More

    ಕಾಟೇರ ಸಿನಿಮಾ ತಂಡಕ್ಕೆ ಅಭಿನಂದನೆ

    ಪಾಂಡವಪುರ: ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ 75ನೇ ಜನ್ಮದಿನೋತ್ಸವ ಹಾಗೂ ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ತಂಡಕ್ಕೆ ಅಭಿನಂದನಾ ಸಮಾರಂಭ ಶುಕ್ರವಾರ ಸಂಜೆ ಅದ್ದೂರಿಯಾಗಿ ನಡೆಯಿತು.

    ಪಟ್ಟಣದ ಬನ್ನಾರಮ್ಮ ದೇವಸ್ಥಾನದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ನಟ ದರ್ಶನ್ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಟ್ಟಣ್ಣಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪೂರ್ಣಕುಂಭಕಳಸ, ನಂದಿ ಕುಣಿತ, ವೀರಭದ್ರ ಕುಣಿತ, ಪೂಜಾ ಕುಣಿತ, ಡೊಳ್ಳು, ತಮಟೆ ಹಾಗೂ ಮಂಗಳವಾದ್ಯಗಳೊಂದಿಗೆ ನಟ ದರ್ಶನ್ ಅವರನ್ನು ಸಿಂಗರಿಸಿದ ಎತ್ತಿನಗಾಡಿಯಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಾಂಡವ ಕ್ರೀಡಾಂಗಣಕ್ಕೆ ಕರೆತರಲಾಯಿತು.

    ರೈತ ಹೋರಾಟಗಾರರಾದ ಪ್ರೊ. ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್ ಅವರ ಹೋರಾಟದ ಬದುಕು, ರೈತಸಂಘ ಹುಟ್ಟಿಕೊಂಡ ಸಂದರ್ಭ ಮತ್ತು ರೈತ ಚಳವಳಿಯ ಧ್ಯೇಯೋದ್ದೇಶಗಳ ಜತೆಗೆ ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ರೈತರ ಮೇಲಿದ್ದ ಒಲವು, ಶಾಸಕರಾಗಿ ವಿಧಾನಸಭೆ ಮತ್ತು ಹೊರಗೆ ರೈತರ ಧ್ವನಿಯಾಗಿ ನಡೆಸಿದ ಹೋರಾಟಗಳ ಬಗ್ಗೆ ಚಿತ್ರ ಸಂಗ್ರಹವನ್ನು ಪ್ರದರ್ಶಿಸಲಾಯಿತು.

    ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರಾದ ಚಾಮರಸ ಮಾಲೀಪಾಟೀಲ್, ಮಜ್ಜಿಗೆಪುರ ಶಿವರಾಮು ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಕುರಿತು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುಟ್ಟಣ್ಣಯ್ಯ ಅವರು ಪಕ್ಷಕ್ಕೆ ಸೇರ್ಪಡೆಯಾದರೆ ಕೃಷಿ ಸಚಿವ ಸ್ಥಾನ ನೀಡಿ ಗೌರವಿಸುವುದಾಗಿ ಮಾಡಿದ ಮನವಿಯನ್ನು ಪುಟ್ಟಣ್ಣಯ್ಯ ತಿರಸ್ಕರಿಸಿ ನಾನು ಹಸಿರು ಟವೆಲ್ ಹೆಗಲ ಮೇಲೆ ಹಾಕಿಕೊಂಡು ರಾಜ್ಯ ಸುತ್ತಿದರೆ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದರು. ನನಗೆ ಯಾವುದೇ ಅಧಿಕಾರ ಅಥವಾ ಪದವಿ ಬೇಕಿಲ್ಲ ಎಂಬ ಅವರ ಮಾತನ್ನು ಈ ಸಂದರ್ಭ ನೆನಪಿಸಿಕೊಂಡರು.

    ಮನರಂಜನೆ ಕಾರ್ಯಕ್ರಮ: ವೇದಿಕೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಪ್ರಮುಖ ಆಕರ್ಷಣೆಯಾದರೆ, ಬಿಗ್‌ಬಾಸ್ ಸ್ಪರ್ಧಿ ನಮ್ರತಾ ಅವರ ನೃತ್ಯ ಎಲ್ಲರ ಗಮನ ಸೆಳೆಯಿತು. ನಟಿ ಆರಾಧನಾ ರಾಮ್, ನಟರಾದ ವಿನೋದ್ ಪ್ರಭಾಕರ್, ವಿನೋದ್ ಆಳ್ವ, ಹಾಸ್ಯ ನಟ ಚಿಕ್ಕಣ್ಣ, ಬಾಲನಟ ರೋಹಿತ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೇರಿದಂತೆ ಅನೇಕ ನಟ, ನಟಿಯರು ಇದ್ದರು.

    ಕಾಯಕ ಯೋಗಿ ಪ್ರಶಸ್ತಿ: ದುಡಿಯುವ ವರ್ಗ, ರೈತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ವಿ.ರಾಜೇಗೌಡ, ಸಿ.ಎಂ.ತಮ್ಮಣ್ಣಗೌಡ, ಶಿವಣ್ಣ, ಎಂ.ಸಿ.ಗೋಪಾಲಕೃಷ್ಣ, ಶ್ರೀನಿವಾಸ್, ಜವರೇಗೌಡ, ಹನುಮಂತೇಗೌಡ ಮಾದರಹಳ್ಳಿ, ಎಸ್.ಎಂ.ಶಿವಕುಮಾರ್ ಶ್ರೀರಂಗಪಟ್ಟಣ, ಎನ್.ಎಚ್.ವಿರೂಪಾಕ್ಷ ಮೂರ್ತಿ ನಾಗತಿಹಳ್ಳಿ, ಹಾರೋಹಳ್ಳಿ ಪ್ರಕಾಶ್, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಲನಟ ರೋಹಿತ್ ಅವರಿಗೆ ಪ್ರಶಸ್ತಿ ನೀಡಲಾಯಿತು.

    ನಟ ದರ್ಶನ್‌ಗೆ ಭೂಮಿ ಪುತ್ರ ಬಿರುದು: ಕಾಟೇರ ಸಿನಿಮಾದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಟ ದರ್ಶನ್‌ಗೆ ಮೂವತ್ತು ಜಿಲ್ಲೆಗಳಿಂದ ತರಿಸಿದ್ದ ಮಣ್ಣು, ಕಬ್ಬು ಹಾಗೂ ಭತ್ತದ ತೆನೆಯೊಂದಿಗೆ ಭೂಮಿ ಪುತ್ರ ಬಿರುದು ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭ ಅಭಿಮಾನಿಗಳು ಟಗರನ್ನು ಉಡುಗೊರೆಯಾಗಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts