More

    ಷರತ್ತುಬದ್ಧ ಆಚರಣೆಗೆ ಅವಕಾಶ

    ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಗಣೇಶೋತ್ಸವ ಸೇರಿ ಹಬ್ಬ-ಹರಿದಿನಗಳ ಆಚರಣೆ ಕುರಿತು ಐಸಿಎಂಆರ್ ಮಾರ್ಗಸೂಚಿ ನೀಡಲಿದೆ. ಮಾರ್ಗಸೂಚಿ ಪ್ರಕಾರ ಧಾರ್ಮಿಕ ಆಚರಣೆಗೆ ಅವಕಾಶ ನೀಡಲಾಗುವುದು ಎಂದು ಡಿಸಿ ಎಂ.ಜಿ. ಹಿರೇಮಠ ಹೇಳಿದ್ದಾರೆ.

    ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗಣೇಶೋತ್ಸವ ಮಂಡಳಿಯ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಐಸಿಎಂಆರ್ ಮಾರ್ಗಸೂಚಿ ಬಂದ ಬಳಿಕ ಮತ್ತೊಮ್ಮೆ ಎಲ್ಲ ಮಂಡಳಿಗಳ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು.

    ವೈಜ್ಞಾನಿಕತೆಗೂ ಆದ್ಯತೆ ನೀಡಿ: ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಸರ್ಕಾರದ ನಿರ್ದೇಶನದ ಮೇರೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಹೇಳಿದರು. ಕೋವಿಡ್-19 ವ್ಯಾಪಕವಾಗಿ ಹರಡುವಿಕೆ ಜತೆಗೆ ಹಬ್ಬಗಳ ಸಾಲೂ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಆಚರಣೆಗಳನ್ನು ಕೇವಲ ಭಾವನಾತ್ಮಕವಾಗಿ ನೋಡದೆ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿಯೂ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು.

    ಸಹಕರಿಸಿ: ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಎರಡು ಮೂರು ದಿನಗಳಲ್ಲಿ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ ಸುಮಾರು ಐದು ಸಾವಿರ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ಆದ್ದರಿಂದ ಮಾರ್ಗಸೂಚಿ ಏನೇ ಇದ್ದರೂ ಅದಕ್ಕೆ ಎಲ್ಲ ಮಂಡಳಿಗಳೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಮಹಾರಾಷ್ಟ್ರ ರಾಜ್ಯದಲ್ಲೂ ಗಣೇಶೋತ್ಸವ ಆಚರಣೆಗೆ ಸರ್ಕಾರ ಕೆಲ ಮಾರ್ಗಸೂಚಿ ನೀಡಿದೆ. ಅದೇ ಪ್ರಕಾರ ಇಲ್ಲಿಯೂ ಮಾರ್ಗಸೂಚಿ ಬಿಡುಗಡೆ ಮಾಡಿದರೆ ಆಚರಣೆಗೆ ಅನುಕೂಲ ಆಗಲಿದೆ ಎಂದು ಪದಾಧಿಕಾರಿಗಳು ಡಿಸಿಗೆ ಮನವಿ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಉಪ ವಿಭಾಗಾಧಿಕಾರಿ ಅಶೋಕ ತೇಲಿ ಇತರರು ಪಾಲ್ಗೊಂಡಿದ್ದರು.

    ಸರಳ ಉತ್ಸವ ಆಚರಣೆಗೆ ಮಂಡಳಗಳ ಒಮ್ಮತ

    ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು ಗಣೇಶೋತ್ಸವ ಮಂಡಳಿಗಳು ಈಗಾಗಲೇ ಸಭೆ ನಡೆಸಿ, ಒಮ್ಮತದಿಂದ ತೀರ್ಮಾನಿಸಿದ್ದೇವೆ. ಆದರೆ, ಏಕಮುಖವಾಗಿ ಗಣೇಶೋತ್ಸವ ಆಚರಿಸದಂತೆ ನಿರ್ಬಂಧಿಸಿದರೆ ಅದಕ್ಕೆ ಆಕ್ಷೇಪವಿದೆ. ಸರ್ಕಾರ ನೀಡುವ ಮಾರ್ಗಸೂಚಿ ಪ್ರಕಾರ ಆಚರಣೆಗೆ ಎಲ್ಲ ಮಂಡಳಿಗಳು ಬದ್ಧವಾಗಿವೆ. ದೈಹಿಕ ಅಂತರ ಕಾಯ್ದುಕೊಂಡು ಸರಳ ಧಾರ್ಮಿಕ ರೀತಿಯಲ್ಲಿ ಆಚರಣೆ ಮಾಡುತ್ತೇವೆ. ಸಣ್ಣ ಸಣ್ಣ ವೇದಿಕೆಗಳಲ್ಲಿ ಚಿಕ್ಕ ಗಾತ್ರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಕೆಲವು ಮಂಡಳಿಗಳು ಮುಂಚಿತವಾಗಿಯೇ ಬೃಹತ್ ಮೂರ್ತಿ ಆರ್ಡರ್ ನೀಡಲಾಗಿದ್ದು, ಜಿಲ್ಲಾಡಳಿತದ ಮಾರ್ಗದರ್ಶನದಂತೆ ಗಣೇಶೋತ್ಸವಕ್ಕೆ ಸಹಕಾರ ನೀಡಲಿದ್ದೇವೆ ಎಂದು ಗಣೇಶೋತ್ಸವ ಮಂಡಳಿ ಪದಾಧಿಕಾರಿಗಳು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts