More

    ಸಮಗ್ರ ಅಭಿವೃದ್ಧಿ, ಸದೃಢ ನಾಡು ಕಟ್ಟುವ ಕೆಲಸ

    ಹಾವೇರಿ: ಹೊಸ ಚಿಂತನೆ, ಹೊಸ ಕಲ್ಪನೆ, ಹೊಸ ಕಾರ್ಯಗಳ ಮೂಲಕ ಎಲ್ಲರನ್ನೊಳಗೊಂಡ ನವ ಭಾರತ ನಿರ್ವಣಕ್ಕೆ ಪ್ರಧಾನಮಂತ್ರಿಗಳು ಸಂಕಲ್ಪ ಮಾಡಿದ್ದಾರೆ. ರಾಜ್ಯದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿಯ ಸದೃಢ ಕನ್ನಡ ನಾಡು ಕಟ್ಟುವ ಕೆಲಸ ಮಾಡುತ್ತೇವೆ ಎಂದು ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    72ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಳೆದ ಒಂದೂವರೆ ವರ್ಷ ಸಂಕಷ್ಟದ ವರ್ಷವಾಗಿ ಆಡಳಿತಕ್ಕೆ ಪರೀಕ್ಷೆಯ ಕಾಲವಾಗಿತ್ತು. ಕೋವಿಡ್ ಹಾಗೂ ಪ್ರಾಕೃತಿಕ ವಿಕೋಪಗಳು ರಾಜ್ಯದ ಆರ್ಥಿಕತೆಯನ್ನೇ ಅಲ್ಲಾಡಿಸಿದ್ದವು. ಕೋವಿಡ್ ಕಾರಣದಿಂದ ದೇಶ ಸೇರಿದಂತೆ ವಿಶ್ವದ ಆರ್ಥಿಕತೆಯೇ ಅಲ್ಲಾಡಿದೆ. ಈ ಸಂಕಷ್ಟಗಳ ದಾರಿಯಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ನಮ್ಮ ಸರ್ಕಾರಗಳು ಕಾರ್ಯನಿರ್ವಹಿಸಿವೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯತೆ, ಎಲ್ಲರ ಒಳಗೊಂಡ ಅಭಿವೃದ್ಧಿ ಹಾಗೂ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಯ ಮೂರು ಅಂಶಗಳ ಆಧಾರದ ಮೇಲೆ ನವ ಭಾರತ ನಿರ್ವಣಕ್ಕೆ ಕರೆ ಕೊಟ್ಟಿದ್ದಾರೆ. ಈ ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿಯ ಕಾರ್ಯಗಳು ಮುಂದುವರಿದಿವೆ ಎಂದರು.

    ಜಿಲ್ಲೆಯಲ್ಲಿ ಕೋವಿಡ್ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಐಸಿಯು ಲ್ಯಾಬ್, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಸೇರಿ ಪ್ರಮುಖ ಸುಧಾರಣೆ ತರಲಾಗಿದೆ. 3.64 ಕೋಟಿ ರೂ. ವೆಚ್ಚದಲ್ಲಿ 1,787 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಈವರೆಗೆ 11,250 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 11,046 ಜನ ಗುಣವಾಗಿದ್ದಾರೆ. 8,280 ಡೋಸ್ ಕೋವಿಡ್ ಲಸಿಕೆ ಜಿಲ್ಲೆಗೆ ಬಂದಿದ್ದು, ಈಗಾಗಲೇ 3,387 ಜನರಿಗೆ ಲಸಿಕೆ ನೀಡಲಾಗಿದೆ ಎಂದರು.

    ಜ. 26 ಭಾರತಕ್ಕೆ ಸಂವಿಧಾನ, ಆಡಳಿತ ವ್ಯವಸ್ಥೆ ಸಿಕ್ಕದಿನ, ವಿಶ್ವಕ್ಕೆ ಮಾದರಿಯಾದ ದೊಡ್ಡ ಲಿಖಿತ ಸಂವಿಧಾನವನ್ನು ಜಾರಿಗೆ ತಂದದಿನ. ಈ ಗಣರಾಜ್ಯ ಜನರ ಗಣರಾಜ್ಯವಾಗಬೇಕು. ಚರ್ಚೆಯ ಮೂಲಕ ಎಲ್ಲ ಸಮಸ್ಯೆಗಳಿಗೆ ಇತ್ಯರ್ಥವಾಗಲಿ ಎಂದ ಅವರು, ಗಣರಾಜ್ಯ ಸಮಯದಲ್ಲಿ ರಾಜ್ಯದ ಐವರಿಗೆ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ದೊರೆತಿದ್ದು, ಅವರನ್ನೆಲ್ಲ ಅಭಿನಂದಿಸುತ್ತೇನೆ ಎಂದರು.

    ನಂತರ ಜನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಪತ್ರಕರ್ತ ವೀರೇಶ ಮಡ್ಲೂರ, ಕ್ಯಾಮರಾಮೆನ್ ರವಿ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ಆಕರ್ಷಕ ಪಥ ಸಂಚಲನ ಹಾಗೂ ಧ್ವಜ ವಂದನೆ ಕಾರ್ಯಕ್ರಮ ನಡೆಯಿತು.

    ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ, ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್, ಎಸ್​ಪಿ ಕೆ.ಜಿ. ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts