More

    ಹೊಸ ಸಂದೇಶ ಸಾರಿದ ಕಾಂಗ್ರೆಸ್ ಸಮಾವೇಶ

    ಚಿತ್ರದುರ್ಗ: ನಗರದಲ್ಲಿ ಜ.8 ರಂದು ನಡೆದ ರಾಜ್ಯಮಟ್ಟದ ಎಸ್‌ಸಿ, ಎಸ್‌ಟಿ ಸಮಾವೇಶದ ಮೂಲಕ ದೇಶಕ್ಕೆ ಕಾಂಗ್ರೆಸ್ ಹೊಸ ಸಂದೇಶವನ್ನು ಸಾರಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದುರ್ಗದಲ್ಲಿ ಹಿಂದೆಂದೂ ಇಂಥ ಸಮಾವೇಶ ನಡೆದಿರಲಿಲ್ಲ. ಕೆಳಸ್ತರದ, ತುಳಿತಕ್ಕೆ ಒಳಗಾದ ಸಮುದಾಯ ಕಾಂಗ್ರೆಸ್ ಜತೆ ಹಿಂದಿನಿಂದಲೂ ಇತ್ತು. ಆದರೆ ಈಚೆಗೆ ಬೇರೆಡೆ ಸಾಗಿದ್ದವರನ್ನು ಕಾಂಗ್ರೆಸ್ಸಿಗೆ ಮರಳಿ ಕರೆತರಬೇಕು. 101 ಜಾತಿಗಳಿರುವ ಎಸ್‌ಸಿ ಹಾಗೂ 52 ಜಾತಿಗಳಿರುವ ಎಸ್‌ಟಿ ಸಮುದಾಯ ಒಂದಾಗಿ ಸಾಗಿದರೆ ಶಿಕ್ಷಣ, ಆರ್ಥಿಕ, ಸಾಮಾಜಿಕ ಪ್ರಗತಿ, ದೌರ್ಜನ್ಯಗಳ ನಿಯಂತ್ರಣ ಹಾಗೂ ಸಮಾನತೆಯ ಬದುಕು ಸಾಧ್ಯವಾಗಲಿದೆ.

    ಆಳುವ ಪಕ್ಷಗಳು ಇನ್ನೆಂದಿಗೂ ನಮ್ಮನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ದುರ್ಗದ ಸಮಾವೇಶ ಸಾರಿದೆ. 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾವೇಶದಲ್ಲಿ ಮಂಡಿಸಿದ 10 ಘೋಷಣೆಗಳನ್ನು ಈಡೇರಿಸಲು ಆದ್ಯತೆ ನೀಡಲಿದೆ. ನ್ಯಾ.ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗದಂತೆ ಕಾಂಗ್ರೆಸ್ ಹೆಜ್ಜೆ ಇರಿಸಲಿದೆ ಎಂದು ಹೇಳಿದರು.

    ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿ, ಸಮುದಾಯಗಳಲ್ಲಿ ಒಡಕಿದೆ ಎಂಬ ಮಾತುಗಳಿಗೆ ಸಮಾವೇಶ ಉತ್ತರ ನೀಡಿ ದೆ. ಬಿಜೆಪಿಯ ನಿಷ್ಕ್ರಿಯ, ಭ್ರಷ್ಟಾಚಾರ ಹಾಗೂ ಕೋಮುವಾದ ಆಡಳಿತದಿಂದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕರ್ನಾಟಕ ಹಾಗೂ ದೇಶದ ಅಭಿವೃದ್ಧಿ 20 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಲೇವಡಿ ಮಾಡಿದರು.

    ಕೋಮುವಾದ, ಬಂಡವಾಳಶಾಹಿ ಆಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ. ಧರ್ಮ, ರಾಜಕಾರಣವನ್ನು ನಿರ್ದೇಶಿಸಿದರೆ ಸಂವಿಧಾನದ ಆ ಶಯಗಳು ದುರ್ಬಲವಾಗುತ್ತವೆ. ಸಂವಿಧಾನದ ತಂಟೆಗೆ ಬಂದರೆ ಸುಮ್ಮನೆ ಇರಲಾಗದೆಂಬ ಸಂದೇಶವನ್ನು ಸಮಾವೇಶ ಸಾರಿದೆ ಎಂದರು.
    ಸಮಾವೇಶಕ್ಕೆ ಎಐಸಿಸಿ ನಾಯಕರಾದ ರಾಹುಲ್‌ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಬಾರದಿರುವುದು ನಿರಾಶೆ ತರಿಸಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
    ರಕ್ತಪಾತವಾದೀತು

    ಸಂವಿಧಾನವನ್ನು ಮುಟ್ಟಿದರೆ ರಕ್ತಪಾತವಾದೀತು ಎಂಬ ಸಂದೇಶವನ್ನು ಸಮಾವೇಶ ನಾಡಿಗೆ ಸಾರಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು. ಬೆಂಗಳೂರಲ್ಲಿ ಜ.16 ರಂದು ಪ್ರಿಯಾಂಕಗಾಂಧಿ ನೇತೃತ್ವದಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶ ಆಯೋಜಿಸಿದೆ ಎಂದರು.
    ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕ ಟಿ.ರಘುಮೂರ್ತಿ, ಮಾಜಿ ಎಂಲ್‌ಸಿ ರಘುಆಚಾರ್, ಎಂ.ಕೆ.ತಾಜ್‌ಪೀರ್, ಹನುಮಲಿ ಷಣ್ಮುಖಪ್ಪ, ಹಾಲಸ್ವಾಮಿ, ಸಂಪತ್, ಟಿ.ಅಂಜಿನಪ್ಪ, ಮುರಳೀಧರ ಹಾಲಪ್ಪ, ಕೇಶವಮೂರ್ತಿ, ಜಿ.ಎಸ್.ಮಂಜುನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts