More

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಸ್ಪಿಎಂ ಹೆಸರು ; ಎರಡನೇ ಹಂತದ ನಾಯಕತ್ವದ ಕೊರತೆ ; ಸಭೆಗೆ ಗೈರಾಗಿದ್ದ ಮುದ್ದಹನುಮೇಗೌಡ ; ಕುಣಿಗಲ್ ಸ್ಪರ್ಧೆ ತಪ್ಪಿಸಲು ಹುನ್ನಾರ?

    ತುಮಕೂರು : ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ಬಲ ತುಂಬುವ ಉದ್ದೇಶದಿಂದ ಜಿಲ್ಲಾಧ್ಯಕ್ಷರ ಬದಲಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚಟುವಟಿಕೆ ಗರಿಗೆದರಿದ್ದು ಹಿರಿಯ ಮುಖಂಡರು ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಶನಿವಾರ ಮಹತ್ವದ ಸಭೆ ನಡೆಸಿದ್ದಾರೆ.

    30 ತಿಂಗಳಿಂದ ಪಕ್ಷದ ಮುಂಚೂಣಿಯಲ್ಲಿರುವ ಪ್ರಮುಖರೇ ಈಗಲೂ ಸಭೆ ನಡೆಸುತ್ತಿದ್ದು, ಎರಡನೇ ತಲೆಮಾರಿನ ನಾಯಕತ್ವದ ಅಭಾವ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎದುರಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವವರನ್ನು ಹೊರತುಪಡಿಸಿ ಜಿಲ್ಲಾಧ್ಯಕ್ಷರ ನೇಮಕವಾಗಲಿ ಎಂಬ ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.

    ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದು ಜಿಲ್ಲಾಧ್ಯಕ್ಷ ಸ್ಥಾನವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಪ್ರತಿ ಹಳ್ಳಿಯ ಪರಿಚಯವಿರುವ, ಎಲ್ಲೆಡೆಯೂ ಬೆಂಬಲಿಗರನ್ನು ಹೊಂದಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನೇ ಮತ್ತೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಪ್ಪಿಸಲು ತೀರ್ಮಾನಿಸಿದ್ದಾರೆ.

    ಕಾಂಗ್ರೆಸ್ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಎಸ್ಪಿಎಂ ಶನಿವಾರದ ಸಭೆಗೂ ಗೈರಾಗಿದ್ದು ಜಿಲ್ಲಾಧ್ಯಕ್ಷ ಸ್ಥಾನ ಒಪ್ಪುವುದು ಅನುಮಾನ ಎಂದು ಸಭೆಯಲ್ಲಿಯೇ ಮುಖಂಡರ ನಡುವೆ ಚರ್ಚೆಯಾಗಿದೆ. ಅವರು ಒಪ್ಪದಿದ್ದರೆ ಒಮ್ಮತದ ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ಡಾ.ಜಿ.ಪರಮೇಶ್ವರ್‌ಗೆ ವಹಿಸಲಾಗಿದೆ.
    ಸಂಸದ ಡಿ.ಕೆ.ಸುರೇಶ್, ಶಾಸಕರಾದ ವೆಂಕಟರಮಣಪ್ಪ, ಡಾ.ಎಚ್.ಡಿ.ರಂಗನಾಥ್, ಮುಖಂಡರಾದ ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಡಾ.ರಫೀಕ್‌ಅಹ್ಮದ್, ಷಫಿಅಹ್ಮದ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆ.ಷಡಕ್ಷರಿ, ಆರ್.ನಾರಾಯಣ ಭಾಗವಹಿಸಿದ್ದರು.

    ಅನ್ಯಪಕ್ಷದ ಮುಖಂಡರಿಗೆ ಗಾಳ: ಎರಡನೇ ತಲೆಮಾರಿನ ನಾಯಕತ್ವದ ಕೊರತೆ ಎದುರಿಸುತ್ತಿರುವ ಜಿಲ್ಲಾ ಕಾಂಗ್ರೆಸ್ ಮುಖಂಡರು ಶನಿವಾರದ ಸಭೆಯಲ್ಲಿಯೂ ಕೊರತೆ ಇರುವ ಕ್ಷೇತ್ರಗಳಲ್ಲಿ ಹೊಸಬರಿಗೆ ಬಲ ತುಂಬಿ ಅವಕಾಶ ನೀಡುವ ಬದಲಾಗಿ ಅನ್ಯಪಕ್ಷಗಳಲ್ಲಿರುವ ಶಾಸಕರು, ಮಾಜಿಗಳನ್ನು ಕಾಂಗ್ರೆಸ್‌ಗೆ ಕರೆತರುವ ಬಗ್ಗೆ ಚರ್ಚಿಸಿರುವುದು ಕಾರ್ಯಕರ್ತರ ವಲಯದಲ್ಲಿ ನಿರಾಸೆ ಮೂಡಿಸಿದೆ.
    ಚಳವಳಿ ಹಿನ್ನೆಲೆಯ ರಾಷ್ಟ್ರೀಯ ಪಕ್ಷದಲ್ಲಿ ಪಕ್ಷ ಹಾಗೂ ಸಾರ್ವಜನಿಕ ಹಿತಕ್ಕೂ ಮಿಗಿಲಾಗಿ ಮುಖಂಡರ ಸ್ವಂತ ಹಾಗೂ ಕುಟುಂಬದ ಅಸ್ತಿತ್ವದ ಬಗ್ಗೆಯೇ ಚರ್ಚೆ ನಡೆಯುತ್ತಿರುವುದು ಕಾರ್ಯಕರ್ತರಲ್ಲಿ ಜೀತದಾಳುಗಳು ಎಂಬ ಭಾವನೆ ಮೂಡಲಾರಂಭಿಸಿದ್ದು ಪಕ್ಷದ ಬಲ ಕುಗ್ಗಲು ಕಾರಣವಾಗಿದೆ. ಈ ಬಗ್ಗೆ ಮುಖಂಡರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

    ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುದ್ದಹನುಮೇಗೌಡ?: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವವರು ಜಿಲ್ಲಾಧ್ಯಕ್ಷರಾಗುವುದು ಬೇಡ ಎಂಬ ಡಾ.ಜಿ.ಪರಮೇಶ್ವರ್ ಸಲಹೆ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಬಹುತೇಕರು ರೇಸ್‌ನಿಂದ ಹಿಂದೆ ಸರಿದರು ಎನ್ನಲಾಗಿದೆ. ಪಕ್ಷ ಸಂಘಟನೆ ಅನುಭವ, ಕ್ಲೀನ್ ಇಮೇಜ್ ಹಾಗೂ ಜನಮನ್ನಣೆ ಇರುವ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಪಟ್ಟಕಟ್ಟುವ ನಿರ್ಧಾರದ ಹಿಂದೆ ಕಾಂಗ್ರೆಸ್ ಮುಖಂಡರ ಮಾಸ್ಟರ್‌ಪ್ಲ್ಯಾನ್ ಕೂಡ ಇದೆ ಎನ್ನಲಾಗಿದೆ. ಜನರ ವಿಶ್ವಾಸವಿದ್ದರೂ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಿತ್ತುಕೊಳ್ಳಲಾಗಿದೆ. ರಾಹುಲ್‌ಗಾಂಧಿ ಭರವಸೆ ನೀಡಿದ್ದರೂ ವಿಧಾನ ಪರಿಷತ್, ರಾಜ್ಯಸಭೆಗೆ ಆಯ್ಕೆ ಮಾಡುವಾಗ ಕಡೆಗಣಿಸಲಾಗಿದೆ, ಈಗ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಮುದ್ದಹನುಮೇಗೌಡ ವಿಧಾನಸಭೆಗೆ ಸ್ಪರ್ಧಿಸುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಸಂಬಂಧಿ ಶಾಸಕ ಡಾ.ಎಚ್.ಡಿ.ರಂಗನಾಥ್‌ಗೆ ತೊಂದರೆಯಾಗದಂತೆ ಡಿಕೆ ಸಹೋದರರೇ ಅಖಾಡಕ್ಕಿಳಿದು ಎಸ್ಪಿಎಂಗೆ ಜಿಲ್ಲಾಧ್ಯಕ್ಷ ಸ್ಥಾನದ ಪ್ರಸ್ತಾಪವಿಟ್ಟಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts