More

    ಮತದಾರರಿಗೆ ಹಂಚಲು ಬ್ರೇಕ್‌ಫಾಸ್ಟ್ ಸೆಟ್ ತರಿಸಿದ ಕಾಂಗ್ರೆಸ್?: ಅಮೃತೂರು ಗೋದಾಮಿನ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ

     ಕುಣಿಗಲ್:  ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಮತದಾರರನ್ನು ಸೆಳೆಯಲು ಅಕ್ರಮವಾಗಿ ಬ್ರೇಕ್‌ಾಸ್ಟ್ ಸೆಟ್ ಹಂಚುತ್ತಿದ್ದಾರೆ ಎಂದು ಆರೋಪಿಸಿದ ಜೆಡಿಎಸ್ ಕಾರ್ಯಕರ್ತರು ವಾಣಿಜ್ಯ ತೆರಿಗೆ ಅಧಿಕಾರಿಗಳ ಜತೆ ಗೋದಾಮಿನ ಮೇಲೆ ದಾಳಿ ನಡೆಸಿರುವುದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

    ಅಮೃತೂರು ಮೂಡಲಗಿರಿ ಹಾಗೂ ಚೆನ್ನಪ್ಪ ಎಂಬುವವರ ಗೋದಾಮಿನಲ್ಲಿ ಹರಿಯಾಣದಿಂದ ಎರಡು ಕಂಟೇನೈರ್‌ನಿಂದ ಬಾಕ್ಸ್‌ಗಳನ್ನು ಕೆಳಗಿಳಿಸುವಾದ ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಎನ್.ಜಗದೀಶ್ ನೇತೃತ್ವದಲ್ಲಿ ಕಾರ್ಯಕರ್ತರು ದಾಳಿ ನಡೆಸಿದರು.

    ಮತದಾರರಿಗೆ ಹಂಚಲು ಬ್ರೇಕ್‌ಫಾಸ್ಟ್ ಸೆಟ್ ತರಿಸಿದ ಕಾಂಗ್ರೆಸ್?: ಅಮೃತೂರು ಗೋದಾಮಿನ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ
    ಬಿಲ್ ಪರೀಶಿಲನೆ ನಡೆಸುತ್ತಿರುವ ವಾಣಿಜ್ಯ ತೆರಿಗೆ ಇಲಾಖೆಯ ನಾಗರಾಜು.

    ಇದೇ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಎಸಿ ನಾಗರಾಜು ನೇತೃತ್ವದ ಅಧಿಕಾರಿಗಳ ತಂಡ ಕೂಡ ಪರಿಶೀಲನೆ ನಡೆಸಿತು. ಕುಣಿಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಹಾಗೂ ಚೇತನ್ ಎಂಬುವವರ ಹೆಸರಿನಲ್ಲಿ ಬಿಲ್ ಇದ್ದು ಅಧಿಕಾರಿಗಳು ಕೈಚೆಲ್ಲಿ ವಾಪಸಾಗಿರುವುದು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿತು. ಗೋದಾಮು ಪರಿಶೀಲನೆ ನಡೆಸಬೇಕು ಎಂದು ಹಠಹಿಡಿದ ಜೆಡಿಎಸ್ ಕಾರ್ಯಕರ್ತರು ಹಾಗೂ ಅದನ್ನು ತಡೆದ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಹರಸಾಹಸಪಟ್ಟರು.

    ಮತದಾರರಿಗೆ ಆಮಿಷ ತೋರಿಸಿ ಸೆಳೆಯಲು ಶಾಸಕ ಎಚ್.ಡಿ.ರಂಗನಾಥ್ ಕೀಳುಮಟ್ಟದ ಕೆಲಸ ಆರಂಭಿಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ದೂರಿದರು. ಕರೊನಾ ಸಂದರ್ಭದಲ್ಲಿ ಹಣ್ಣು, ತರಕಾರಿ ಹಂಚುವಾಗ ಬರದವರು ಈಗ ತಡೆಯಲು ಬಂದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಿರುಗೇಟು ನೀಡಿದ್ದು ಎರಡೂ ಗುಂಪುಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು.

    ಇತ್ತೀಚೆಗಷ್ಟೇ ಪಟ್ಟಣದ ವಾರ್ಡ್‌ವೊಂದರಲ್ಲಿ ಕುಕ್ಕರ್, ತವಾ ಹಂಚಲು ಬಂದಿದ್ದ ಶಾಸಕ ಎಚ್.ಡಿ.ರಂಗನಾಥ್‌ಗೆ ಜನರೇ ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.

    ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಮತದಾರರಿಗೆ ಆಮಿಷ ವೊಡ್ಡಲು ತಾಲೂಕಿನ ಸಾಕಷ್ಟು ಕಡೆ ಹೀಗೇ ಸಂಗ್ರಹಿಸಿದ್ದಾರೆ, ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ, ಜನರನ್ನು ಸೆಳೆಯಲು ಕೀಳುಮಟ್ಟದ ಕೆಲಸಕ್ಕಿಳಿದಿದ್ದಾರೆ.
    |ಬಿ.ಎನ್.ಜಗದೀಶ್ ಜೆಡಿಎಸ್ ತಾಲೂಕು ಅಧ್ಯಕ್ಷ

    ಗೋದಾಮಿನಲ್ಲಿ ಸಂಗ್ರಹಿಸಿದ್ದ ವಸ್ತುಗಳ ಬಿಲ್ ನೀಡಿದ್ದು ಎಲ್ಲವೂ ಸರಿಯಾಗಿದೆ. ರಾತ್ರಿ ಎಂಬ ಕಾರಣಕ್ಕೆ ಪರಿಶೀಲಿಸಲು ಸಾಧ್ಯವಾಗಿಲ್ಲ. ಬೆಳಗ್ಗೆ ತಪಾಸಣೆ ನಡೆಸುತ್ತೇವೆ. ಗೋದಾಮು ಪರವಾನಗಿ ಇಲ್ಲ ಎಂದು ದೂರು ನೀಡಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ.
    ನಾಗರಾಜು ಎಸಿ, ವಾಣಿಜ್ಯ ತೆರಿಗೆ ಇಲಾಖೆ. ನಿಯಮಾನುಸಾರ ವಸ್ತುಗಳನ್ನು ಕೊಂಡು ತಂದಿದ್ದೇವೆ, ಜಿಎಸ್‌ಟಿ ಬಿಲ್ ಕೂಡ ನೀಡಿದ್ದೇವೆ. ಶಾಸಕರ ಕೆಲಸಗಳನ್ನು ನೋಡಿ ಸಹಿಸಲಾಗದೆ ಜೆಡಿಎಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ.
    |ರಂಗಣ್ಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts