More

    ಕೊಪ್ಪ-ಶೃಂಗೇರಿ ಎಪಿಎಂಸಿ ವಿಲೀನ?

    
    
    ಕೊಪ್ಪ-ಶೃಂಗೇರಿ ಎಪಿಎಂಸಿ ವಿಲೀನ?

    ನಾಗರಾಜ್ ಎನ್. ದೇವಾಡಿಗ ಕೊಪ್ಪ

    1996ರಲ್ಲಿ ಆರಂಭವಾದ ಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು 2001ರಲ್ಲಿ ವಿಭಜನೆ ಮಾಡಿ ಶೃಂಗೇರಿಯಲ್ಲಿ ಪ್ರತ್ಯೇಕ ಎಪಿಎಂಸಿ ಅಸ್ತಿತ್ವಕ್ಕೆ ತರಲಾಗಿದ್ದು, ಈಗ ಮತ್ತೆ ಎರಡೂ ಎಪಿಎಂಸಿ ವಿಲೀನ ಪ್ರಯತ್ನ ನಡೆದಿದೆ.

    ವಿಭಜನೆ – ವಿಲೀನದ ಹಿಂದೆ ರೈತರ ಹಿತಕ್ಕಿಂತ ರಾಜಕೀಯ ಕಾರಣಗಳೇ ಪ್ರಮುಖವಾಗಿದ್ದು, ಪಕ್ಷದ ಕಾರ್ಯಕರ್ತರಿಗೆ ಸ್ಥಾನ ಕಲ್ಪಿಸಿ ಹಿಂಬಾಗಿಲ ಮೂಲಕ ಎಪಿಎಂಸಿ ಅಧಿಕಾರ ಹಿಡಿಯುವ ಪ್ರಯತ್ನಗಳೇ ಹಿಡನ್ ಅಜೆಂಡಾ ಎಂದು ಹೇಳಲಾಗುತ್ತಿದೆ.

    ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಎಪಿಎಂಸಿ ಎಂಬ ನೀತಿಯಂತೆ 1996ರಲ್ಲಿ ಕೊಪ್ಪದಲ್ಲಿ ಎಂಪಿಎಂಸಿ ಆರಂಭಿಸಲಾಗಿದ್ದು, ಆಗ ಜನತಾದಳದ ಮುಖಂಡ ಮೀಗಾ ಚಂದ್ರಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು.

    2001ರಲ್ಲಿ ಕೊಪ್ಪ ಎಪಿಎಂಸಿ ವಿಭಜನೆ ಮಾಡಿ ಶೃಂಗೇರಿಯಲ್ಲೂ ಪ್ರತ್ಯೇಕ ಎಪಿಎಂಸಿ ಆರಂಭಿಸಲಾಯಿತು. ಆಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಪಕ್ಷದ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಿ ಅಧಿಕಾರ ಹಿಡಿದಿತ್ತು.

    2003ರಲ್ಲಿ ಎರಡೂ ಎಪಿಎಂಸಿಗಳಿಗೆ ಚುನಾವಣೆ ನಡೆದಾಗ ಎರಡೂ ಕಡೆ ಕಾಂಗ್ರೆಸ್ ಬೆಂಬಲಿತರು ಬಹುಮತ ಗಳಿಸಿ ಮತ್ತೆ ಅಧಿಕಾರ ಹಿಡಿದಿದ್ದರು. 2011ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪ – ಶೃಂಗೇರಿ ಎಪಿಎಂಸಿಗಳನ್ನು ವಿಲೀನ ಮಾಡಿ ಕೊಪ್ಪದಲ್ಲಿ ಮುಂದುವರಿಸಲಾಗಿತ್ತು. ಆಗ ಚುನಾವಣೆ ಇಲ್ಲದೆ ನಾಮನಿರ್ದೇಶನ ಮಾಡಲಾಗಿದ್ದು, ಬಿಜೆಪಿ ಬೆಂಬಲಿತರು ಅಧಿಕಾರದ ಗದ್ದುಗೆ ಹಿಡಿದಿದ್ದರು.

    ಐದು ವರ್ಷಗಳ ನಂತರ ಮತ್ತೆ 2016ರಲ್ಲಿ ಕಾಂಗ್ರೆಸ್ ಸರ್ಕಾರ ಕೊಪ್ಪ ಎಂಪಿಎಂಸಿ ವಿಭಜನೆ ಮಾಡಿ ಶೃಂಗೇರಿಯನ್ನು ಪ್ರತ್ಯೇಕ ಮಾಡಿತು. ಪಕ್ಷದ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಿ ಅವರಿಗೆ ಅಧಿಕಾರದ ಸ್ಥಾನಮಾನ ಕಲ್ಪಿಸಲಾಯಿತು. 2018ರಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.

    ಈಗ ಮತ್ತೆ ಬಿಜೆಪಿ ಸರ್ಕಾರ ಕೊಪ್ಪ ಶೃಂಗೇರಿ ಎಪಿಎಂಸಿಗಳನ್ನು ವಿಲೀನ ಮಾಡಲು ಸಿದ್ಧತೆ ನಡೆಸಿದ್ದು, ಪಕ್ಷದ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡುವ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಮಕ್ಕಳ ಆಟವಾಯ್ತು: ಕೊಪ್ಪ-ಶೃಂಗೇರಿ ಎಪಿಎಂಸಿ ವಿಲೀನ ಮತ್ತು ವಿಭಜನೆ ಮಕ್ಕಳ ಆಟದಂತಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಭಜನೆ ಮಾಡಿದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಲೀನ ಮಾಡಲಾಗುತ್ತದೆ. ಈ ರೀತಿ ವಿಲೀನ ಮತ್ತು ವಿಭಜನೆ ಸಂದರ್ಭದಲ್ಲಿ ಚುನಾವಣೆ ಇಲ್ಲದೆ ನಾಮನಿರ್ದೇಶನ ಮಾಡಿ ಅಧಿಕಾರ ಹಿಡಿಯಲಾಗಿದೆ.

    ಕೊಪ್ಪದಲ್ಲಿ ಸ್ವಂತ ಕಚೇರಿ: ಕೊಪ್ಪದ ಬಾಳಗಡಿಯಲ್ಲಿ ಎಪಿಎಂಸಿ ಕಚೇರಿ ಹಾಗೂ ಗೋದಾಮು ನಿರ್ಮಾಣ ಮಾಡಲಾಗಿತ್ತು. ಆದರೆ ಶೃಂಗೇರಿಯಲ್ಲಿ ಎಪಿಎಂಸಿಗೆ ಸ್ವಂತ ಕಟ್ಟಡ ಇಲ್ಲ. ಶೃಂಗೇರಿ ಎಪಿಎಂಸಿಯಲ್ಲಿ ಮಾರುಕಟ್ಟೆ ಇಲ್ಲದೆ ಇರುವುದರಿಂದ ರೈತರು ಶಿವಮೊಗ್ಗದ ಎಪಿಎಂಸಿಯಲ್ಲಿ ವಹಿವಾಟು ನಡೆಸುತ್ತಾರೆ. ಕಳೆದ ಆರ್ಥಿಕ ವರ್ಷದದಲ್ಲಿ ಕೊಪ್ಪ ಎಪಿಎಂಸಿಯಲ್ಲಿ 1.96 ಕೋಟಿ ರೂ., ಶೃಂಗೇರಿ ಎಪಿಎಂಸಿಯಲ್ಲಿ 69 ಲಕ್ಷ ವಹಿವಾಟು ನಡೆದಿದೆ. ಈಗ ಸರ್ಕಾರ ಕಾಯ್ದೆಗೆ ತಿದ್ದುಪಡಿಯನ್ನು ತಂದಿದ್ದು. ಎಪಿಎಂಸಿ ಆದಾಯ ಇನ್ನೂ ಕಡಿಮೆಯಾಗಲಿದೆ.

    ಕಾಂಗ್ರೆಸ್, ಬಿಜೆಪಿ ಸಮರ್ಥನೆ: ಶೃಂಗೇರಿ ಎಪಿಎಂಸಿ ಬಾಡಿಗೆ ಕಟ್ಟಡದಲ್ಲಿದ್ದು, ತಿಂಗಳಿಗೆ ಅಂದಾಜು 75 ಸಾವಿರ ರೂ. ಹೊರೆಯಾಗುತ್ತದೆ. ವಿಲೀನ ಮಾಡಿದರೆ ಶೃಂಗೇರಿ ಎಪಿಎಂಸಿ ಕಚೇರಿ ವೆಚ್ಚ ಉಳಿಸಬಹುದು ಎಂಬುದು ಬಿಜೆಪಿ ಮುಖಂಡರ ವಾದ. ಕೊಪ್ಪ ಮತ್ತು ಶೃಂಗೇರಿಯಲ್ಲಿ ಪ್ರತ್ಯೇಕ ಎಪಿಎಂಸಿ ಇದ್ದರೆ ರೈತರಿಗೆ ಅನುಕೂಲ ಎಂಬುದು ಕಾಂಗ್ರೆಸ್ ವಾದ.

    ಆಡಳಿತ ದೃಷ್ಟಿಯಿಂದ ವಿಲೀನ ಒಳ್ಳೆಯದು: ಆಡಳಿತ ದೃಷ್ಟಿಯಿಂದ ಕೊಪ್ಪ ಮತ್ತು ಶೃಂಗೇರಿ ಎಪಿಎಂಸಿಗಳ ವಿಲೀನ ಒಳ್ಳೆಯದು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಪ್ಪ ಎಪಿಎಂಸಿ ವಿಭಜನೆ ಮಾಡಿ ಶೃಂಗೇರಿಯಲ್ಲಿ ಪ್ರತ್ಯೇಕ ಎಪಿಎಂಸಿ ಮಾಡಿದ್ದರು. ಆಗ ಇಬ್ಬರು ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು ಸೇರಿ 30 ನಿರ್ದೇಶಕರನ್ನು ನಾಮನಿರ್ದೇಶನ ಮಾಡಿದ್ದರು. ಎಪಿಎಂಸಿ ವಿಭಜನೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡುವ ಉದ್ದೇಶವಿತ್ತೇ ಹೊರತು ರೈತರ ಏಳಿಗೆ ಬೇಕಾಗಿರಲಿಲ್ಲ. ಕಾಂಗ್ರೆಸ್ ಮಾಡಿದ್ದ ತಪ್ಪನ್ನು ಈಗ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts