More

    ಎತ್ತಿನಹೊಳೆ, ರಣಘಟ್ಟ ಯೋಜನೆ ಪೂರ್ಣಗೊಳಿಸಿ

    ಬೇಲೂರು: ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ತಾತ್ಸಾರ ಮಾಡದೇ ಕೂಡಲೇ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ಮನವಿ ಮಾಡಿದರು.


    ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿ, ನೀರಾವರಿ ಯೋಜನೆಗಳು ರೈತರು ಮತ್ತು ಸಾರ್ವಜನಿಕರ ನಾಡಿ ಮಿಡಿತವಾಗಿದೆ. ಮಲೆನಾಡು, ಅರೆ ಮಲೆನಾಡು ಮತ್ತು ಬಯಲು ಸೀಮೆಯಂಥ ವೈವಿಧ್ಯಮಯ ಪ್ರದೇಶಗಳನ್ನು ಒಳಗೊಂಡಿರುವ ಬೇಲೂರು ವಿಧಾನಸಭಾ ಕ್ಷೇತ್ರದ ರೈತರ ಬಹು ಮುಖ್ಯ ಬೆಳೆಗಳಾದ ತೆಂಗು, ಅಡಕೆ ಮತ್ತು ಇತರ ವಾಣಿಜ್ಯ ಬೆಳೆಗಳಾಗಿದ್ದು ಸಮರ್ಪಕವಾದ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಉತ್ತಮ ಬೆಳೆಗಳನ್ನು ಪಡೆಯಲು ಸಾಧ್ಯವಾಗದೇ ರೈತರುಕಂಗಾಲಾಗಿದ್ದಾರೆ ಎಂದರು.


    ಎತ್ತಿನಹೊಳೆ ಯೋಜನೆ ನನ್ನ ಕ್ಷೇತ್ರದ ಬಿಕ್ಕೋಡು, ಮಾದಿಹಳ್ಳಿ, ಹಳೇಬೀಡು, ಜಾವಗಲ್ ಹೋಬಳಿಗಳಲ್ಲಿ ಹಾದು ಹೋಗಿದ್ದರೆ, ಹಳೇಬೀಡು, ಮಾದಿಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ರಣಘಟ್ಟ ಯೋಜನೆಯ ಕಾಮಗಾರಿಗಳು ಅನೇಕ ವರ್ಷಗಳಿಂದ ನಡೆಯುತ್ತಿದ್ದರೂ ಇದುವರೆಗೂ ಪೂರ್ಣಗೊಳ್ಳದಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


    ಬೇಲೂರು ಕ್ಷೇತ್ರ ಬರ ಪೀಡಿತ ಪ್ರದೇಶವಾಗಿದ್ದು, ಮಳೆಯಿಲ್ಲದೆ, ಯಾವುದೇ ನೀರಾವರಿ ಯೋಜನೆಗಳಿಲ್ಲದೆ ತೆಂಗು, ಅಡಕೆ, ಕಾಫಿ ಇತರ ವಾಣಿಜ್ಯ ಬೆಳೆಗಳು ನೆಲ ಕಚ್ಚಿರುವುದಲ್ಲದೆ, ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ ಎಂದು ಹೇಳಿದರು.


    ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸುವ ಎತ್ತಿನಹೊಳೆ, ರಣಘಟ್ಟ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೆರೆಗಳಿಗೆ ನೀರನ್ನು ತುಂಬಿಸಬೇಕು ಎಂದು ಮನವಿ ಮಾಡಿದರು. ಎತ್ತಿನಹೊಳೆ ಯೋಜನೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ರಸ್ತೆ ಜತೆಗೆ ಮೂಲಸೌಲಭ್ಯಗಳನ್ನು ನೀಡುವ ಸಲುವಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.


    ಮಾದೀಹಳ್ಳಿ-ಹಳೇಬೀಡು ಕೆರೆಗಳಿಗೆ ನೀರು ತುಂಬಿಸುವ ರಣಘಟ್ಟ ನೀರಾವರಿ ಯೋಜನೆ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿ ಕೂಡಲೇ ಯೋಜನೆಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದರು.


    ಶಾಸಕ ಎಚ್.ಕೆ. ಸುರೇಶ್ ಮನವಿಗೆ ಪ್ರತಿಕ್ರಿಯಿಸಿದ ಜಲ ಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎತ್ತಿನಹೊಳೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು, ಯೋಜನೆಯಿಂದ ಹಾಳಾದ ರಸ್ತೆಗಳಿಗೆ, ಮೂಲ ಸೌಲಭ್ಯಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವುದಾಗಿ ಹಾಗೂ ರಣಘಟ್ಟ ನೀರಾವರಿ ಯೋಜನೆಯನ್ನು ತ್ವರಿತವಾಗಿ ಮುಗಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts