More

    ಹಿಮಾಚಲದಲ್ಲಿ ಅಧಿಕಾರ ಹಸ್ತಾಂತರ; ರಾಜ್ಯದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಸಿದ್ಧತೆ

    ತೀವ್ರ ಕುತೂಹಲ ಮೂಡಿಸಿದ್ದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಮೂಲಕ ರಾಜ್ಯದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿದೆ. ಅಧಿಕಾರಾರೂಢ ಪಕ್ಷ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಂಪ್ರದಾಯವನ್ನು 1985ರಿಂದ ರೂಢಿಸಿಕೊಂಡು ಬಂದಿರುವ ಕಣಿವೆ ರಾಜ್ಯದಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಒಟ್ಟು 68 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆದ್ದಿದ್ದು, ಬಿಜೆಪಿ 25 ಹಾಗೂ ಇತರರು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಡಿಸೆಂಬರ್ 1ರಂದು ಚುನಾವಣೆ ನಡೆದಿತ್ತು. ಈ ನಡುವೆ, ಆಪರೇಷನ್ ಕಮಲದ ಭಯದಿಂದ ನೂತನ ಕಾಂಗ್ರೆಸ್ ಶಾಸಕರನ್ನು ಪಕ್ಷದ ಹೈಕಮಾಂಡ್ ಚಂಡೀಗಢ ಕಳುಹಿಸಿದೆ. ಹಿಮಾಚಲ ಪ್ರದೇಶದ ಚುನಾವಣಾ ವೀಕ್ಷಕರಾದ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಅವರ ಜತೆ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಶಾಸಕರ ರಕ್ಷಣೆಯ ಕಾರ್ಯಕ್ಕೆ ನಿಯೋಜಿಸಲಾಗಿದೆ.

    ಕಾಂಗ್ರೆಸ್ ಗೆಲುವಿಗೆ ಕಾರಣ

    ಒಮ್ಮೆ ಅಧಿಕಾರ ಕೊಟ್ಟವರಿಗೆ ಮತ್ತೊಂದು ಅವಧಿಗೆ ಹಿಮಾಚಲ ಪ್ರದೇಶದ ಜನರು ಅಧಿಕಾರ ಕೊಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮರುಆಗಮನಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ.

    ಆಡಳಿತವಿರೋಧಿ ಅಲೆ, ಬಂಡಾಯ
    ಮುಖ್ಯಮಂತ್ರಿ ಜೈರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರವು ‘ ರಾಜ್ ನಹೀ ರಿವಾಜ್ ಬದ್ಲೇಗಾ’ (ಸಂಪ್ರದಾಯ ಬದಲಾಗುತ್ತದೆ) ಎಂಬ ಘೋಷವಾಕ್ಯ ದೊಂದಿಗೆ ದಶಕಗಳ ಹಳೆಯ ಪ್ರವೃತ್ತಿಗೆ ಇತಿಶ್ರೀ ಹಾಡುವುದಾಗಿ ಪ್ರತಿಜ್ಞೆ ಮಾಡಿತ್ತು.ಆದರೆ ಕಾಂಗ್ರೆಸ್, ಸಿಎಂ ಅಭ್ಯರ್ಥಿ ಕುರಿತು ಸ್ಪಷ್ಟತೆ ಇಲ್ಲದಿದ್ದರೂ ಆಡಳಿತವಿರೋಧಿ ಅಲೆ ಬಳಸಿಕೊಂಡು ಪ್ರಚಾರದ ಮೂಲಕ ಅಧಿಕಾರಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿತ್ತು.

    ಟಿಕೆಟ್ ಹಂಚಿಕೆ ಎಡವಿದ ಬಿಜೆಪಿ
    ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ಪಕ್ಷದ ಭಿನ್ನಮತೀಯರನ್ನು ಮನವೊಲಿಸಲು ಪಕ್ಷ ಯತ್ನಿಸಿದರೂ ಹಲವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರಿಂದ ಮತಗಳು ವಿಭಜನೆಗೊಂಡವು.

    ಹಳೆಯ ಪಿಂಚಣಿ ಯೋಜನೆ
    ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಪುನರ್ ಸ್ಥಾಪಿಸುವುದಾಗಿ ಭರವಸೆ ನೀಡಿ ಕಾಂಗ್ರೆಸ್, ಉದ್ಯೋಗಿಗಳ ವಿಶ್ವಾಸ ಗಿಟ್ಟಿಸಿಕೊಳ್ಳಲು ಯಶಸ್ವಿಯಾಯಿತು.

    ನಿರುದ್ಯೋಗ, ಅಗ್ನಿವೀರ್​ಗೆ ಆಕ್ರೋಶ
    ಜನರೊಂದಿಗೆ ಸಂಪರ್ಕ ಸಾಧಿಸಲು ರಾಷ್ಟ್ರೀಯ ವಿಷಯಗಳಿಗಿಂತ ಸ್ಥಳೀಯ ಸಮಸ್ಯೆಗಳಾದ ಹಣದುಬ್ಬರ, ನಿರುದ್ಯೋಗವನ್ನು ಆರಿಸಿಕೊಂಡಿದ್ದು ಕಾಂಗ್ರೆಸ್​ಗೆ ಪ್ಲಸ್ ಪಾಯಿಂಟ್ ಆಯಿತು. ರಾಜ್ಯದ ಬಹುತೇಕ ಮಂದಿ ಕೇಂದ್ರದ ಅಗ್ನಿವೀರ್ ಯೋಜನೆಗೆ ಒಲವು ತೋರದಿರುವುದು ಕಾಂಗ್ರೆಸ್​ಗೆ ವರದಾನವಾಯಿತು. ಕಾಂಗ್ರಾದಲ್ಲಿ ನಡೆದ ಮೆಗಾ ರ್ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ 2024ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ನೇಮಕಾತಿ ಯೋಜನೆ ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದರು.

    ಸೇಬು ಬೆಳೆಗಾರರ ಅಸಮಾಧಾನ
    ಹಿಮಾಚಲದಲ್ಲಿ ಅರ್ಧದಷ್ಟು ಕ್ಷೇತ್ರಗಳಲ್ಲಿ ಸೇಬು ಬೆಳೆಗಾರರು ಪ್ರಾಬಲ್ಯ ಹೊಂದಿದ್ದು, ರಾಜ್ಯ ಚುನಾವಣಾ ಫಲಿತಾಂಶದ ಮೇಲೆ ಗಮನಾರ್ಹ ಹಿಡಿತ ಹೊಂದಿದ್ದಾರೆ. ಲಾಭದ ಪ್ರಮಾಣ ಇಳಿಕೆ, ಹೆಚ್ಚುತ್ತಿರುವ ವೆಚ್ಚ ಮತ್ತು ಹಣ್ಣಿನ ಬೆಲೆ ನಿಯಂತ್ರಿಸುತ್ತಿರುವ ಖಾಸಗಿ ಕಂಪನಿಗಳು, ಪ್ಯಾಕೇಜಿಂಗ್ ಮೇಲಿನ ಜಿಎಸ್​ಟಿ ದರ ಹೆಚ್ಚಳವು ಸೇಬು ಬೆಳೆಗಾರರ ಮನಸ್ಸು ಕಾಂಗ್ರೆಸ್​ನತ್ತ ವಾಲಲು ಪ್ರಮುಖ ಕಾರಣ ಎನ್ನಲಾಗಿದೆ.

    ಭರವಸೆ ಈಡೇರಿಸುತ್ತೇವೆ
    ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಗೆಲುವಿಗೆ ಹಿಮಾಚಲ ಪ್ರದೇಶದ ಎಲ್ಲ ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳುತ್ತೇನೆ ಎಂದು ಅವರು ಹೇಳಿದ್ದಾರೆ.

    ಫಲ ಕೊಟ್ಟ ಪ್ರಿಯಾಂಕಾ ತಂತ್ರ
    ಹಿಮಾಚಲದಲ್ಲಿ ಚುನಾವಣಾ ಪ್ರಚಾರ ಸೇರಿದಂತೆ ಸಮಸ್ತ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರಿಯಾಂಕಾ ಗಾಂಧಿ ವಾಧ್ರಾ ಅವರ ತಂತ್ರ, ಶ್ರಮ ಈ ಬಾರಿ ಫಲ ಕೊಟ್ಟಿದೆ. ಚುನಾವಣೆ ಹೊತ್ತಿನಲ್ಲಿ ಮಗ್ಗುಲ ಮುಳ್ಳಾಗಿದ್ದ ಭಿನ್ನಮತೀಯರಿಗೆ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಬಿಸಿ ಮುಟ್ಟಿಸಿದ್ದರು. ಪ್ರತಿಭಾಗೆ ಬೆಂಬಲವಾಗಿ ನಿಂತ ಪ್ರಿಯಾಂಕಾ, 30ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರನ್ನು ಪಕ್ಷದ್ರೋಹದ ಆರೋಪದ ಮೇಲೆ ಆರು ವರ್ಷ ಕಾಲ ಉಚ್ಚಾಟಿಸಿದ್ದರು. ಪ್ರಿಯಾಂಕರ ತಂತ್ರದಿಂದಾಗಿ ಗುಡ್ಡಗಾಡು ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಕಮ್್ಯಾಕ್ ಮಾಡಿದೆ.

    ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕೂಡ ಚುನಾವಣೆ ಗೆಲುವಿಗೆ ಸಹಕಾರಿಯಾಯಿತು. ಈ ಚುನಾವಣೆಗೆ ಶ್ರಮಿಸಿದ ಪ್ರಿಯಾಂಕಾ ಗಾಂಧಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಪರಿಶ್ರಮದಿಂದ ಈ ಫಲಿತಾಂಶ ಬಂದಿದೆ.
    | ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ

    ನಾಯಕಿಗೆ ಸೋಲು
    ಪಂಜಾಬ್ ಕಾಂಗ್ರೆಸ್ ಉಸ್ತುವಾರಿಯಾಗಿರುವ ಆಶಾಕುಮಾರಿ ಕೂಡ ಸಿಎಂ ರೇಸ್​ನಲ್ಲಿದ್ದರು. ಆದರೆ ಡಾಲ್ ಹೌಸೀ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್. ಠಾಕೂರ್ ಎದುರು ಸೋಲುವುದರೊಂದಿಗೆ ಅವರು ಸಿಎಂ ಕನಸನ್ನು ಕೈಬಿಡಬೇಕಾಗಿದೆ. 6 ಬಾರಿ ಶಾಸಕಿಯಾಗಿರುವ ಆಶಾ ಛತ್ತೀಸ್​ಗಢದ ಸಚಿವ ಟಿ.ಎಸ್. ಸಿಂಗ್ ಸಹೋದರಿ.

    ಸಿಎಂ ರೇಸ್​ನಲ್ಲಿ ಮೂವರು

    ಪ್ರತಿಭಾ ಸಿಂಗ್
    ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಹೆಸರು ಮುಂಚೂಣಿಯಲ್ಲಿದೆ. ಮಂಡಿಕ್ಷೇತ್ರದ ಸಂಸದೆಯಾಗಿರುವ ಪ್ರತಿಭಾ ಸಿಂಗ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿಲ್ಲ. ಆದರೆ ಪಕ್ಷದ ಈ ಸಾಧನೆಗೆ ಕಾರಣರಾದವರಲ್ಲಿ ಪ್ರಮುಖರಾಗಿದ್ದಾರೆ.

    ಸುಖ್ವಿಂದರ್ ಸಿಂಗ್ ಸುಖು
    ರಾಜ್ಯದ ಪ್ರಚಾರ ಸಮಿತಿ ಮುಖ್ಯಸ್ಥರಾಗಿರುವ ರಾಜ್ಯ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಸುಖು ರಾಹುಲ್ ಗಾಂಧಿಯವರ ಆಯ್ಕೆ. ಮೂರು ಸಲ ಶಾಸಕರಾಗಿರುವ ಸುಖು ಹಮಿರ್​ಪುರದ ನಾದೌನ್ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದಾರೆ.

    ಮುಕೇಶ್ ಅಗ್ನಿಹೋತ್ರಿ
    ನಿಕಟಪೂರ್ವ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮುಕೇಶ್ ಅಗ್ನಿಹೋತ್ರಿ ವೀರಭದ್ರ ಸಿಂಗ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. 4 ಬಾರಿ ಶಾಸಕರಾಗಿರುವ ಅಗ್ನಿಹೋತ್ರಿ ಉನಾ ಜಿಲ್ಲೆಯ ಹರೋಲಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts