More

    ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳೇ ಬಿಜೆಪಿಗೆ ಮಾದರಿ

    ಲಿಂಗಸುಗೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಗುರಿ ಹೊಂದಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನಿರ್ದೇಶನ ನೀಡಿದ್ದು, ಗೆಲುವಿಗಾಗಿ ಕಾರ್ಯೋನ್ಮುಖರಾಗಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸೂಚಿಸಿದರು.

    ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಲಿಂಗಸುಗೂರು ಮತ್ತು ಮುದಗಲ್ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದು, ಲಿಂಗಸುಗೂರು ಕ್ಷೇತ್ರದಲ್ಲಿ ಅಲ್ಪ ಮತಗಳ ಅಂತರದಿಂದ ಡಿ.ಎಸ್.ಹೂಲಗೇರಿ ಪರಾಭವಗೊಂಡಿದ್ದಾರೆ. ಕ್ಷೇತ್ರದ ಜನತೆ ಕಾಂಗ್ರೆಸ್ ಪರವಾಗಿದ್ದಾರೆ ಎಂದರು.

    ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ನುಡಿದಂತೆ ನಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಯೋಜನೆಗಳು ಸುಳ್ಳು ಆಶ್ವಾಸನೆಯಾಗಿದ್ದು, ಇದರಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಹೇಳಿದ್ದರು. ಆದರೆ, ಪಂಚರಾಜ್ಯ ಚುನಾವಣೆಗಳಲ್ಲಿ ಕರ್ನಾಟಕ ಗ್ಯಾರಂಟಿ ಯೋಜನೆಗಳೇ ಬಿಜೆಪಿಯವರಿಗೆ ಮಾದರಿಯಾಗಿವೆ ಎಂದರು.

    ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ 17 ಸಾವಿರ ಕೋಟಿ ರೂ. ಬಿಡುಗಡೆ ಮಾಡಲು ಮನವಿ ಸಲ್ಲಿಸಿದ್ದರೂ ನಯಾ ಪೈಸೆ ಪರಿಹಾರ ನೀಡಿಲ್ಲ. ರಾಜ್ಯ ಸರ್ಕಾರ 900 ಕೋಟಿ ರೂ. ಬಿಡುಗಡೆ ಮಾಡಿದ್ದು, ಕುಡಿಯುವ ನೀರು ಹಾಗೂ ಇತರ ಮೂಲ ಸೌಕರ್ಯಕ್ಕೆ ಅನುದಾನ ಬಳಕೆ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಸಂಚರಿಸಿ ಜನರ ಸಂಕಷ್ಟ ಅರಿತು ಸರ್ಕಾರಕ್ಕೆ ವರದಿ ಸಲ್ಲಿಸುವ ಮೂಲಕ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಪಕ್ಷ ಸಂಘಟನೆಯಲ್ಲಿ ಯುವ ಜನತೆಯ ಪಾತ್ರ ಪ್ರಮುಖವಾಗಿದ್ದು, ಲಿಂಗಸುಗೂರು ಮತ್ತು ಮುದಗಲ್ ಬ್ಲಾಕ್ ಅಧ್ಯಕ್ಷರನ್ನಾಗಿ ಯುವಕರನ್ನು ನೇಮಕ ಮಾಡಲಾಗಿದೆ. ನೂತನ ಅಧ್ಯಕ್ಷರು ಪಕ್ಷದ ಹಿರಿಯರ ಮಾರ್ಗದರ್ಶನ ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಗ್ರಾಮೀಣ ಭಾಗದ ರೈತರು, ಬಡವರು, ಕೂಲಿ ಕಾರ್ಮಿಕರ ಸಂಕಷ್ಟ ಅರಿತು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರ ಗಮನಕ್ಕೆ ತಂದರೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಎನ್.ಎಸ್.ಬೋಸರಾಜು ತಿಳಿಸಿದರು.

    ಪ್ರಮುಖರಾದ ರವಿ ಪಾಟೀಲ್, ಟಿ.ಆರ್.ನಾಯ್ಕ, ಡಿ.ಜಿ.ಗುರಿಕಾರ, ಸಂಜೀವ ಕುಮಾರ ಕಂದಗಲ್, ದಾವೂದ್, ರುದ್ರಪ್ಪ ಬ್ಯಾಗಿ, ಶ್ರೀನಿವಾಸ ನಾಯಕ, ಕುಪ್ಪಣ್ಣ ಕವಿತಾಳ, ಲಿಂಗರಾಜ, ಅನೀಸ್ ಪಾಷಾ, ಗುಂಡಪ್ಪ ಸಾಹುಕಾರ, ಶಾಂತಪ್ಪ ಆನ್ವರಿ, ಮುನ್ವರ್ ಖಾನ್, ವಿಜಯಲಕ್ಷ್ಮೀ ದೇಸಾಯಿ, ಗುರುಬಾಯಿ, ಶ್ವೇತಾ ಮೇಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts