More

    ಖಾತೆ ಸಮಸ್ಯೆ ಪರಿಹರಿಸಲು ಕಂದಾಯ ಅದಾಲತ್ ನಡೆಸಿ

    ಸರಗೂರು: ಪಟ್ಟಣದ 12 ವಾರ್ಡ್‌ಗಳಲ್ಲೂ ಖಾತೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಅದಾಲತ್ ನಡೆಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು.

    ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಟ್ಟಣದ ಅಭಿವೃದ್ಧಿ ಕಾಮಗಾರಿ ಕುರಿತು ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಜತೆ ಮಾತುಕತೆ ನಡೆಸಿ ತಾಲೂಕು ಮತ್ತು ಪಟ್ಟಣ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸುತ್ತಿದ್ದರೂ ಅಧಿಕಾರಿಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪಟ್ಟಣ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದ್ದು, ಅನುದಾನ ಇದ್ದರೂ ಹಳೇ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಹಳೇ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಅಧ್ಯಕ್ಷ-ಉಪಾಧ್ಯಕ್ಷರು, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಆಶ್ರಯ ನಿವೇಶನ ಜಾಗ ಅಭಿವೃದ್ಧಿ, ಕುಡಿಯುವ ನೀರು ಸರಬರಾಜು ಕಾಮಗಾರಿ, ನಗರೋತ್ಥಾನ ಸಂಬಂಧಪಟ್ಟ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಹೆಡಿಯಾಲ ಮುಖ್ಯರಸ್ತೆ ಬದಿಯಲ್ಲಿ ಒಂದು ಕಡೆ ಮಾತ್ರ ವಿದ್ಯುತ್ ದೀಪದ ವ್ಯವಸ್ಥೆ ಮಾಡಿದೆ. ಇದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಸದಸ್ಯ ಎಸ್.ಎಲ್.ರಾಜಣ್ಣ, ಶ್ರೀನಿವಾಸ ಕೆಇಬಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

    ಶಾಲೆ-ಕಾಲೇಜು ಬಳಿ ಪುಂಡರ ಹಾವಳಿ ಇದ್ದು, ಪೊಲೀಸ್ ಇಲಾಖೆ ಶಾಲೆ ಆರಂಭ ಹಾಗೂ ಮುಕ್ತಾಯದ ಸಂದರ್ಭದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಒತ್ತಾಯಿಸಿದರು.

    ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ್, ಸದಸ್ಯರಾದ ಉಮಾರಾಮು, ಚಲುವಕೃಷ್ಣ, ದಿವ್ಯಾ ನವೀನ್, ನೂರಾಳು ಸ್ವಾಮಿ, ಶಿವಕುಮಾರ್, ಮುಖ್ಯಾಧಿಕಾರಿ ಮಂಜುನಾಥ್, ವೃತ್ತ ನಿರೀಕ್ಷಕ ಲಕ್ಷ್ಮೀ ಕಾಂತ್, ಪಿಎಸ್‌ಐ ನಂದೀಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಸೆಸ್ಕ್ ಇಂಜಿನಿಯರ್ ಅಶೋಕ್, ಬಿಇಒ ಮಾರಯ್ಯ ಇದ್ದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts