More

    ಗುಣಮಟ್ಟ ಇದ್ದರೆ ಮಾತ್ರ ಕಾಫಿಗೆ ಭವಿಷ್ಯ

    ಸೋಮವಾರಪೇಟೆ: ಗುಣಮಟ್ಟದ ಉತ್ಪನ್ನದಿಂದ ಮಾತ್ರ ಭಾರತದ ಕಾಫಿಗೆ ಭವಿಷ್ಯ ಇದೆ ಎಂದು ಕಾಫಿ ಮಂಡಳಿ ಉಪನಿರ್ದೇಶಕ ಡಾ.ಚಂದ್ರಶೇಖರ್ ಅಭಿಪ್ರಾಯಿಸಿದರು.

    ಕಾಫಿ ಮಂಡಳಿ ವತಿಯಿಂದ ನಾಕೂರು-ಶಿರಂಗಾಲ ಮೂಲೆಮನೆ ಎಸ್ಟೇಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಫಿ ತೋಟದಲ್ಲಿ ಮಣ್ಣಿನ ಪೋಷಕಾಂಶ ನಿರ್ವಹಣೆ ಹಾಗೂ ಕಾಫಿ ತಳಿ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಕೊಳ್ಳುವವರು ಗುಣಮಟ್ಟದ ಕಾಫಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ರುಚಿಗೆ ಅನುಗುಣವಾಗಿ ಕಾಫಿ ಉತ್ಪನ್ನವನ್ನ್ನು ಕೊಟ್ಟಾಗ ಮಾತ್ರ ಬೇಡಿಕೆ ಹೆಚ್ಚಾಗಿ ಉತ್ತಮ ಬೆಲೆಯನ್ನು ನಿರೀಕ್ಷೆ ಮಾಡಬಹುದು ಎಂದು ಹೇಳಿದರು.

    ವರ್ಲ್ಡ್ ಕಾಫಿ ಕಾನ್ಫರೆನ್ಸ್ ನಡೆದ ಮೇಲೆ ಭಾರತದ ಕಾಫಿ ಗುಣಮಟ್ಟದಿಂದ ಕೂಡಿದೆ ಎಂಬ ಅಭಿಪ್ರಾಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗಿದೆ. ಈ ಕಾರಣದಿಂದ ಪ್ರತಿಯೊಬ್ಬ ಬೆಳೆಗಾರನು ಕಾಫಿ ಗುಣಮಟ್ಟ ಕಾಯ್ದುಕೊಳ್ಳುವ ಪ್ರಯತ್ನ ಮುಂದುವರಿಸಬೇಕು ಎಂದು ಕಿವಿಮಾತು ಹೇಳಿದರು.
    ಕಾಫಿ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಇದ್ದ ಭೂಮಿಯಲ್ಲೇ ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಗುಣಮಟ್ಟದ ಕಾಫಿ ಬೆಳೆಯುವ ಪ್ರಯತ್ನ ಮಾಡಬೇಕು. ಕಾಫಿ ಮಂಡಳಿ ಬೆಳೆಗಾರರಿಗೆ ಎಲ್ಲ ರೀತಿಯ ಸಹಕಾರ ಹಾಗೂ ಸಬ್ಸಿಡಿ ಸೌಲಭ್ಯ ನೀಡುತ್ತದೆ ಎಂದು ಭರವಸೆ ನೀಡಿದರು.

    ಮೂಲೆಮನೆ ಎಸ್ಟೇಟ್ ಹಾಗೂ ಸೌತ್ ಇಂಡಿಯಾ ಕಾಫಿ ಕಂಪನಿಯ ಮಾಲೀಕ ಅಕ್ಷಯ್ ದಶರಥ್ ಮಾತನಾಡಿ, ಸ್ಪೆಷಾಲಿಟಿ ಕಾಫಿ ಉತ್ಪಾದನೆ, ಗುಣಮಟ್ಟ ಕಾಯ್ದುಕೊಳ್ಳುವುದು, ರುಚಿ ಹಾಗೂ ಮಣ್ಣಿನ ಗುಣಕ್ಕೆ ತಕ್ಕದಾದ ತಳಿ ಆಯ್ಕೆ, ಭವಿಷ್ಯದ ಕಾಫಿ ಗಿಡದ ತಳಿಗಳ ಬಗ್ಗೆ ಹಾಗೂ ತಮ್ಮ ತೋಟದಲ್ಲಿರುವ ವಿವಿಧ ದೇಶಗಳ 11 ತಳಿಗಳ ಕುರಿತು ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಿದರು.

    ಮಣ್ಣು ವಿಜ್ಞಾನಿ ಡಾ.ನದಾಪ್ ಮಾತನಾಡಿದರು. ಕಾರ್ಯಾಗಾರದಲ್ಲಿ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮತ್ತು ಸದಸ್ಯರು, ಭಾಗವಹಿಸಿದ್ದರು. ಪ್ರಗತಿಪರ ಕೃಷಿಕರು ತಮ್ಮ ಕಾಫಿ ಕೃಷಿಯ ಅನುಭವ ಹಂಚಿಕೊಂಡರು. ಕಾಫಿ ಮಂಡಳಿಯ ವಿಸ್ತರಣಾಧಿಕಾರಿಗಳಾದ ರಂಜಿತ್ ಕುಮಾರ್, ಅಮಿ ಮೇರಿ, ಕೃಷ್ಣಕುಮಾರ್, ಲಕ್ಷ್ಮೀಕಾಂತ್, ಸೌತ್ ಇಂಡಿಯಾ ಕಾಫಿ ಕಂಪನಿಯ ತೇಜ್, ಸನ್ನಿ, ರತನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts