More

    ರಾಹುಲ್ ಗಾಂಧಿ ಅನರ್ಹತೆ ಖಂಡನೀಯ

    ಬಳ್ಳಾರಿ: ಕಾಂಗ್ರೆಸ್ ನಾಯಕ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಎರಡು ವರ್ಷ ಸಜೆ ಮತ್ತು ಅವರ ಸಂಸತ್ ಸದಸ್ಯ ಸ್ಥಾನ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ನಗರದ ಸುಧಾಕ್ರಾಸ್ ಹತ್ತಿರ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್ ಮಾತನಾಡಿ, ಬಿಜೆಪಿ ಸರ್ಕಾರ ಸತ್ಯ ಹೇಳುವ ಬಾಯಿಯನ್ನು ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ. 2 ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ತೆಗೆದುಕೊಂಡು ರಾಹುಲ್‌ಗಾಂಧಿ ಅವರ ಸದಸ್ಯತ್ವ ಅನರ್ಹಗೊಳಿಸಿದೆ. ಇದು ರಾಹುಲ್‌ಗಾಂಧಿಗೆ ಆದ ಅವಮಾನವಲ್ಲ, ಬದಲಾಗಿ ಸಂವಿಧಾನಕ್ಕೆ ಆದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಭಾರತವನ್ನು ಕೊಳ್ಳೆ ಹೊಡೆದ ಅದಾನಿ, ಅಂಬಾನಿ ಅವರ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಕಷ್ಟ ಆಗುತ್ತದೆ. ಜತೆಗೆ ಬಿಜೆಪಿ ಸರ್ಕಾರ ಯಾರು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾರೆ ಮತ್ತು ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೊ ಅವರ ವಿರುದ್ಧ ಕೇಸ್ ದಾಖಲಿಸಿ ಅವರನ್ನು ಜೈಲಿಗೆ ಕಳಿಸುವ ಕೆಲಸ ಮಾಡುತ್ತದೆ.

    ಈ ರೀತಿ ಮಾಡಲು ಬಿಜೆಪಿಗೆ ನಾಚಿಕೆಯಾಗಬೇಕು. ಚುನಾವಣೆ ಹತ್ತಿರವಿರುವುದನ್ನು ನೋಡಿ ಅವರು ಈ ರೀತಿ ಮಾಡಿರುವುದು ಸರಿಯಲ್ಲ. ತಕ್ಷಣ ಸರ್ಕಾರ ರಾಹುಲ್ ಗಾಂಧಿಗೆ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಹಿಂಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ರಾಜ್ಯ ಪ್ರಚಾರ ಕಾಂಗ್ರೆಸ್ ಸಮಿತಿಯ ಜಂಟಿ ಸಂಯೋಜಕ ವೆಂಕಟೇಶ್‌ಹೆಗಡೆ, ಮಾಜಿ ಮೇಯರ್ ಗುರ‌್ರಂ ವೆಂಕಟರಮಣ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಂತಿ ನೋಹ ವಿಲ್ಸನ್, ಡಿ.ಆಯಾಜ್ ಅಹಮ್ಮದ್, ಕಾರ್ಯದರ್ಶಿಗಳಾದ ಜಿ.ಎಸ್.ಈರನ ಗೌಡ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ವೆಂಕಟಲಕ್ಷ್ಮೀ ನಾರಾಯಣ, ಅರ್ಷದ್ ಅಹಮ್ಮದ್ ಗನಿ, ಕೆ.ತಾಯಪ್ಪ, ಸರಗು ನಾಗರಾಜ್, ಮಿಂಚು ಸೀನಾ ಹಾಜರಿದ್ದರು.


    ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ವಿರೋಧ ಪಕ್ಷ ಇದ್ದರೆ ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ಹಿಡಿಯಲು ಸಾಧ್ಯ. ಆದರೆ ಬಿಜೆಪಿ ಸರ್ಕಾರ ಅವರ ತಪ್ಪುಗಳನ್ನು ಪ್ರಶ್ನೆ ಮಾಡಿದವರಿಗೆ ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದೆ. ಯಾವುದೇ ಕೋರ್ಟ್ ಒಬ್ಬ ವ್ಯಕ್ತಿಗೆ ಶಿಕ್ಷೆ ನೀಡಬೇಕಾದರೆ ಒಂದು ತಿಂಗಳಾದರೂ ಗಡುವು ನೀಡುತ್ತದೆ. ಆದರೆ ಇಲ್ಲಿ ನಡೆದಿರುವುದು ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವ ಕೆಲಸ.
    ಕಲಕಂಬ ಪಂಪಾಪತಿ, ಕೆಪಿಸಿಸಿ ಮಾಜಿ ಸದಸ್ಯ

    ರಾಹುಲ್ ಗಾಂಧಿ ಅವರನ್ನು ಅನರ್ಹತೆಗೊಳಿಸಿರುವುದು ಕಾಂಗ್ರೆಸ್‌ಗೆ ಹಿನ್ನಡೆಯಲ್ಲ ಬದಲಾಗಿ ಬಿಜೆಪಿಗೆ ಹಿನ್ನಡೆಯಾಗಿದೆ. ದೇಶದ ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ರಾಹುಲ್‌ಗಾಂಧಿ ಅವರ ಸ್ಥಾನವನ್ನು ಅನರ್ಹಗೊಳಿಸಿರುವುದು ಖಂಡನೀಯ. ಅದಕ್ಕೆ ಜನರು ಬರುವ ಚುನಾವಣೆ ಫಲಿತಾಂಶದ ಮೂಲಕ ಉತ್ತರ ನೀಡಲಿದ್ದಾರೆ.
    ಅಲ್ಲಂ ಪ್ರಶಾಂತ್, ಜಿಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts