More

    ಕೋವಿಡ್ ಸಮಯದಲ್ಲಿ ಶ್ಲಾಘನೀಯ ಸೇವೆ

    ಹಾವೇರಿ: ಕರೊನಾದಂತಹ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ಜೀವ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಹೇಳಿದರು.

    ಶಿಗ್ಗಾಂವಿ ತಾಲೂಕು ಗಂಗೀಭಾವಿಯ ಚನ್ನಬಸಪ್ಪ ಯಲಿಗಾರ ಸೇವಾ ಸಂಸ್ಥೆ, ಜಿಲ್ಲಾಸ್ಪತ್ರೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಕೆಇಬಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಕರೊನಾ ಸೇನಾನಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರೊನಾದಂಥ ಸಂಕಷ್ಟದ ಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆ ವೈದ್ಯರು, ಆರೋಗ್ಯ, ಆಶಾ ಕಾರ್ಯಕರ್ತೆಯರು, ಲ್ಯಾಬ್ ಟೆಕ್ನಿಷಿಯನ್, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ವಿುಕರು ಪರಿಶ್ರಮ ಹಾಕಿದ್ದಾರೆ ಎಂದರು.

    ಎಸ್​ಪಿ ಕೆ.ಜಿ. ದೇವರಾಜ್ ಮಾತನಾಡಿ, ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಸಹಕಾರದಿಂದ ಕರೊನಾ ವೈರಸ್​ನ್ನು ಜಿಲ್ಲೆಯಲ್ಲಿ ನಿಯಂತ್ರಣದಲ್ಲಿಡಲಾಗಿತ್ತು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ಪಾಸಿಟಿವ್ ಸಂಖ್ಯೆ ಕಡಿಮೆ ಇದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ 11,279 ಪಾಸಿಟಿವ್ ದೃಢಪಟ್ಟಿದ್ದು, 195 ಜನರು ಮೃತಪಟ್ಟಿದ್ದಾರೆ ಎಂದರು.

    ಋಣ ತೀರಿಸುವ ಸಂಕಲ್ಪ: ಸಿ.ಬಿ. ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಮಾತನಾಡಿ, ಹುಟ್ಟಿನಿಂದಲೂ ಆಸ್ಪತ್ರೆಗೆ ಹೋಗಿ ಟ್ರೀಟ್​ವೆುಂಟ್ ತೆಗೆದುಕೊಳ್ಳದ ನನಗೆ ಮೂರ್ನಾಲ್ಕು ತಿಂಗಳ ಹಿಂದೆ ಕರೊನಾ ತಗುಲಿತು. ಆಗ ಕುಟುಂಬದವರ ಒತ್ತಾಯದಿಂದ ಆಸ್ಪತ್ರೆಗೆ ದಾಖಲಾದೆ. ಕರೊನಾ ಸಮಯದಲ್ಲಿ ಕುಟುಂಬದವರು, ಆಪ್ತರನ್ನು ನನ್ನ ಹತ್ತಿರವೂ ಬಿಡಲಿಲ್ಲ. ಬದಲಾಗಿ ಅಲ್ಲಿನ ವೈದ್ಯರು, ನರ್ಸ್​ಗಳು ಉತ್ತಮ ಚಿಕಿತ್ಸೆ ಕೊಟ್ಟರು. ತೀವ್ರ ಉಸಿರಾಟ ತೊಂದರೆಯಲ್ಲಿದ್ದ ನನಗೆ ಅನೇಕ ಸಲಹೆಗಳನ್ನು ನೀಡಿ ಗುಣವಾಗಿಸಿದರು. ಆಗ ಈ ಕರೊನಾ ಸೇನಾನಿಗಳ ಸೇವೆಯ ಋಣವನ್ನು ತೀರಿಸಬೇಕು ಎಂಬ ಸಂಕಲ್ಪ ಮಾಡಿದೆ. ಹೀಗಾಗಿ ಇಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

    ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಡಿಎಚ್​ಒ ರಾಜೇಂದ್ರ ದೊಡ್ಡಮನಿ ಮಾತನಾಡಿದರು. ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು, ಆರೋಗ್ಯ, ಆಶಾ ಕಾರ್ಯಕರ್ತೆಯರು, ತಾಂತ್ರಿಕ ವಿಭಾಗದ ಸಿಬ್ಬಂದಿ, ಆಂಬುಲೆನ್ಸ್ ಚಾಲಕರು, ಪೌರ ಕಾರ್ವಿುಕರು ಸೇರಿ ವಿವಿಧ ವಿಭಾಗಗಳ 800 ಜನರನ್ನು ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸ್.ಆರ್. ಅಂಗಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಡಾ. ಸುರೇಶ ಪೂಜಾರ, ಡಾ. ಎಂ. ಜಯಾನಂದ, ಡಾ. ಪ್ರಭಾಕರ ಕುಂದೂರ, ಡಾ. ಜಗದೀಶ ಪಾಟೀಲ, ಸಮಾಜ ಸೇವಕ ಬಸವರಾಜ ಇಂಗಳಗಿ, ಬಸವರಾಜ ಕುರಗೋಡಿ, ಪಿ.ಜೆ. ಹಕ್ಕಿ, ಸುಶೀಲಾ ದೇವಸೂರ, ಜಯಮ್ಮ ಅಂಗಡಿ, ಮುರುಗೇಶ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts