More

    ಶ್ರೀ ಹಾನಗಲ್ ಕುಮಾರಸ್ವಾಮಿಗಳ ಸ್ಮರಣೋತ್ಸವ

    ಶಿಕಾರಿಪುರ: ಶತಮಾನದ ಹಿಂದೆ ದಟ್ಟಕಾನನವಾಗಿದ್ದ ಈ ಸ್ಥಳದಲ್ಲಿ ಶಿವಯೋಗ ಮಂದಿರ ಸ್ಥಾಪಿಸಿ ಈ ಮಣ್ಣಿಗೆ ಪುಣ್ಯದ ಸಿಂಚನ ಮಾಡಿದವರು ಮಹಾವಿರಾಗಿ ಶ್ರೀ ಹಾನಗಲ್ ಕುಮಾರಸ್ವಾಮಿಗಳು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಭಾನುವಾರ ಸಮೀಪದ ಕಾಳೇನಹಳ್ಳಿಯಲ್ಲಿ ಆಯೋಜಿಸಿದ್ದ ಜಾತ್ರಾ ಮಹೋತ್ಸವ, ಲಿಂ. ಶ್ರೀ ಹಾನಗಲ್ ಕುಮಾರಸ್ವಾಮಿಗಳ ಹಾಗೂ ಲಿಂ. ರೇವಣಸಿದ್ದ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕುಮದ್ವತಿ ಮತ್ತು ವೃಷಭಾವತಿ ನದಿಗಳ ಸಂಗಮ ಕ್ಷೇತ್ರವಿದು. ಆನಂದಪುರ, ಗುತ್ತಲ, ಕೆಳದಿ ಲಿಂಗೈಕ್ಯ ಪೂಜ್ಯರುಗಳ ಮನವಿಯಂತೆ ಮಲೆನಾಡಿನಲ್ಲೊಂದು ಶಿವಯೋಗ ಮಂದಿರವನ್ನು ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದರು. ಅಂದಿನ ಕಾಲಘಟ್ಟದಲ್ಲಿ ವಿಭೂತಿ ತಯಾರಿಕೆ ಜತೆಗೆ ಪೀಠಾಧಿಕಾರಕ್ಕೆ ನಿಯುಕ್ತಿಗೊಂಡ ವಟುಗಳಿಗೆ ಇಲ್ಲಿ ಸೂಕ್ತ ತರಬೇತಿ ನೀಡಲಾಗುತ್ತಿತ್ತು ಎಂದರು.
    ಲಿಂ. ಶ್ರೀ ರುದ್ರಮುನಿ ಮಹಾಸ್ವಾಮಿಗಳು ಇಲ್ಲಿನ ಮಣ್ಣಿನಲ್ಲಿ ಕಾಯಕದ ದೀಕ್ಷೆ ಪಡೆದು ಕೃಷಿಯೋಗಿ, ಕಾಯಕಯೋಗಿಯಾಗಿ ಜನಮನ ಸೆಳೆದರು. ಅವರಲ್ಲಿ ಸಮಾಜ ಉದ್ಧಾರದ ತುಡಿತವಿತ್ತು. ಕೃಷಿಯಿಂದ ಬದುಕು ಬಂಗಾರ ಎಂದು ನಂಬಿದ್ದವರು. ಅಂದಿನ 400 ಎಕರೆಯಲ್ಲಿ ಸಾಂಪ್ರದಾಯಿಕ ಸ್ವದೇಶಿ ಮತ್ತು ಸಾವಯವ ಕೃಷಿಯಲ್ಲಿ ಪೂಜ್ಯರು ಪರಿಣಿತರಾಗಿದ್ದರು ಎಂದು ಹೇಳಿದರು.
    ಸಂಸ್ಕೃತಿ, ಸಂಸ್ಕಾರ, ಪರಂಪರೆಗಳ ಅರಿವು ಮೂಡಿಸುವ ಕೆಲಸ ಮಾಡಬೇಕು. ನಮ್ಮ ಧರ್ಮವನ್ನು ಮೊದಲು ನಾವು ಪ್ರೀತಿಸೋಣ. ಜತೆಗೆ ಉಳಿಸಿ ಬೆಳೆಸೋಣ. ಆಗ ಧರ್ಮ ಕೂಡ ನಮ್ಮ ಬೆನ್ನಿಗೆ ನಿಲ್ಲುತ್ತದೆ. ದೈವ ಚಿಂತನೆಗಳು ನಮ್ಮಲ್ಲಿ ಸದ್ವಿಚಾರಗಳು ಮೊಳಕೆಯೊಡೆಯುವಂತೆ ಮಾಡುತ್ತವೆ. ಸಹನೀಯ ಗುಣವನ್ನು ನೀಡುತ್ತವೆ. ನಮ್ಮ ಧರ್ಮ, ಆಚರಣೆ, ಆಚಾರ,ವಿಚಾರಗಳನ್ನು ನಾವು ಯಾವತ್ತೂ ಉಪೇಕ್ಷೆ ಮಾಡಬಾರದು ಎಂದರು.
    ಕಾಳೇನಹಳ್ಳಿ ಶಿವಯೋಗಾಶ್ರಮದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಮ್ಮ ಬದುಕು ಮಾನವೀಯ ಮೌಲ್ಯಗಳ ಮೂರ್ತರೂಪವಾಗಬೇಕು. ಉಸಿರು ನಿಂತ ನಂತರ ಬರುವುದು ಸಾವಲ್ಲ. ಯಾವಾಗ ನಾವು ನಮ್ಮದೇ ಪ್ರಪಂಚದಲ್ಲಿ ಮುಳುಗಿ, ಸಮಾಜಮುಖಿ ಬದುಕಿನಿಂದ ದೂರವಾಗಿ, ಜನತೆಯ ಸ್ಮತಿಪಟಲದಿಂದ ದೂರವಾಗುತ್ತೇವೋ ಅಂದೇ ನಮಗೆ ಸಾವು. ಇಂದಿಗೂ ಜನಮನದಲ್ಲಿ, ಜನರ ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತ ನಿರಂತರ ಇರುವರೋ ಅವರು ಪ್ರಾತಃಸ್ಮರಣೀಯರಾಗುತ್ತಾರೆ ಎಂದು ತಿಳಿಸಿದರು.
    ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ವಿ.ಈರೇಶ್, ಮಮತಾ ಈರೇಶ್, ಸುನಂದಮ್ಮ ಲೋಣಿ, ತಾಲೂಕು ಕುಂಚುಟಿಗ ಸಮಾಜದ ಅಧ್ಯಕ್ಷ ಕೆ.ವಿ.ಲೋಹಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts