ದೆವು. ಕಾಂಗ್ರೆಸ್ ಕಾರ್ಯಕರ್ತರಿಗೆ ಆಡಳಿತ ಯಂತ್ರದ ಕೆಲಸ ಮುಜುಗರವನ್ನು ಉಂಟುಮಾಡುತ್ತಿದೆ ಎಂದು ಗೋಯಲ್ ಅಲವತ್ತುಕೊಂಡಿದ್ದಾರೆ.

    ಇದಕ್ಕೂ ಮುನ್ನ ವಿಪಕ್ಷ ನಾಯಕ ಗೋಪಾಲ್ ಭಾರ್ಗವ ಅವರು ರಾಜ್ಯ ಸರ್ಕಾರದ ಲೋಪವನ್ನು ಎತ್ತಿ ತೋರಿಸಲು ರಸ್ತೆಗುಂಡಿಗಳ ಚಿತ್ರಗಳನ್ನು ಟ್ವಿಟರ್​ನಲ್ಲಿ ಷೇರ್ ಮಾಡಿದ್ದರು. ಅಲ್ಲದೆ, ತಮ್ಮ ಪಕ್ಷದ ಶಾಸರಕ ಮಾತಿಗೇ ಕಿವಿಗೊಡದ ಕಿವುಡು, ಮೂಕ ಸರ್ಕಾರ ಎಂದು ಜರೆದಿದ್ದರು. ಇದಕ್ಕೂ ಮುನ್ನ ಗೋಯಲ್ ಅವರ ಮಾದರಿಯಲ್ಲೇ ಸುನೀತಾ ಪಟೇಲ್ ಕೂಡ ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆದಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts