More

    ಕಾಂಗ್ರೆಸ್ ದುಸ್ಸಾಹಸಕ್ಕೆ ಕೈ ಹಾಕಿದೆ

    ಬಾಗಲಕೋಟೆ: ನಾನು ಸಂಸದನಾಗಿ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎನ್ನುವುದು ಹಿರಿಯ ಕಾಂಗ್ರೆಸ್ ನಾಯಕರಿಗೆ, ಮತದಾರರಿಗೆ ಗೊತ್ತಿದೆ. ಹಾದಿ, ಬೀದಿಯಲ್ಲಿ ಹೋಗುವವರಿಗೆ ನಾನು ಉತ್ತರ ಕೊಡುವುದಿಲ್ಲ. 1975 ರಿಂದ ರಾಜಕೀಯದಲ್ಲಿದ್ದು, ನಾಲ್ಕು ದಶಕಗಳ ಅನುಭವ ಇದೆ. ಈ ಸಾರಿ

    ಬಾಗಲಕೋಟೆ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ, ಸಂಸದ ಪಿ.ಸಿ. ಗದ್ದಿಗೌಡರ ಗುಡಗಿದರು.
    ನಗರದ ಬಿವಿವಿ ಸಂಘದ ಮಿನಿ ಸಭಾ ಭವನದಲ್ಲಿ ಶುಕ್ರವಾರ ಜೆಡಿಎಸ್-ಬಿಜೆಪಿ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ತಮ್ಮ ವಿರುದ್ಧ ಟೀಕೆಗಳಿಗೆ ಖಡಕ್ ಉತ್ತರ ನೀಡಿ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿದರು.

    ಮುಖ್ಯವಾಗಿ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ 20 ವರ್ಷದ ಅವಧಿಯಲ್ಲಿ ಅತೀ ಹೆಚ್ಚು ಯೋಜನೆ, ಅನುದಾನ ತಂದಿದ್ದೇನೆ. ಈ ಬಗ್ಗೆ ಕೈಪಿಡಿ ಸಿದ್ಧಪಡಿಸಿದ್ದೇನೆ. ಕಾಂಗ್ರೆಸ್ಸಿಗರ ಮನೆಗೆ ಪೋಸ್ಟ್ ಕಳುಹಿಸುತ್ತೇನೆ. ಓದಿಕೊಳ್ಳಲಿ ಎಂದು ಸವಾಲ್ ಎಸೆದರು.

    ನರೇಗಾ ಯೋಜನೆ, ಹರ್‌ಘರ್‌ನಲ್ಲಿ ಸೇರಿದಂತೆ ಅನೇಕ ಯೋಜನೆಗಳು ಕೇಂದ್ರ ಸರ್ಕಾರದ್ದು, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ನಾನು ಎಲ್ಲವನ್ನೂ ಬಿಡಿಸಿ ಹೇಳುವುದಿಲ್ಲ. ಬೇಕಿದ್ದರೇ ಪರಾಮರ್ಶಿಸಲಿ ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.

    ನನ್ನ ಬಳಿ ಹಣವಿಲ್ಲ. ಆದರೆ ಜನ ಬಲವಿದೆ. ಜೆಡಿಎಸ್, ಬಿಜೆಪಿ ದೊಡ್ಡಮಟ್ಟದ ಕಾರ್ಯಕರ್ತರ ಬಲವಿದೆ. ಇದಕ್ಕೆ ಜನರು ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ. ಮೊದಲಿನಿಂದಲು ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ದಳದಲ್ಲಿ ಇದ್ದಾಗಲು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡರು ನನ್ನನ್ನು ಬೆಂಬಲಿಸಿದ್ದರು. ಇದೀಗ ಅವರು ಹಾಗೂ ಜೆಡಿಎಸ್ ಪಕ್ಷ ಬೆಂಬಲಕ್ಕೆ ನಿಂತಿದೆ. ಹೀಗಾಗಿ ನನಗೆ ಚುನಾವಣೆ ಬಗ್ಗೆ ಹೆದರಿಕೆಯಿಲ್ಲ. ಅಧಿಕ ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಜೆಡಿಎಸ್-ಬಿಜೆಪಿ ಮೈತ್ರಿಯಿಂದ ರಾಜ್ಯದಲ್ಲಿ ಆನೆ ಬಲ ಬಂದತಾಗಿದೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ತನ್ಮೂಲಕ 400 ಸ್ಥಾನಗಳನ್ನು ಪಡೆದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಜಂಟಿಯಾಗಿ ಹೋರಾಟ ನಡೆಸಬೇಕು. ಮೋದಿ ಸಾಧನೆಗಳನ್ನು ಮನೆಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವೀನಮರದ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ತನ್ನದೆಯಾದ ಮತ ಬ್ಯಾಂಕ್ ಹೊಂದಿದೆ. ವಿವಿಧ ಮತಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಮತ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದವು ಮೈತ್ರಿ ಧರ್ಮ ಪಾಲನೆ ಮಾಡಿ ಸಂಸದ ಪಿ.ಸಿ. ಗದ್ದಿಗೌಡರ ಗೆಲುವಿಗೆ ಶ್ರಮ ವಹಿಸಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಕಂಡು ಶ್ರೇಷ್ಠ ನಾಯಕ ಅಂತ ಬಣ್ಣಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಬಲಾಢ್ಯವಾಗಿದೆ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದು, ಜೆಡಿಎಸ್ ಜೊತೆಗೂಡಿ ಚುನಾವಣೆ ಎದುರಿಸಲಿದೆ. ಇದು ನಮ್ಮ ಬಾಗಲಕೋಟೆ ಮತ ಕ್ಷೇತ್ರದಲ್ಲಿ ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವಿಗೆ ಶಕ್ತಿ ಬರುವುದು ನಿಶ್ಚಿತ. ಜಂಟಿಯಾಗಿ ಪ್ರಚಾರ, ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಆಟ ನಡೆಯಲ್ಲ ಎಂದು ಹೇಳಿದರು.

    ಸಭೆಯ ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಮುಖಂಡರಾದ ಬಸವರಾಜ ಯಂಕಂಚಿ, ರಾಜು ನಾಯ್ಕರ್, ಮಲ್ಲುಯ್ಯ ಮೂಗನೂರಮಠ, ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ಸುರಪುರ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಲೀಂ ಮೋಮಿನ್, ಕೃಷ್ಣಾ ಪಾಟೀಲ, ಶಿವಪ್ರಸಾದ ಗದ್ದಿ, ಚಂದ್ರಕಾಂತ ಶೇಖಾ ಇತರರು ಇದ್ದರು.

    ನಾಯಕರ ಗೈರು ಭಿನ್ನಮತ ಸಂಶಯ

    ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರದಲ್ಲಿ ಪಕ್ಷದ ಜವಾಬ್ದಾರಿ ನಾಯಕರು, ಜಿಲ್ಲಾಧ್ಯಕ್ಷರು ಜಂಟಿ ಹೋರಾಟ, ಚುನಾವಣೆ ರಣತಂತ್ರ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು ಕೂಡಾ ಪ್ರಮುಖ ನಾಯಕರ ಗೈರು ಭಿನ್ನಮತದ ಸಂಶಯ ಮೂಡಿಸಿದೆ. ವಿ.ಪ. ಸದಸ್ಯರಾದ ಪಿ.ಎಚ್.ಪೂಜಾರ, ಹನುಮಂತ ನಿರಾಣಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಹುನಗುಂದ ಮಾಜಿ ಶಾಸಕ ದೊಡ್ಡಗೌಡ ಪಾಟೀಲ, ಜೆಡಿಎಸ್ ನಾಯಕರಾದ ರವಿ ಹುಣಶ್ಯಾಳ, ಶರಣು ಹುರಕಡ್ಲಿ, ಡಾ. ದೇವರಾಜ ಪಾಟೀಲ, ಹಲವು ನಾಯಕರು ಗೈರು ಉಳಿದಿದ್ದು, ಅಸಮಾಧಾನದ ಅನುಮಾನ ಮೂಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts