More

    ನವಲಗುಂದದಲ್ಲಿ ಕಾಂಗ್ರೆಸ್-ಬಿಜೆಪಿ ದೋಸ್ತಿ

    ನವಲಗುಂದ: ನವಲಗುಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ, ಕಾಂಗ್ರೆಸ್​ಗೆ ಬದ್ಧ ವೈರಿಯಾದ ಬಿಜೆಪಿ ಬೇಷರತ್ ಬೆಂಬಲ ನೀಡಿ ಅಚ್ಚರಿ ಮೂಡಿಸಿದೆ.

    ಜೆಡಿಎಸ್​ಅನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಪುರಸಭೆಯ ಬಿಜೆಪಿ-ಕಾಂಗ್ರೆಸ್ ಸದಸ್ಯರು ಕೈ ಜೋಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

    ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದಾರೆ. ಈ ಪೈಕಿ 7 ಕಾಂಗ್ರೆಸ್, 6 ಬಿಜೆಪಿ, 9 ಜೆಡಿಎಸ್ ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಬಹುಮತ ಸಾಧಿಸಲು 13 ಸದಸ್ಯರ ಬೆಂಬಲದ ಅಗತ್ಯವಿತ್ತು.

    ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಒಂದಾಗುತ್ತವೆ ಎಂದು ಭಾವಿಸಲಾಗಿತ್ತು. ಜೆಡಿಎಸ್ ಅತಿದೊಡ್ಡ ಪಕ್ಷವಾಗಿದ್ದು, ಒಬ್ಬ ಪಕ್ಷೇತರ ಸದಸ್ಯರ ಒಲವನ್ನೂ ಸಂಪಾದಿಸಿಕೊಂಡಿದೆ. ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೆ ಸೇರಿದಂತೆ ಸಂದಭೋಚಿತ ಹೊಂದಾಣಿಕೆಗೆ ಜೆಡಿಎಸ್ ಸಿದ್ಧವಿತ್ತು. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಬಹಿರಂಗವಾಗಿಯೇ ಇದನ್ನು ಹೇಳಿಕೊಂಡಿದ್ದರು. ಆದರೆ, ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ದಿನವಾದ ಬುಧವಾರ ಅಚ್ಚರಿ ಬೆಳವಣಿಗೆ ನಡೆಯಿತು.

    ಬಿಜೆಪಿಯ 6 ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ಪುರಸಭೆಯ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್​ನ ಮಂಜುನಾಥ ಜಾಧವ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷೆಯಾಗಿ ಖೈರುನ್ನಬಿ ನಾಶಿಪುಡಿ ಚುನಾಯಿತರಾಗಿದ್ದಾರೆ.

    ಕಾಂಗ್ರೆಸ್-ಬಿಜೆಪಿ ಮೈತ್ರಿ ಮಾತು ಕೆಲ ದಿನಗಳಿಂದ ಕೇಳಿಬಂದಿತ್ತು. ಆದರೆ, ಪಕ್ಷದ ರಾಜ್ಯ ಮುಖಂಡರ ಸೂಚನೆಯಂತೆ ನಡೆದುಕೊಳ್ಳಬೇಕು. ಬಿಜೆಪಿಯೊಂದಿಗೆ ಯಾವುದೇ ಕಾರಣಕ್ಕೂ ಕೈಜೋಡಿಸಬಾರದು ಎಂದು ಪುರಸಭೆ ಸದಸ್ಯರು ಹಾಗೂ ನವಲಗುಂದದ ಪ್ರಮುಖರಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

    ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸದಸ್ಯರಿಗೆ ವಿಪ್ ಸಹ ನೀಡಲಾಗಿತ್ತು. ಆದರೆ ಬಯಸದೇ ಬಂದ ಭಾಗ್ಯದಂತೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಮಯದಲ್ಲಿ ಬಿಜೆಪಿಯ 6 ಸದಸ್ಯರು ಕೈ ಎತ್ತುವ ಮೂಲಕ ಕಾಂಗ್ರೆಸ್​ಗೆ ಬೆಂಬಲ ವ್ಯಕ್ತಪಡಿಸಿದರು.

    ಪುರಸಭೆ ಕಾಂಗ್ರೆಸ್ ಸದಸ್ಯರು ಜೆಡಿಎಸ್​ನೊಂದಿಗೆ ಹೊಂದಾಣಿಕೆಗೆ ಹಿಂದೇಟು ಹಾಕಿದ್ದರಿಂದ ಕಾಂಗ್ರೆಸ್​ಗೆ ಪ್ರತಿಪಕ್ಷ ಸ್ಥಾನ ಖಚಿತ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಕಾಂಗ್ರೆಸ್-ಬಿಜೆಪಿ ಗುಪ್ತ ತಂತ್ರಗಾರಿಕೆ ಎಲ್ಲ ಲೆಕ್ಕಾಚಾರವನ್ನೂ ತಲೆಕೆಳಗಾಗಿಸಿದವು.

    ಪುರಸಭೆಯಲ್ಲಿ ನಡೆದ ರಾಜಕೀಯವು ಜಿಲ್ಲಾ ಮಟ್ಟದ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಮೂಡಿಸಿದೆ. ಮೈತ್ರಿಗೆ ಕಾರಣರಾದವರನ್ನು ಕಂಡುಹಿಡಿದು ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಕೆಪಿಸಿಸಿಗೆ ಪತ್ರ ಬರೆಯುವುದಾಗಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

    ಕಾಂಗ್ರೆಸ್​ನ ಮಂಜು ಜಾಧವ ಮತ್ತು ಖೈರುನ್ನಬಿ ನಾಶಿಪುಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್​ನಿಂದ ಪ್ರಕಾಶ ಶಿಗ್ಲಿ ಹಾಗೂ ಹುಸೇನಬಿ ಧಾರವಾಡ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್​ಗೆ 13 ಮತಗಳು ಲಭಿಸಿದ್ದರಿಂದ ಪುರಸಭೆ ಕಾಂಗ್ರೆಸ್ ವಶವಾಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನವೀನ ಹುಲ್ಲೂರ ಕಾರ್ಯನಿರ್ವಹಿಸಿದರು.

    ನವಲಗುಂದ ಪುರಸಭೆ ಚುನಾವಣೆಯಲ್ಲಿ ನಾವು ಬಿಜೆಪಿ ಬೆಂಬಲ ಕೇಳಿಲ್ಲ. ಆ ಪಕ್ಷದ ಸದಸ್ಯರು ಯಾವ ಕಾರಣಕ್ಕೆ ಬೆಂಬಲ ಸೂಚಿಸಿದರೆಂದು ಗೊತ್ತಿಲ್ಲ. ಸಂಪೂರ್ಣ ಅವಧಿಯವರೆಗೆ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸಲಿದೆ.

    | ಅನಿಲ ಪಾಟೀಲ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲ ಪಡೆಯುವ ಮೂಲಕ ಸ್ಥಳೀಯ ಕಾಂಗ್ರೆಸ್ ಮುಖಂಡರು ಆ ಪಕ್ಷದ ವರಿಷ್ಠರ ನಿರ್ಧಾರವನ್ನು ಉಲ್ಲಂಘಿಸಿದ್ದಾರೆ. ಇದೊಂದು ಅಪವಿತ್ರ ಮೈತ್ರಿ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದರೆ, ನವಲಗುಂದ ಪುರಸಭೆಯಲ್ಲಿ ಮಾತ್ರ ಕೈ ಜೋಡಿಸಿದೆ.

    | ಬಿ.ಬಿ. ಗಂಗಾಧರಮಠ, ಜೆಡಿಎಸ್ ಜಿಲ್ಲಾಧ್ಯಕ್ಷ

    ಪಟ್ಟಣದ ಅಭಿವೃದ್ಧಿಗಾಗಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. 15 ತಿಂಗಳ ನಂತರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಹಾಗೂ ಈಗಿನ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ನೀಡಬೇಕೆಂದು ಒಪ್ಪಂದವಾಗಿದೆ.

    | ಅಪ್ಪಣ್ಣ ಬಾಗಿ, ಬಿಜೆಪಿ ನವಲಗುಂದ ನಗರ ಘಟಕದ ಅಧ್ಯಕ್ಷ

    ಬಿಜೆಪಿಯೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿಲ್ಲ

    ಹುಬ್ಬಳ್ಳಿ: ನವಲಗುಂದ ಪುರಸಭೆಯಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಸದಸ್ಯರು ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೂ ಅವರು ನಮಗೆ ಏಕೆ ಬೆಂಬಲಿಸಿದರೋ ಗೊತ್ತಿಲ್ಲ. ಪುರಸಭೆ ಚುಕ್ಕಾಣಿ ಹಿಡಿದಿರುವುದು ಬಯಸದೇ ಬಂದ ಭಾಗ್ಯ ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ನವಲಗುಂದ ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಜೆಡಿಎಸ್​ನೊಂದಿಗೆ ಹೊಂದಾಣಿಕೆಗೆ ಹಿಂಜರಿದರು. ಹೀಗಾಗಿ ಪ್ರತಿಪಕ್ಷದಲ್ಲಿ ಕೂಡಲು ಸಿದ್ಧರಾಗಿದ್ದೆವು. ಆದರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಸದಸ್ಯರ ನಾಮಪತ್ರ ಸಲ್ಲಿಸಿದ್ದೆವು. ಬಿಜೆಪಿ ಬೆಂಬಲ ಅನಿರೀಕ್ಷಿತ ಎಂದರು.

    ಬಿಜೆಪಿಯೊಂದಿಗೆ ಕಾಂಗ್ರೆಸ್ 15 ತಿಂಗಳ ಒಪ್ಪಂದ ಮಾಡಿಕೊಂಡಿದೆ ಎಂಬುದು ಸತ್ಯಕ್ಕೆ ದೂರವಾದದ್ದು. ಸಂಪೂರ್ಣ ಅವಧಿಯವರೆಗೆ ಕಾಂಗ್ರೆಸ್ ಆಡಳಿತ ನಡೆಸಲಿದೆ. ಬಿಜೆಪಿಗೆ ಅಧಿಕಾರ ಬಿಟ್ಟುಕೊಡುವ ಸಾಧ್ಯತೆ ಇಲ್ಲ ಎಂದು ಹೇಳಿದರು.

    ಕಾಂಗ್ರೆಸ್​ನದ್ದು ಜಾತ್ಯಾತೀತ ನಿಲುವು. ಹೀಗಾಗಿ ಬಿಜೆಪಿಯೊಂದಿಗೆ ಕೈ ಜೋಡಿಸುವ ಮಾತೇ ಇಲ್ಲ. ಆದರೆ, ಅಳ್ನಾವರ ಪುರಸಭೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಿದೆ. ಅಲ್ಲಿ ಮೂವರು ಸದಸ್ಯರಿರುವ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟಿದೆ. ಜೆಡಿಎಸ್​ನವರು ಸಹ ಜಾತ್ಯಾತೀತ ನಿಲುವಿನವರೆಂದು ಹೇಳಿಕೊಳ್ಳುತ್ತಾರೆ. ಆದರೆ ಬಿಜೆಪಿಯೊಂದಿಗೆ ಕೈ ಜೋಡಿಸುವ ಮೂಲಕ ತಮ್ಮಲ್ಲಿನ ಗೊಂದಲ ಬಹಿರಂಗಗೊಳಿಸಿದ್ದಾರೆ. ಇಡಿ ಜಿಲ್ಲೆಗೆ ಒಂದೇ ನಿಲುವನ್ನು ಜೆಡಿಎಸ್ ತಾಳಬೇಕು ಎಂದು ಸಲಹೆ ನೀಡಿದರು.

    ನವಲಗುಂದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯೊಂದಿಗೆ ಯಾವುದೇ ಸಭೆ ನಡೆಸಿಲ್ಲ. ಆದರೆ ಈ ಒಪ್ಪಂದಕ್ಕೆ ನವಲಗುಂದದ ಕಾಂಗ್ರೆಸ್​ನ ಕೆಲ ಹಿರಿಯ ಮುಖಂಡರು ಕಾರಣವಾಗಿರುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು.

    ಧಾರವಾಡ ಜಿಪಂ ಉಪಾಧ್ಯಕ್ಷ ಶಿವನಾಂದ ಕರಿಗಾರ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts