More

    ಭಗವಂತನ ಅಸ್ತಿತ್ವದ ಪ್ರಮಾಣಪುರುಷರಾಗಿ ಶ್ರೀರಾಮಕೃಷ್ಣರು

    ಭಗವಂತನ ಅಸ್ತಿತ್ವದ ಪ್ರಮಾಣಪುರುಷರಾಗಿ ಶ್ರೀರಾಮಕೃಷ್ಣರುಶ್ರೀರಾಮಕೃಷ್ಣರು ಪಡೆದುಕೊಂಡ ಭಗವದನುಭವಗಳು ಅವರನ್ನು ಒಬ್ಬ ದಿವ್ಯ ಜ್ಯೋತಿಪುರುಷರನ್ನಾಗಿ ಪರಿವರ್ತಿಸಿದ್ದವು. ಇದು ಅವರನ್ನು ಸಂಪರ್ಕಿಸಿದವರ ಮೇಲೂ ಸಕಾರಾತ್ಮಕ ಪ್ರಭಾವ ಉಂಟುಮಾಡುತ್ತಿತ್ತು. ಹಾಗೆಯೇ ಸಂದೇಹವಾದಿಗಳಾಗಿದ್ದ ಬುದ್ಧಿಜೀವಿಗಳ ವಲಯದ ಮೇಲೆ ಪ್ರಭಾವ ಬೀರಬಲ್ಲ ಆಧ್ಯಾತ್ಮಿಕ ನಿಶ್ಚಯಶಕ್ತಿಯನ್ನು ಕೂಡ ಅವರಿಗೆ ಪ್ರದಾನ ಮಾಡಿತು.

    ವೈಚಾರಿಕ ಮನಸ್ಸಿನವರಿಗೆ ‘ದೇವರು’ ಎಂಬ ಪದವು ಒಂದು ಒಗಟಿನಂತೆ ಕಾಣಬಹುದು. ಇಂದ್ರಿಯಗಳ ಚೌಕಟ್ಟಿನಲ್ಲಿಯೇ ಬಾಳುತ್ತಿರುವವರಿಗೆ ಇದೊಂದು ವಿಸ್ಮಯದಾಯಕ ಪದವೆಂದು ತೋರಬಹುದು. ಧಾರ್ವಿುಕ ಮನೋಭಾವವುಳ್ಳ ಜನರು, ತಮ್ಮ ಶ್ರದ್ಧೆಯ ಬಲದಿಂದ ದೇವರನ್ನು ಹೆಚ್ಚು ವಾಸ್ತವವೆಂದು ಭಾವಿಸುತ್ತಾರೆ. ಆದರೆ ಶ್ರೀರಾಮಕೃಷ್ಣರ ಪ್ರಭಾವವು ಎಷ್ಟಿತ್ತೆಂದರೆ, ಆಧ್ಯಾತ್ಮಿಕ ಸಾಧಕರು ಮಾತ್ರವಲ್ಲದೆ, ನಾಸ್ತಿಕರು ಮತ್ತು ಅಜ್ಞೇಯವಾದಿಗಳು ಸಹ ಭಗವಂತನ ಅಸ್ತಿತ್ವದಲ್ಲಿ ಶ್ರದ್ಧೆಯಿಡುವಂತಾಯಿತು. ಅಷ್ಟು ಮಾತ್ರವಲ್ಲ, ಅಂಥ ಜನರು ಭಗವಂತನ ಅಸ್ತಿತ್ವದ ಸತ್ಯವನ್ನು ಅನ್ವೇಷಿಸುವ ಸಾಧ್ಯತೆಯನ್ನು ಪರಿಗಣಿಸುವಂತೆಯೂ ಆಯಿತು.

    ಶ್ರೀರಾಮಕೃಷ್ಣರ ಜೀವನಚರಿತ್ರೆಯಲ್ಲಿ ಅವರ ಸ್ವಂತ ಆಧ್ಯಾತ್ಮಿಕ ಅನುಭವಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನೋಡುತ್ತೇವೆ. ಹಾಗೆಯೇ ಅವರ ಶಿಷ್ಯರು ಮತ್ತು ಭಕ್ತರ ಜೀವನದಲ್ಲಿಯೂ ಇಂಥ ಬೇಕಾದಷ್ಟು ಘಟನೆಗಳು ಕಂಡುಬರುತ್ತವೆ. ಈ ಎಲ್ಲ ಅನುಭವಗಳಲ್ಲಿ ದಿವ್ಯತೆಯನ್ನು ಕಂಡುಕೊಳ್ಳುವ ಹಲವು ಮಾರ್ಗಗಳು, ವಿಧಾನಗಳು ಹಾಗೂ ದಿವ್ಯತೆಯ ಹಲವು ರೂಪಗಳು ಅತ್ಯಂತ ಸ್ಪುಟವಾಗಿ ಅಭಿವ್ಯಕ್ತಗೊಂಡಿವೆ. ಈ ಸಂನ್ಯಾಸಿ ಮತ್ತು ಗೃಹಸ್ಥಭಕ್ತರು, ಈ ಗುರುದೇವರು ಮಾನವರೂಪದಲ್ಲಿ ಇರುವ ಭಗವಂತನೇ ಎಂಬುದನ್ನು ಸುಸ್ಪಷ್ಟವಾಗಿ ಅನುಭವಕ್ಕೆ ತಂದುಕೊಂಡಿದ್ದರು.

    ಶ್ರೀರಾಮಕೃಷ್ಣರು ಅತ್ಯುನ್ನತ ಆಧ್ಯಾತ್ಮಿಕ ಸ್ಥಿತಿಯಾದ ಸಮಾಧಿಯನ್ನು ಸುತ್ತಲಿನ ಜನರು ನೋಡುತ್ತಿರುವಂತೆಯೇ ಮತ್ತೆ ಮತ್ತೆ ಅನುಭವಿಸುತ್ತಿದ್ದರು. ಹೀಗಾಗಿ ಅವರ ದಿವ್ಯಜೀವನವು ಎಲ್ಲರ ದೃಷ್ಟಿಗೋಚರವಾದ ಪಾರದರ್ಶಕತೆಯಿಂದ ಕೂಡಿತ್ತು. ಆಧ್ಯಾತ್ಮಿಕತೆಯ ಇಂಥ ಅದ್ಭುತ ದೃಶ್ಯವು ಆಧುನಿಕ ಕಾಲದಲ್ಲಿ ಎಂದೂ ಕಾಣಬಂದಿಲ್ಲವೆಂದೇ ಹೇಳಬೇಕು. ಹೀಗಾಗಿ ಶ್ರೀರಾಮಕೃಷ್ಣರ ಜೀವಿತವು ಭಗವದವತರಣದ ಸುಲಭಗ್ರಾಹ್ಯ ಉದಾಹರಣೆಯೆನ್ನಬಹುದು.

    ಮಾನವ ಜೀವನವು ಅನೇಕ ಹೋರಾಟಗಳಿಂದ ಮತ್ತು ಕಷ್ಟನಷ್ಟಗಳಿಂದ ಕೂಡಿರಬಹುದು. ಆದರೆ ಭಗವತ್ಸಾಕ್ಷಾತ್ಕಾರದಲ್ಲಿ ಮಾತ್ರವೇ ಜೀವನದ ಪರಮಾರ್ಥವು ನೆಲೆಗೊಂಡಿದೆ. ಹಾಗೆ ನೋಡಿದರೆ, ಎಲ್ಲ ಮಹಾತ್ಮರೂ ಈ ಆದರ್ಶವನ್ನೇ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು. ಆದರೆ ಶ್ರೀರಾಮಕೃಷ್ಣರ ವೈಶಿಷ್ಟ್ಯ ಇರುವುದು ಭಗವತ್ಸಾಕ್ಷಾತ್ಕಾರದ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಇದಕ್ಕೆ ಮಾತ್ರವೇ ಒತ್ತನ್ನು ನೀಡಿರುವ ಧೋರಣೆ. ಹಾಗೂ ಮನುಷ್ಯನೊಬ್ಬನು ಈ ದಿಶೆಯಲ್ಲಿ ನಡೆಯಬಹುದು ಎಂಬ ಸಾಧ್ಯತೆಯನ್ನು ಸಾಬೀತುಪಡಿಸಿದರು.

    ಚರ್ಚೆಯ ವಿಷಯ: ಪ್ರಾಚೀನ ಕಾಲದಿಂದಲೂ ಭಗವಂತನ ಅಸ್ತಿತ್ವದ ಪುರಾವೆಯ ಬಗ್ಗೆ ವಿದ್ವಾಂಸರು ಮತ್ತು ತತ್ತ್ವಶಾಸ್ತ್ರಜ್ಞರು ರ್ಚಚಿಸುತ್ತಲೇ ಬಂದಿದ್ದಾರೆ; ಈಗಲೂ ಇದೆ.

    ಮಾನವನ ಮನಸ್ಸು ಸೀಮಿತವಾದುದು. ಅದು ವ್ಯಕ್ತಿಗತ ಶರೀರ, ಸಾಧಾರಣ ಇಂದ್ರಿಯಾನುಭೂತಿ ಮತ್ತು ಸಾಮಾನ್ಯ ಪ್ರಾಪಂಚಿಕ ತರ್ಕಗಳ ಜೊತೆಗೆ ತಾದಾತ್ಮ್ಯ ಹೊಂದಿದೆ. ಹೀಗಾಗಿ ಅದಕ್ಕಿಂತಲೂ ಸೂಕ್ಷ್ಮವಾದ, ಅಗಾಧವಾದ, ಉನ್ನತವಾದ ಮತ್ತು ನಿರಪೇಕ್ಷವಾದ ಭಗವದನುಭೂತಿಯನ್ನು ಹೇಗೆ ತಾನೇ ಗ್ರಹಿಸಬಲ್ಲುದು? ಇದಕ್ಕೆ ಬೇರೆಯದೇ ವಿಧಾನವಿದೆ. ಭಗವಂತನ ಬಗ್ಗೆ ನೇರವೂ ಹೃತ್ಪೂರ್ವಕವೂ ಆದ ಕಾತರತೆ ಮತ್ತು ಅದರ ಜೊತೆ ಜೊತೆಗೆ ಭಗವಂತನ ಸಾನ್ನಿಧ್ಯದ ಮಾನಸಿಕ ಸಂಪರ್ಕ ಮತ್ತು ಅನುಭವ – ಇದು ಮಾತ್ರವೇ ಅಂಥ ಏಕಮಾತ್ರ ವಿಧಾನವಾಗಬಲ್ಲುದು. ಶ್ರೀರಾಮಕೃಷ್ಣರು ಪಡೆದುಕೊಂಡ ಭಗವದನುಭೂತಿಯು ತರ್ಕ ಅಥವಾ ವಾದ ವಿವಾದಗಳಿಗೆ ಒಳಪಡುವಂಥದ್ದಲ್ಲ. ಆದರೆ, ಜಗತ್ತಿನ ಸಾಧಾರಣ ಜನರಿಗೆ ಸಮರ್ಪಕವಾಗಿ ಅರಿವು ಮಾಡಿಸಬಹುದಾದ ಪ್ರಶ್ನಾತೀತ ಮತ್ತು ಮೂರ್ತರೂಪದ ಭಗವದನುಭೂತಿಯನ್ನೇ ಅವರು ಪಡೆದುಕೊಂಡಿದ್ದರೆಂಬುದು ನಿರ್ವಿವಾದ. ಅಂಥ ಅನುಭೂತಿಯ ನೇರ ಸಂಪರ್ಕ ಹೊಂದಿದವರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು. ಅವರು ತಮ್ಮ ಪ್ರಾರಂಭಿಕ ಅನ್ವೇಷಣೆ ಮತ್ತು ಭಗವಂತನ ಅಸ್ತಿತ್ವದ ಬಗೆಗಿನ ಅನ್ವೇಷಣೆಯ ಸಮಯದಲ್ಲಿ ಶ್ರೀರಾಮಕೃಷ್ಣರ ಅಪೂರ್ವ ಸಂಪರ್ಕಕ್ಕೆ ಬಂದಿದ್ದರು. ಸ್ವಾಮಿ ವಿವೇಕಾನಂದರು ಈ ಘಟನೆಯನ್ನು ಹೀಗೆ ವಿವರಿಸುತ್ತಾರೆ: ‘ಈ ಮಹಾನುಭಾವರು ನಮ್ಮ ದೇಶದಲ್ಲಿ ಅತಿ ಮುಖ್ಯ ವಿಶ್ವವಿದ್ಯಾನಿಲಯವಿರುವ ಭರತಖಂಡದ ರಾಜಧಾನಿಯಾದ ಕಲ್ಕತ್ತೆಯ ಸಮೀಪದಲ್ಲಿ ವಾಸಿಸುತ್ತಿದ್ದರು. ಕಲ್ಕತಾದ ವಿಶ್ವವಿದ್ಯಾನಿಲಯವು ವರ್ಷಂಪ್ರತಿ ನೂರಾರು ಜನ ಸಂಶಯವಾದಿಗಳು, ಜಡವಾದಿಗಳನ್ನು ಉತ್ಪತ್ತಿ ಮಾಡುತ್ತಿತ್ತು. ಅಂಥ ವಿಶ್ವವಿದ್ಯಾನಿಲಯದ ಹಲವು ಸಂಶಯವಾದಿಗಳೂ ಜಡವಾದಿಗಳೂ ಇವರ ಮಾತನ್ನು ಕೇಳಲು ಬರುತ್ತಿದ್ದರು. ನಾನೂ ಇವರ ವಿಷಯ ತಿಳಿದು ಅವರ ಮಾತನ್ನು ಕೇಳಲು ಹೋದೆ. ಅವರು ಯಾವ ಒಂದು ವಿಶೇಷವೂ ಇಲ್ಲದ ಸಾಧಾರಣ ಮಾನವರಂತೆ ಕಂಡುಬಂದರು. ಅವರ ಭಾಷೆ ಅತಿ ಸರಳವಾಗಿತ್ತು. ‘ಇವರು ಮಹಾಗುರುಗಳೇ!’ ಎಂದು ಯೋಚಿಸಿ,ಅವರ ಸಮೀಪಕ್ಕೆ ಹೋಗಿ ನಾನು ಜೀವನದಲ್ಲಿ ಎಲ್ಲರನ್ನೂ ಕೇಳುತ್ತಿದ್ದ ಪ್ರಶ್ನೆಯನ್ನೇ ಹಾಕಿದೆ: ‘ಮಹಾಶಯರೇ, ನೀವು ದೇವರನ್ನು ನಂಬುವಿರಾ?’ ಎಂದೆ. ‘ಹೌದು’ ಎಂದರು ಅವರು. ‘ನೀವು ಅದನ್ನು ಸಮರ್ಥಿಸಬಲ್ಲಿರಾ?’ ಎಂದೆ. ‘ಹೌದು’ ಎಂದರು. ‘ಹೇಗೆ?’ ಎಂದೆೆ. ‘ಹೇಗೆೆಂದರೆ, ನಾನು ನಿನ್ನನ್ನು ಇಲ್ಲಿ ಹೇಗೆ ನೋಡುತ್ತಿರುವೆನೋ, ಹಾಗೇ ದೇವರನ್ನೂ ನೋಡುವೆ. ಆದರೆ ಇದಕ್ಕಿಂತ ಹೆಚ್ಚು ಸತ್ಯವಾಗಿ.’ ಇದು ನನ್ನನ್ನು ತಕ್ಷಣವೇ ಆಕರ್ಷಿಸಿತು. ‘ನಾನು ದೇವರನ್ನು ನೋಡಿರುವೆನು; ನಾನು ಪ್ರಪಂಚವನ್ನು ನೋಡುವುದಕ್ಕಿಂತ ಅತಿಶಯವಾಗಿ ಧರ್ಮದ ಸತ್ಯಗಳನ್ನು ನೋಡಬಹುದು, ಅನುಭವಿಸಬಹುದು’ ಎಂದು ಧೈರ್ಯವಾಗಿ ಹೇಳಬಲ್ಲ ವ್ಯಕ್ತಿಯನ್ನು ಜೀವನದಲ್ಲಿ ಪ್ರಥಮಬಾರಿ ಕಂಡೆ. ಪ್ರತಿದಿನವೂ ಅವರ ಬಳಿ ಹೋಗಲು ಆರಂಭಿಸಿದೆ. ಈ ಮೂಲಕ, ಅಧ್ಯಾತ್ಮವನ್ನು ವಾಸ್ತವವಾಗಿ ಕೊಡಬಹುದು ಎಂಬುದನ್ನು ಸತ್ಯವಾಗಿ ಕಂಡೆ.’

    ಶ್ರೀರಾಮಕೃಷ್ಣರು ಸ್ವತಃ ಭಗವತ್ಸಾಕ್ಷಾತ್ಕಾರವನ್ನು ಪಡೆದುಕೊಂಡದ್ದೇ ಅಲ್ಲದೆ, ಆ ದರ್ಶನವನ್ನು ಇತರರಿಗೂ ನೀಡುವ ಸಾಮರ್ಥ್ಯ ಹೊಂದಿದ್ದರು. ಸಂದೇಹವಾದಿ ಯಾಗಿದ್ದ ಯುವಕ ನರೇಂದ್ರನು (ಸ್ವಾಮಿ ವಿವೇಕಾನಂದ) ಅನಂತರ ಸ್ವಂತ ಸಾಧನೆಯಿಂದಲೂ ಮತ್ತು ಶ್ರೀರಾಮಕೃಷ್ಣರ ಪವಾಡಸದೃಶಸ್ಪರ್ಶದಿಂದಲೂ ಆಧುನಿಕ ಜಗತ್ತಿನ ಅತ್ಯಂತ ಶಕ್ತಿಶಾಲಿ ಆಧ್ಯಾತ್ಮಿಕ ವ್ಯಕ್ತಿಯಾಗಿ ಮಾರ್ಪಾಡು ಹೊಂದಿದನು.

    ಶ್ರೀರಾಮಕೃಷ್ಣರು ತಮ್ಮ ಭಗವದ್ದರ್ಶನದಿಂದ ಉಂಟಾದ ದಿವ್ಯೋನ್ಮಾದದ ಆಧ್ಯಾತ್ಮಿಕ ಅನುಭವವನ್ನು ಸಾಮಾನ್ಯ ಜನರೂ ಅರ್ಥಮಾಡಿಕೊಳ್ಳುವಂತೆ ವಿವರಿಸಿದರು. ಅದಲ್ಲದೆ ಅವರು ದಿವ್ಯತೆಯ ಆಯಾಮದಲ್ಲಿದ್ದ ಅನೇಕ ರಹಸ್ಯಗಳನ್ನು ಮಾನವಪ್ರಜ್ಞೆಯ ಹಂತದ ಮಟ್ಟಕ್ಕೆ ತಂದು ವಿವರಿಸುವ ಕೆಲಸವನ್ನು ಮಾಡಿದರು. ಅವುಗಳಲ್ಲಿ ಕೆಲವೆಂದರೆ, ಕುಂಡಲಿನಿ ಮುಂತಾದ ಆಧ್ಯಾತ್ಮಿಕ ಅನುಭವಗಳು, ವಿವಿಧರೀತಿಯ ಭಾವಗಳು, ಭಕ್ತಿಮಾರ್ಗದ ಹಲವಾರು ರೂಪಗಳು ಮತ್ತು ರಾಜಯೋಗದ ಅಂತಿಮ ಹಂತವಾದ ನಿರ್ವಿಕಲ್ಪ ಸಮಾಧಿ.

    ತಾವು ಪಡೆದುಕೊಂಡ ಭಗವತ್ಸಾಕ್ಷಾತ್ಕಾರವನ್ನು ವಿವರಿಸುತ್ತ ಶ್ರೀರಾಮಕೃಷ್ಣರು ಹೀಗೆ ಹೇಳುತ್ತಾರೆ: ‘ದೇವಿಯ ದರ್ಶನವಾಗಲಿಲ್ಲವಲ್ಲ ಎಂದು ನನ್ನ ಹೃದಯದಲ್ಲಿ ಅಸಹ್ಯವಾದ ವೇದನೆ ಉಂಟಾಗುತ್ತಿತ್ತು. ನೀರನ್ನು ತೆಗೆಯುವುದಕ್ಕೆ ಟವಲನ್ನು ಹಿಂಡುತ್ತಾರಲ್ಲ, ಹಾಗೆ ಯಾರೋ ನನ್ನ ಹೃದಯವನ್ನು ಹಿಂಡಿದಂತಾಗುತ್ತಿತ್ತು. ತಾಯಿಯ ದರ್ಶನ ನನಗೆಂದೂ ಆಗುವುದೇ ಇಲ್ಲ ಎಂದು ಭಾವಿಸಿ ನನ್ನ ಹೃದಯ ತೀವ್ರ ವೇದನೆಯಿಂದ ಚಡಪಡಿಸುತ್ತಿತ್ತು. ಭಗವತಿಯನ್ನು ಕಾಣದೆ ಇನ್ನು ಜೀವಿಸಿದ್ದು ಪ್ರಯೋಜನವಿಲ್ಲ ಎಂದು ಚಿಂತಿಸತೊಡಗಿದೆ. ಗರ್ಭಗುಡಿಯಲ್ಲಿ ಒಂದು ಕತ್ತಿ ಇತ್ತು. ನನ್ನ ದೃಷ್ಟಿ ಕೂಡಲೇ ಅದರ ಮೇಲೆ ಬಿತ್ತು. ಇದರಿಂದಲೇ ಈ ಜೀವನವನ್ನು ಮುಗಿಸಿಬಿಡುತ್ತೇನೆಂದು ಹುಚ್ಚನಂತೆ ಓಡಿ ಅದನ್ನು ತೆಗೆದುಕೊಳ್ಳುವಷ್ಟರಲ್ಲಿ ತಾಯಿಯ ಅದ್ಭುತ ದರ್ಶನವಾಯಿತು. ಪ್ರಜ್ಞಾ ಶೂನ್ಯನಾಗಿ ಕೆಳಗೆ ಬಿದ್ದೆ. ಅನಂತರ ಹೊರಗಡೆ ಏನು ನಡೆಯುತ್ತಿದೆ, ಅಂದು ಮತ್ತು ಮರುದಿನ ಹೇಗೆ ಕಳೆದುಹೋಯಿತು – ಇದೊಂದೂ ನನಗೆ ತಿಳಿಯಲಿಲ್ಲ. ಆದರೆ ಒಳಗೆ ಹಿಂದೆಂದೂ ಅನುಭವಿಸದ ಅದ್ಭುತ ಆನಂದ ಪ್ರವಾಹ ಹರಿಯುತ್ತಿತ್ತು. ತಾಯಿಯ ದಿವ್ಯಜ್ಯೋತಿಯನ್ನು ನಾನು ಕಂಡೆ.’

    ಈ ಮೇಲಿನ ದರ್ಶನದ ವಿಷಯವನ್ನು ಇನ್ನೊಂದು ಸಂದರ್ಭದಲ್ಲಿ ಈ ರೀತಿ ವಿವರಿಸಿದ್ದಾರೆ: ‘ಮನೆ, ಬಾಗಿಲು, ಮಂದಿರ ಎಲ್ಲವೂ ಮಾಯವಾದವು. ಎಲ್ಲೂ ಏನೂ ಕಾಣುತ್ತಿಲ್ಲ. ಕೇವಲ ಅಸೀಮ ಅನಂತ ಜ್ಯೋತಿಸ್ಸಮುದ್ರವೊಂದೇ ಕಾಣುತ್ತಿದೆ. ಎಲ್ಲಿ ನೋಡಿದರೂ, ಎಷ್ಟೇ ದೂರ ಕಣ್ಣು ಹಾಯಿಸಿದರೂ ನಾಲ್ಕು ಕಡೆಯೂ ಅದರ ಉಜ್ವಲ ಜ್ವಾಲಮಾಲೆಯು ಭೋರ್ಗರೆಯುತ್ತ ಎಲ್ಲವನ್ನೂ ನುಂಗಿಹಾಕುವಂತೆ ಮುನ್ನುಗ್ಗುತ್ತಿತ್ತು. ನೋಡುತ್ತಿದ್ದಂತೆಯೇ ಅದು ನನ್ನ ಮೇಲೆ ಎರಗಿ ನನ್ನನ್ನು ಎಲ್ಲಿಯೊ ಮುಳುಗಿಸಿಬಿಟ್ಟಿತು. ನಾನು ಏಳುತ್ತ ಮುಳುಗುತ್ತ ಪ್ರಜ್ಞಾಶೂನ್ಯನಾಗಿ ಬಿದ್ದುಬಿಟ್ಟೆ.’

    ಆಧ್ಯಾತ್ಮಿಕ ಅನುಭವಗಳು: ಶ್ರೀರಾಮಕೃಷ್ಣರು ದಿವ್ಯಶಕ್ತಿಯ ನಿರಂತರ ಸಾನ್ನಿಧ್ಯದ ಜೀವಂತ ಅನುಭವವನ್ನು ಪಡೆದುಕೊಂಡದ್ದು ಸಾಕಾರ ಭಗವಂತನ ಜೊತೆಗೆ ಸಂಬಂಧವನ್ನು ಸ್ಥಾಪಿಸುವ ಮೂಲಕ. ಈ ನಿಟ್ಟಿನಲ್ಲಿ ಅವರಿಗೆ ಉಂಟಾದ ದರ್ಶನಗಳು ಹಲವಾರು. ಶಿವ, ರಾಮ, ಹನುಮಂತ, ಬೃಂದಾವನದ ಆಸುಪಾಸಿನಲ್ಲಿ ಶ್ರೀಕೃಷ್ಣ, ಧಾರ್ವಿುಕ ಉಪನ್ಯಾಸದ ಸಮಯದಲ್ಲಿ ಚೈತನ್ಯ ಮಹಾಪ್ರಭು, ಏಸುಕ್ರಿಸ್ತ, ಪ್ರವಾದಿ ಮಹಮ್ಮದ್ ಪೈಗಂಬರ್ ಮುಂತಾದವರು ಅಂತಹ ಕೆಲವು ನಿದರ್ಶನಗಳು. ಹಾಗೆಯೇ ಅವರು ಕಾಳೀಮಾತೆಯನ್ನು ದಿವ್ಯತೆಯ ಅತ್ಯಂತ ಶ್ರೇಷ್ಠ ಅಭಿವ್ಯಕ್ತಿ ಎಂದು ಆರಾಧಿಸುತ್ತಿದ್ದರು. ಹಲವಾರು ಆಧ್ಯಾತ್ಮಿಕ ಅನುಭವಗಳನ್ನು ಪಡೆದುಕೊಂಡ ನಂತರವೂ ಶ್ರೀರಾಮಕೃಷ್ಣರ ಮನಸ್ಸು ವಿಶ್ವಕೇಂದ್ರದಲ್ಲಿ ನೆಲೆಸಿರುವ ದಿವ್ಯಶಕ್ತಿಯ ಸಂಪರ್ಕವನ್ನು ಸದಾ ಹೊಂದಿತ್ತು. ಈ ಶಕ್ತಿಯನ್ನು ಅವರು ‘ಕಾಳೀಮಾತೆ’ ಎಂದು ಕರೆದರು. ಶ್ರೀರಾಮಕೃಷ್ಣರು ಪಡೆದುಕೊಂಡ ಭಗವದನುಭವಗಳು ಅವರನ್ನು ಒಬ್ಬ ದಿವ್ಯ ಜ್ಯೋತಿಪುರುಷರನ್ನಾಗಿ ಪರಿವರ್ತಿಸಿದ್ದವು. ಇದು ಅವರನ್ನು ಸಂರ್ಪಸಿದವರ ಮೇಲೂ ಸಕಾರಾತ್ಮಕ ಪ್ರಭಾವವನ್ನು ಉಂಟುಮಾಡುತ್ತಿತ್ತು. ಹಾಗೆಯೇ ಸಂದೇಹವಾದಿಗಳಾಗಿದ್ದ ಅಂದಿನ ಕಾಲದ ಬಹುದೊಡ್ಡ ಬುದ್ಧಿಜೀವಿಗಳ ವಲಯದ ಮೇಲೆ ಪ್ರಭಾವ ಬೀರಬಲ್ಲ ಮತ್ತು ಅವರನ್ನು ಪರಿವರ್ತಿಸಬಲ್ಲ ಆಧ್ಯಾತ್ಮಿಕ ನಿಶ್ಚಯಶಕ್ತಿಯನ್ನು ಕೂಡ ಪ್ರದಾನ ಮಾಡಿತು. ಅವರಲ್ಲಿ ಕೆಲವರೆಂದರೆ, ನರೇಂದ್ರನಾಥ (ಮುಂದೆ ಸ್ವಾಮಿ ವಿವೇಕಾನಂದ), ಗಿರೀಶಚಂದ್ರ ಘೊಷ್, ಈಶ್ವರಚಂದ್ರ ವಿದ್ಯಾಸಾಗರ ಮುಂತಾದವರು.

    ಸಿರಿಗೆರೆಯ ತರಳಬಾಳು ಮಠದ ಶಿವೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು 1937ರ ಸುಮಾರಿಗೆ ತಮ್ಮ ಸ್ವಂತ ಪ್ರಯೋಜನಕ್ಕಾಗಿ ಬರೆದುಕೊಂಡಿದ್ದ ದಿನಚರಿಯನ್ನು ‘ಆತ್ಮನಿವೇದನೆ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ಪೂಜ್ಯ ಸ್ವಾಮೀಜಿಯವರು ಭಗವಂತನ ಅಸ್ತಿತ್ವದ ಬಗ್ಗೆ ಮೂರು ಸಾಕ್ಷ್ಯಗಳನ್ನು ನೀಡುತ್ತಾರೆ: 1. ಪರಮಾತ್ಮನ ಪರಮಾದ್ಭುತ ಸೃಷ್ಟಿಯಾದ ಈ ಜಗತ್ತು 2. ಶ್ರೀರಾಮಕೃಷ್ಣ ಪರಮಹಂಸರು ಮತ್ತು 3. ಭಗವಂತನ ಅಸ್ತಿತ್ವದ ಅಧಿಕೃತ ಶಾಸ್ತ್ರೀಯ ದಾಖಲೆಗಳಾದ ವೇದಗಳು. ಶ್ರೀರಾಮಕೃಷ್ಣರನ್ನು ಭಗವಂತನ ಅಸ್ತಿತ್ವದ ಪುರಾವೆಗಳಲ್ಲಿ ಒಂದನ್ನಾಗಿ ಪೂಜ್ಯರು ಹೆಸರಿಸಿರುವುದು ನಿಜಕ್ಕೂ ಅಪೂರ್ವವಾದುದು. ಶ್ರೀರಾಮಕೃಷ್ಣರ ಜೀವನ ಮತ್ತು ಬೋಧನೆಗಳು ಹೇಗೆ ಜಗತ್ತಿನಾದ್ಯಂತ ಜನರ ಮನಸ್ಸುಗಳ ಒಳಹೊಕ್ಕಿವೆ ಮತ್ತು ಅವರೆಲ್ಲರಿಗೆ ಭಗವಂತನು ಸಾಕ್ಷಾತ್ಕರಿಸಿ ಕೊಳ್ಳಬಲ್ಲ ನಿತ್ಯತತ್ತ್ವವೇ ಹೊರತು, ಬರೀ ಕಲ್ಪನೆಯ ಜಾಲವಲ್ಲ ಎನ್ನುವುದನ್ನು ದೃಢಪಡಿಸಿವೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.

    ಶ್ರೀರಾಮಕೃಷ್ಣರ ಜೀವನದಿಂದ ನಾವು ಕಲಿಯಬಹುದಾದ ಜೀವನಪಾಠಗಳು ಹೀಗಿವೆ: 1. ಭಗವಂತನಿದ್ದಾನೆ ಮತ್ತು ಈ ಭೂಮಿಯಲ್ಲಿ ಆತನಿಗಿಂತ ಹೆಚ್ಚಿನದು ಯಾವುದೂ ಇಲ್ಲ ಎಂಬ ಉತ್ಕಟ ಕಾತರಭಾವದಿಂದ ಕೂಡಿದ ಹೃದಯವನ್ನು ಮಾನವನು ಹೊಂದಿದಾಗ ಮಾತ್ರ ಅವನನ್ನು ನೇರವಾಗಿ ಸಾಕ್ಷಾತ್ಕರಿಸಿಕೊಳ್ಳಬಹುದು. 2. ಭಗವಂತನ ದರ್ಶನವೇ ಧರ್ಮದ ಸಾರಸತ್ವ. 3. ಜಗತ್ತಿನ ಎಲ್ಲ ಧರ್ಮಗಳೂ ಒಂದೇ ಗುರಿಯೆಡೆಗೆ ಮಾನವನನ್ನು ಕರೆದುಕೊಂಡು ಹೋಗುವ ವಿವಿಧ ಮಾರ್ಗಗಳು.

    ಆಧುನಿಕ ಜಗತ್ತು ಅಂಧಕಾರದಲ್ಲಿ ಮುಳುಗಿದೆ; ಎಲ್ಲೆಲ್ಲೂ ಮಂಕು ಕವಿದಿದೆ. ಇಂಥ ಪರಿಸ್ಥಿತಿಯಲ್ಲಿ ಭಗವತ್ಸಮರ್ಪಿತ ಜೀವನ ಮತ್ತು ಭಗವಂತನಿಗಾಗಿ ಕಾತುರತೆ – ಇವೆರಡೂ ಅಬದ್ಧ ಮತ್ತು ಅನುಷ್ಠಾನ ಯೋಗ್ಯವಲ್ಲವೆಂಬಂತೆ ತೋರಿಬರುತ್ತಿದೆೆ. ವ್ಯಕ್ತಿಗಳು, ರಾಷ್ಟ್ರಗಳು ಅಧಿಕಾರ ಮತ್ತು ಸ್ವಪ್ರತಿಷ್ಠೆಗಾಗಿ ನಾಗಾಲೋಟದ ಸ್ಪರ್ಧೆಯಲ್ಲಿ ತೊಡಗಿದ್ದಾರೆ. ಇಂಥ ದಾರುಣ ಸಂದರ್ಭದಲ್ಲಿ ಪ್ರಾಪಂಚಿಕ ಅಪೇಕ್ಷೆ ಮತ್ತು ಬಯಕೆಗಳ ಸೋಂಕೂ ಇಲ್ಲದೆ, ಭಗವಂತನಿಗೆ ಮುಡಿಪಾದ ಶ್ರೀರಾಮಕೃಷ್ಣರ ಮಹದದ್ಭುತ ಜೀವ ನವು ತನ್ನ ಅಸದಳ ಪ್ರಕಾಶ-ಪ್ರಭೆಗಳಿಂದ ನಮ್ಮೆಲ್ಲರ ದಾರಿದೀಪವಾಗಿ ಬೆಳಗುತ್ತಿದೆ.

    (ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts