More

    ತುಮಕೂರಿಗೆ ಆಗಮಿಸುತ್ತಿರೋ ಪ್ರಧಾನಿಗೆ #ಉತ್ತರಕೊಡಿಮೋದಿ ಹ್ಯಾಶ್​​​ಟ್ಯಾಗ್​ ಮೂಲಕ ಪ್ರಶ್ನೆಗಳ ಸುರಿಮಳೆಗೈದ ಕಾಂಗ್ರೆಸ್​

    ಬೆಂಗಳೂರು: ಸಣ್ಣ ಹಾಗೂ ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಕೇಂದ್ರ ಸರ್ಕಾರ 2019ರ ಫೆ.1ರಂದು ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 2ನೇ ಹಂತಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಂದು ತುಮಕೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್​ ಪ್ರಧಾನಿ ಮೋದಿ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿದು ಉತ್ತರ ಕೊಡಿ ಮೋದಿ ಎಂದು ಆಗ್ರಹಸಿದೆ.

    ಟ್ವಿಟರ್​ ಮೂಲಕ ಪ್ರಶ್ನೆಗಳ ಹೂಮಳೆ ಸುರಿಸಿರುವ ರಾಜ್ಯ ಕಾಂಗ್ರೆಸ್ ನರೇಂದ್ರ ಮೋದಿಯವರೇ ಉತ್ತರ ಕೊಡಿ ಎಂದಿದೆ. ಹಾಗಾದರೆ ಕಾಂಗ್ರೆಸ್​ ಕೇಳಿದ ಪ್ರಶ್ನೆಗಳು ಯಾವುವು ಎಂದರೆ…. ಈ ಹಿಂದೆ ತುಮಕೂರಿಗೆ ಭೇಟಿ ನೀಡಿ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡಿ 8 ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಿರಿ, ನದಿ ಜೋಡಣೆ ಪ್ರಕ್ರಿಯೆ ಆರಂಭವಾಗಿದೆಯೇ? ಈಗ ಯಾವ ಹಂತದಲ್ಲಿದೆ? ಆಗಿರುವ ಖರ್ಚು ವೆಚ್ಚಗಳೇನು? ಯೋಜನೆ ಪೂರ್ಣಗೊಳ್ಳುವುದು ಯಾವಾಗ?​ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದಾಗ ತುಮಕೂರಿಗೆ ಏಕೆ ಬರಲಿಲ್ಲ? ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ (ಮಾಜಿ‌ ಸಿಎಂ ಸಿದ್ದರಾಮಯ್ಯ ಅವರು 2018 ಜನವರಿ 24 ರಂದು ಪತ್ರ ಬರೆದಿದ್ದರು) ಇದುವರೆಗೂ ನೀಡಿಲ್ಲ ಏಕೆ? ಎಂದು ತುಮಕೂರಿಗೆ ಸಂಬಂಧಿಸಿದ ಸಾಲು ಸಾಲು ಪ್ರಶ್ನೆಗಳನ್ನು ಕಾಂಗ್ರೆಸ್​ ಕೇಳಿದೆ.

    ಮುಂದುವರಿದು ಅಚ್ಚೇ ದಿನ್ ಎಲ್ಲಿ? ವಿಕಾಸ್ ಎಲ್ಲಿ? ಕಪ್ಪು ಹಣ ಎಲ್ಲಿ? ಉದ್ಯೋಗ ಸೃಷ್ಟಿ ಎಲ್ಲಿ? ರೈತರ ಆದಾಯ ದ್ವಿಗುಣ ಎಲ್ಲಿ? ಮಹಿಳಾ ಸಬಲೀಕರಣ ಎಲ್ಲಿ? ನಿಮ್ಮ ಮೊದಲ ಪತ್ರಿಕಾಗೋಷ್ಠಿ ಎಲ್ಲಿ? ಎಂದೂ ಪ್ರಶ್ನಿಸಿದೆ.

    ಇದು ಭಾರತ ಗಣರಾಜ್ಯ, ಭಾರತದ ಸಾಂವಿಧಾನದಲ್ಲಿ ಯಾವ ಭಾಷೆಯೂ ರಾಷ್ಟ್ರ ಭಾಷೆಯಲ್ಲ. ಹಾಗಿದ್ದರೂ, ಸಂವಿಧಾನದ 8ನೇ ಪರಿಚ್ಚೇಧದಲ್ಲಿನ ಎಲ್ಲಾ ಭಾಷೆಗಳಿಗೂ ಅಧಿಕೃತ, ಸಮಾನ ಸ್ಥಾನಮಾನ ನೀಡುತ್ತಿಲ್ಲ ಏಕೆ? ಜನ ಜೀವನದ ಮಾತೃ ಭಾಷೆಗಳನ್ನು, ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿ ‘ಹಿಂದಿ’ ಭಾಷೆಯನ್ನು ಹೇರುತ್ತಿರುವುದೇಕೆ? ಉತ್ತರ ಕೊಡಿ ಮೋದಿ ಎಂದು ಕಾಂಗ್ರೆಸ್​ ಆಗ್ರಹಿಸಿದೆ.

    ಗಡಿ ವಿವಾದದಲ್ಲಿ ಮಹಾರಾಷ್ಟ್ರ-ಕರ್ನಾಟಕ ಬಿಜೆಪಿ ನಾಯಕರು ತದ್ವಿರುದ್ಧ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವುದೇಕೆ? ಉಭಯ ರಾಜ್ಯಗಳ ನಡುವೆ ಶಾಂತಿ ಸ್ಥಾಪಿಸಬೇಕಾದ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ತಮ್ಮದೇ ಪಕ್ಷದ ಶಾಸಕರ ಹೇಳಿಕೆಯನ್ನು ಖಂಡಿಸುತ್ತಿಲ್ಲ ಏಕೆ? ರಾಜ್ಯಕ್ಕೆ ಕೇಂದ್ರದಿಂದ ನೀಡಬೇಕಾದ ತೆರಿಗೆಯ (ಜಿ.ಎಸ್.ಟಿ) ಪಾಲು ಸಮರ್ಪಕವಾಗಿ ನೀಡುತ್ತಿಲ್ಲ ಏಕೆ? ರಾಜ್ಯಕ್ಕೆ ಬರಬೇಕಾದ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಬಾಕಿಯನ್ನು ಇದುವರೆಗೂ ಏಕೆ ನೀಡಿಲ್ಲ? ಅನುದಾನ ಹಂಚಿಕೆಯಲ್ಲಿ‌ ಕರ್ನಾಟಕವನ್ನು ಕಡೆಗಣಿಸಿರುವುದು ಏಕೆ? ಎಂದು ನಿರಂತರ ಪ್ರಶ್ನೆಗಳನ್ನು ಎಸೆದಿದೆ.

    ಭೀಕರ ನೆರೆ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿಲ್ಲ ಏಕೆ? 1 ಲಕ್ಷ‌ ಕೋಟಿ ರೂ.ಗೂ ಹೆಚ್ಚು ನಷ್ಟವಾದರೂ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿಲ್ಲ ಏಕೆ? ಮಧ್ಯಂತರ ಪರಿಹಾರ ನೀಡಲಿಲ್ಲ ಏಕೆ? ರಾಜ್ಯ ಸರ್ಕಾರವೇ 35,300 ಕೋಟಿ ರೂ. ನಷ್ಟ ಆಗಿದೆ ಎಂದು ವರದಿ ನೀಡಿದರೂ ಕೇವಲ 1200 ಕೋಟಿ ರೂ. ನೀಡಿ ಸುಮ್ಮನಾಗಿದ್ದು‌ ಏಕೆ? ಎಂದು ಪ್ರಶ್ನಿಸಿ ಕಾಂಗ್ರೆಸ್​ ಉತ್ತರಕ್ಕಾಗಿ ಟ್ವಿಟರ್​ನಲ್ಲಿ ಪಟ್ಟುಹಿಡಿದಿದೆ.

    ಇಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ವಿುಸಿರುವ ಬೃಹತ್ ವೇದಿಕೆಯಲ್ಲಿ 2016-17, 2017-18ನೇ ಸಾಲಿನ 30 ಕೃಷಿ ಸಾಧಕರಿಗೆ ‘ಕೃಷಿ ಕರ್ಮಣ್ಯ’ ಪ್ರಶಸ್ತಿಯನ್ನು ಪ್ರಧಾನಿ ಪ್ರದಾನ ಮಾಡುವರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಕೃಷಿ ಸಮ್ಮಾನ್ ಫಲಾನುಭವಿಗಳಿಗೆ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts