More

    ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಅರ್ಧಚಂದ್ರ!

    ಹುಬ್ಬಳ್ಳಿ: ಉತ್ತಮ ಸಿಮೆಂಟ್ ಕಾಂಕ್ರೀಟ್ ರಸ್ತೆ. ಹಾಗಾಗಿ ತುಸು ವೇಗವಾಗಿ ವಾಹನ ಓಡಿಸುತ್ತಾರೆ ಚಾಲಕರು. ಆದರೆ, ಈ ಖುಷಿ ಕೆಲವೇ ಕ್ಷಣದಲ್ಲಿ ಮುಗಿದು, ದಿಢೀರ್ ಬ್ರೇಕ್ ಹಾಕಲೇಬೇಕಾಗುತ್ತದೆ. ಆಗ ವಾಹನ ಧಡಕಿ ಹೊಡೆಯುತ್ತದೆ!

    ಇದು ಇಲ್ಲಿಯ ನ್ಯೂ ಕಾಟನ್ ಮಾರ್ಕೆಟ್​ನಲ್ಲಿ ಪ್ರತಿ ಗಂಟೆಗೆ 300ರಿಂದ 500ರಷ್ಟು ವಾಹನದವರು ಅನುಭವಿಸುವ ಸಂಕಷ್ಟ.

    ಇದಕ್ಕೆ ಕಾರಣ- ರಸ್ತೆ ನಿರ್ಮಾಣ ಒಂದು ಹಂತಕ್ಕೆ ಸ್ಥಗಿತವಾಗಿರುವುದು. ಚನ್ನಮ್ಮ ವೃತ್ತದಿಂದ ನೀಲಿಜಿನ್ ರಸ್ತೆ ಮೂಲಕ ನ್ಯೂ ಕಾಟನ್ ಮಾರ್ಕೆಟ್​ನ (ಎನ್​ಸಿಎಂ) ಶ್ರೀನಾಥ ಕಾಂಪ್ಲೆಕ್ಸ್​ವರೆಗೆ, ಈಜುಗೊಳ ಸಂಕೀರ್ಣದ ಎದುರಿನಿಂದ ಸಾಂಸ್ಕೃತಿಕ ಭವನದ ಎದುರಿಗೆ ನಾಲ್ಕು ರಸ್ತೆ ಸೇರುವಲ್ಲಿಯವರೆಗೆ, ಸಾಂಸ್ಕೃತಿಕ ಭವನದ ಪಕ್ಕದಲ್ಲಿ ಮತ್ತು ಭವನದ ಎದುರಿಗೆ ಎಡ ಭಾಗದಿಂದ ಹೊಸೂರಿನ ಮೋಹನ ಏಕಬೋಟೆ ರಸ್ತೆ ಸಂರ್ಪಸುವಲ್ಲಿಯವರೆಗೆ, ಅದೇ ರಸ್ತೆಗೆ ಸಂಪರ್ಕವಾಗುವ ಎನ್​ಸಿಎಂನ ಒಂದು ಅಡ್ಡ ರಸ್ತೆ ಇಷ್ಟು ಕಾಂಕ್ರೀಟ್ ಆಗಿವೆ. ಉಳಿದ ರಸ್ತೆಗಳದ್ದು ಹಳೇ ಸ್ಥಿತಿ- ಮೈ ತುಂಬ ಗಾಯ ಎಂಬಂತೆ ಇವೆ.

    ಇಡೀ ಎನ್​ಸಿಎಂನ ಎಲ್ಲ ಅಡ್ಡ ರಸ್ತೆಗಳನ್ನೂ ಕಾಂಕ್ರೀಟ್ ಆಗಿಸುವ ಕೆಲಸ ಗುತ್ತಿಗೆ ನೀಡಲಾಗಿದೆ. ಈಗ ಅಂದಾಜು ಕಾಲುಭಾಗ ಪೂರ್ಣವಾಗುವ ಹೊತ್ತಿಗೆ ಹಣಕಾಸಿನ ಬಿಕ್ಕಟ್ಟು ಶುರುವಾಗಿದ್ದರಿಂದ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದಾರೆ.

    ದೇಸಾಯಿ ಕ್ರಾಸ್​ನಿಂದ ದೇಶಪಾಂಡೆ ನಗರ, ಗುಜರಾತ ಭವನದ ಎದುರಿನಿಂದ ಅಶೋಕ ನಗರ ರೈಲ್ವೆ ಕೆಳಸೇತುವೆತನಕ ಹಾಗೂ ಸವಾಯಿ ಗಂಧರ್ವ ಕಲಾಮಂದಿರ ಎದುರಿನಿಂದ ಕಿಮ್್ಸ ಕಂಪೌಂಡ್ ಪಕ್ಕದಲ್ಲಿ ಹಾದುಹೋಗುವ ರಸ್ತೆಯನ್ನೂ ಇದೇ ಗುತ್ತಿದಾರರು ಪಡೆದುಕೊಂಡಿದ್ದರು. ಆದರೆ, 20 ಕೋಟಿ ರೂ.ಗಳಷ್ಟು ಮೊತ್ತವನ್ನು ಸರ್ಕಾರ ಇನ್ನೂ ಪಾವತಿಸಬೇಕಿದೆ. ಈ ಬಾಕಿ ಹಣ ಕೊಡಿ, ಎನ್​ಸಿಎಂ ಕೆಲಸ ಬೇಗ ಮುಂದುವರಿಸುತ್ತೇನೆ ಎಂದು ಗುತ್ತಿಗೆದಾರರು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ, ಸರ್ಕಾರ ಎಷ್ಟು ಬೇಗ ಬಾಕಿ ಮೊತ್ತ ಕೊಡುತ್ತದೆಯೋ ಅಷ್ಟು ಬೇಗ ಕೆಲಸ ಶುರುವಾಗಲಿದೆ.

    ಸಿಆರ್​ಎಫ್ ನಿಧಿ

    ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜಂಟಿ ಪ್ರಯತ್ನದಿಂದ ಕೇಂದ್ರ ರಸ್ತೆ ನಿಧಿ (ಸಿಆರ್​ಎಫ್) ಅಡಿಯಲ್ಲಿ ಎನ್​ಸಿಎಂ ಸೇರಿ ನಗರದ ವಿವಿಧ ಮಾರ್ಗಗಳ ಕಾಂಕ್ರೀಟಿಕರಣಕ್ಕೆ ಅನುದಾನ ಮಂಜೂರಾಗಿದೆ. ಕೆಲಸ ಆಗುತ್ತಿರುವಂತೆ ರಾಜ್ಯ ಸರ್ಕಾರ ಹಣ ಪಾವತಿಸಬೇಕು. ನಂತರ ಬಳಕೆ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಸಿಆರ್​ಎಫ್ ಅನುದಾನ ಪಡೆದುಕೊಳ್ಳುವುದು ನಿಯಮ.

    ಕೆಲಸ ಶುರು ಮಾಡಲು ಶೆಟ್ಟರ್ ಸೂಚನೆ

    ಜಗದೀಶ ಶೆಟ್ಟರ್ ಅವರು ಸಾಕಷ್ಟು ಪ್ರಭಾವಿ ಸಚಿವರೇ. ಲೋಕೋಪಯೋಗಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಂದಿಗೆ ಮಾತಾಡಿದ್ದು, ಸದ್ಯದಲ್ಲೇ ಬಾಕಿ ಮೊತ್ತ ಕೊಡಿಸೋಣ, ಕೆಲಸ ಶುರು ಮಾಡಲು ಗುತ್ತಿಗೆದಾರರಿಗೆ ಸೂಚಿಸಿ ಎಂದು ಇತ್ತೀಚೆಗೆ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಸಚಿವರು ಬೆಳಗಾವಿ ಲೋಕಸಭೆ ಉಪಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ, ಚುನಾವಣೆ ಮುಗಿಯುವವರೆಗೆ ಅವರಿಗೆ ಸಮಯ ಸಿಗುವುದೇ ಕಷ್ಟವಾಗಿದ್ದು, ಬಾಕಿ ಹಣ ಬಿಡುಗಡೆಗೆ ಮತ್ತೆ ಮತ್ತೆ ಪ್ರಯತ್ನಿಸಲೂ ಸಾಧ್ಯವಾಗಲಿಕ್ಕಿಲ್ಲ. ಈ ಮಧ್ಯೆ, ಬಾಕಿ ಇರುವುದರಲ್ಲಿ ಅರ್ಧದಷ್ಟಾದರೂ ಹಣ ಕೈಗೆ ಬರಲಿ ಎಂದು ಗುತ್ತಿಗೆದಾರರು ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

    40-50 ದಿನ ಬೇಕು

    ಮೊದಲು ರಸ್ತೆಯ ಇಕ್ಕೆಲದಲ್ಲಿ ಬಾಕ್ಸ್ ಗಟಾರ ನಿರ್ಮಾಣ ಆಗಬೇಕು. ನಂತರ, ಹಾಲಿ ಇರುವ ಡಾಂಬರು ರಸ್ತೆ ಬಗೆದು ತೆಗೆದು, ಕಾಂಕ್ರೀಟ್ ಕೆಲಸ, ಕ್ಯೂರಿಂಗ್ ನಡೆಯಬೇಕು. ಆಮೇಲೆ ರಸ್ತೆಯ ಎರಡೂ ಪಾರ್ಶ್ವದಲ್ಲಿ ಬಾಕ್ಸ್ ಗಟಾರದವರೆಗೆ ಪೇವರ್ ಅಳವಡಿಸಬೇಕು. ಹೀಗಾಗಿ, ಒಂದು ರಸ್ತೆ ಕೆಲಸ ಶುರು ಮಾಡಿದರೆ 40ರಿಂದ 60 ದಿನದವರೆಗೂ ತಗಲುತ್ತದೆ. ಸ್ಥಗಿತಗೊಂಡಿರುವ ಕೆಲಸ ಮರು ಆರಂಭವಾಗುವುದು ಯಾವಾಗ ಎಂದು ಗೊತ್ತಿಲ್ಲ. ಅಂದರೆ, ಬರುವ ಮಳೆಗಾಲದೊಳಗೆ ಎನ್​ಸಿಎಂ ಪೂರ್ತಿ ಕಾಂಕ್ರೀಟ್ ರಸ್ತೆ ಆಗುವ ಸಾಧ್ಯತೆ ಕಡಿಮೆ. ಮಳೆ ಶುರುವಾದರೆ ಮತ್ತೆ ಹೊಂಡ, ರಾಡಿ ತಪ್ಪುವುದಿಲ್ಲ.

    ಮೇಲಿಂದ ಮೇಲೆ ಅಪಘಾತ

    ಎನ್​ಸಿಎಂ ಮಾರುತಿ ಮಂದಿರದ ಎದುರಿನ ದ್ವಿಪಥ ರಸ್ತೆಯಲ್ಲಿ ಅರ್ಧ ಪಾರ್ಶ್ವ ಕಾಂಕ್ರೀಟ್ ಆಗಿದೆ. ಉಳಿದರ್ಧ ಹಳೇ, ಹಾಳು ರಸ್ತೆಯೇ ಇದೆ. ಕಾಂಕ್ರೀಟ್ ಆಗಿರುವ ಭಾಗದ ಉಭಯ ತುದಿಯಲ್ಲಿ 4-6 ಇಂಚು ಜಿಗಿಯಬೇಕಾಗುತ್ತದೆ. ಇದರ ಅರಿವಿಲ್ಲದೆ ದ್ವಿಚಕ್ರ ವಾಹನ ಸವಾರರು ಬಿದ್ದು ಸಣ್ಣಪುಟ್ಟ ಪೆಟ್ಟಾದ ಘಟನೆಗಳಾಗಿವೆ. ಆದಷ್ಟು ಬೇಗ ಒಳ್ಳೆ ರಸ್ತೆ ನಿರ್ವಣವಾದರೆ ಸಾಕು ಎನ್ನುತ್ತಾರೆ ಮಾರುತಿ ಮಂದಿರ ಸಮಿತಿ ಕಾರ್ಯದರ್ಶಿ ಪ್ರಕಾಶ ಜಿಗಳೂರ.

    ಮಾರ್ಚ್ ಅಂತ್ಯಕ್ಕೆ ಗುತ್ತಿಗೆದಾರರಿಗೆ ಒಂದಿಷ್ಟು ಪೇಮೆಂಟ್ ಆಗಿದೆ. ಮತ್ತೆ ಮೇಲಧಿಕಾರಿಗಳಿಗೆ ಪತ್ರ ಬರೆದು, ವರದಿ ಸಲ್ಲಿಸಿ ವಿನಂತಿಸಿದ್ದೇವೆ. ಸದ್ಯದಲ್ಲೇ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸ್ಥಗಿತಗೊಂಡಿರುವ ಕೆಲಸವನ್ನು ಬೇಗ ಮರು ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
    – ಆರ್.ಕೆ. ಮಠದ,
    ಪಿಡಬ್ಲ್ಯುಡಿ (ರಾ.ಹೆ.) ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts