More

    ಕಾಫಿ ಕ್ರಿಕೆಟರ್ಸ್‌, ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ಗೆಲುವು

    ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಅರೆಭಾಷಿಕ ಗೌಡ ಜನಾಂಗದವರಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಫಿ ಕ್ರಿಕೆಟರ್ಸ್‌, ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ಗೆಲುವು ಸಾಧಿಸಿತು.


    ಮೊದಲ ಪಂದ್ಯ ಕುಕ್ಕನೂರು ಬುಲ್ಸ್ ಮತ್ತು ಕಾಫಿ ಕ್ರಿಕೆಟರ್ಸ್‌ ನಡುವೆ ನಡೆಯಿತು. ಟಾಸ್ ಸೋತ ಕುಕ್ಕನೂರು ಬುಲ್ಸ್ ತಂಡ ನಿಗದಿತ ೧೦ ಓವರ್‌ನಲ್ಲಿ ೭ ವಿಕೆಟ್ ಕಳೆದುಕೊಂಡು ೭೭ರನ್ ಕಲೆ ಹಾಕಿತು. ತಂಡದ ಪರ ಡ್ಯೂಕ್ ಕಾವೇರಿ ೧೭ ಎಸೆತದಲ್ಲಿ ೨೩ ರನ್ ಹೊರತುಪಡಿಸಿದಂತೆ ಉಳಿದ ಆಟಗಾರರು ಒಂದಂಕಿ ದಾಟುವಲ್ಲಿ ವಿಫಲರಾದರು. ಕಾಫಿ ಕ್ರಿಕೆಟರ್ಸ್‌ ಪರ ಸಿ.ವಿ.ವಿವನ್ ೨ ಓವರ್‌ನಲ್ಲಿ ೧೮ ರನ್ ನೀಡಿ ೨ ವಿಕೆಟ್ ಪಡೆದರು.


    ಗುರಿಬೆನ್ನಟ್ಟಿದ ಕಾಫಿ ಕ್ರಿಕೆಟರ್ಸ್‌ ೮.೪ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಅನಿಲ್ ಕುಡೆಕಲ್ಲು ೧೫, ಸಿ.ವಿ.ವಿವನ್ ೧೯, ಕುಜಲ್ ಕಾರ್ಯಪ್ಪ ೧೯, ಮಿಥುನ್ ೧೨, ರೋಹನ್ ೧೧ ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕುಕ್ಕನೂರು ಬುಲ್ಸ್ ಪರ ಯಶಿನ್ ಬೋಪಣ್ಣ, ಓಂಪ್ರಕಾಶ್ ಉಡುದೊಳಿರ, ಪ್ರವೀಣ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕಾಫಿ ಕ್ರಿಕೆಟರ್ಸ್‌ ತಂಡದ ಸಿ.ವಿ.ವಿವನ್ ಪಡೆದುಕೊಂಡರು.


    ಎರಡನೇ ಪಂದ್ಯದಲ್ಲಿ ಜಿ.ಕಿಂಗ್ಸ್ ಸಿದ್ದಲಿಂಗಪುರ-ಕುಕ್ಕನೂರು ಬುಲ್ಸ್ ನಡುವೆ ನಡೆಯಿತು. ಟಾಸ್ ಸೋತ ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ನಿಗದಿತ ೧೦ ಓವರ್‌ನಲ್ಲಿ ೭ ವಿಕೆಟ್ ಕಳೆದುಕೊಂಡು ೧೧೯ ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಈ ಕ್ರೀಡಾಕೂಟದಲ್ಲಿ ಗರಿಷ್ಟ ಮೊತ್ತ ದಾಖಲಿಸಿದ ತಂಡವಾಗಿ ಜಿ.ಕಿಂಗ್ಸ್ ಸಿದ್ದಲಿಂಗಪುರ ಗುರುತಿಸಿಕೊಂಡಿತ್ತು. ತಂಡದ ಪರ ಯತೀಶ್ ೫೨, ರಾಕೇಶ್ ೨೩, ನಿತಿನ್ ಚೊಕ್ಕಾಡಿ ೧೫ ದಾಖಲಿಸಿದರು. ಕುಕ್ಕನೂರು ಬುಲ್ಸ್ ಪರ ವಿನೋದ್ ಮೂಡಗದ್ದೆ ೨ ಓವರ್‌ನಲ್ಲಿ ೧೭ರನ್ ನೀಡಿ ೩ ವಿಕೆಟ್ ಕಬಳಿಸಿದರು. ದೀಪಕ್ ೨, ಓಂ ಪ್ರಕಾಶ್ ಉಡುದೊಳಿರ ೧ ವಿಕೆಟ್ ಪಡೆದರು.


    ಗುರಿಬೆನ್ನಟ್ಟಿದ ಕುಕ್ಕನೂರು ಬುಲ್ಸ್ ತಂಡ ೬.೨ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೩೬ ರನ್ ಕಲೆ ಹಾಕಿತು. ಪಂದ್ಯಾಟಕ್ಕೆ ಮಳೆ ಅಡ್ಡಿಯಾದ ಪರಿಣಾಮ ಡಕ್ವರ್ಥ್‌ಲೂಹಿಸ್ ನಿಯಮ ಪ್ರಕಾರ ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ೩೮ರನ್‌ಗಳಿಂದ ಗೆಲುವು ಸಾಧಿಸಿತು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡದ ಯತೀಶ್ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts