More

    ರಾಗಿ ಮಾರಲು ಇರುವ ಆಸಕ್ತಿ ಕೊಬ್ಬರಿಗಿಲ್ಲ; ಸರ್ಕಾರದ ತೀರ್ಮಾನದಿಂದ ರೈತರಲ್ಲಿ ಗೊಂದಲ

    ತಿಪಟೂರು: ಕೊಬ್ಬರಿ ಖರೀದಿಗೆ ನಫೆಡ್ ಕೇಂದ್ರ ಆರಂಭವಾಗಿದೆಯಾದರೂ, ರಾಗಿ ಮಾರಲು ಇರುವ ಆಸಕ್ತಿ ಕೊಬ್ಬರಿಗಿಲ್ಲದಂತಾಗಿದೆ. ನೋಂದಣಿ ಮಾಡಿಸಲು ಹೆಚ್ಚಿನ ರೈತರು ಮುಂದೆ ಬರುತ್ತಿಲ್ಲ.

    ಫೆ.2ರಂದು ನಗರದ ಎಪಿಎಂಸಿ ಹಳೆಯ ಆಡಳಿತ ಕಚೇರಿಯಲ್ಲಿ ನಫೆಡ್ ಕೇಂದ್ರ ಪ್ರಾರಂಭಿಸಲಾಗಿದ್ದು, ನೆಡ್ ಆರಂಭದ ಮೊದಲ ದಿನ 145 ರೈತರು, ಮರು ದಿನ 85, ಹಾಗೂ ಫೆ.4ರಂದು 109 ರೈತರು ನೋಂದಣಿ ಮಾಡಿಸಿದ್ದಾರೆ.

    ರಾಗಿ ಬೆಳೆದ ರೈತರ ಹಿತದೃಷ್ಟಿಯಿಂದ ಪ್ರತೀ ಕ್ವಿಂಟಾಲ್‌ಗೆ 3,578 ರೂಪಾಯಿಯಂತೆ ರಾಜ್ಯದಲ್ಲಿ ಒಟ್ಟಾರೆ 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ನಫೆಡ್ ಪ್ರಾರಂಭವಾಗಿದೆ.

    ಜಿಲ್ಲೆಯಲ್ಲಿ ಡಿ.16ರಂದು ನೋಂದಣಿ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಇಲ್ಲಿವರೆಗೂ 63,735 ರೈತರು ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ತಿಪಟೂರು ತಾಲೂಕಿನ ರೈತರ ಸಂಖ್ಯೆ 11,166. ಈ ಲೆಕ್ಕಕ್ಕೆ ಹೋಲಿಸಿದರೆ, ಕೊಬ್ಬರಿ ನೋಂದಣಿಗೆ ಹೆಚ್ಚಿನ ನಿರಾಸಕ್ತಿ ಕಂಡು ಬಂದಿದೆ.

    ರೈತರ ನಿರಾಸಕ್ತಿಗೆ ಕಾರಣ: •ಬೆಂಬಲ ಬೆಲೆ ಕ್ವಿಂಟಾಲಿಗೆ 11,750ರ ಜತೆಗೆ ರಾಜ್ಯ ಸರ್ಕಾರ 3 ಸಾವಿರ ರೂಪಾಯಿ ಪ್ರೋತ್ಸಾಹಧನ ಕೊಡುತ್ತೆ ಎಂಬ ನಿರೀಕ್ಷೆ. • ತಕ್ಷಣ ಹಣ ಪಾವತಿ ಖಾತ್ರಿ ಇಲ್ಲದಿರುವುದು. • ಕೇಂದ್ರ ನಿಗದಿಪಡಿಸಿರುವ ಎಫ್.ಎ.ಕ್ಯೂ.ಗುಣಮಟ್ಟದ ಗೊಂದಲ. (ನಿಗದಿದ ಅಳತೆಯ ರಿಂಗ್ ಮೂಲಕ ಕೊಬ್ಬರಿ ಒಳಕ್ಕೆ ಹೋದರೆ ಅಂತಹ ಕೊಬ್ಬರಿ ಖರೀದಿಸಲಾಗುವುದಿಲ್ಲ.)• ಪ್ರತಿ ಚೀಲಕ್ಕೂ ಯಂತ್ರ ಇಟ್ಟು ಕೊಬ್ಬರಿಯಲ್ಲಿರುವ ಎಣ್ಣೆ ಅಂಶ ಪತ್ತೆ ಮಾಡುವ ಕಂಡೀಷನ್. • ಕೇಂದ್ರ ನಿಗದಿಪಡಿಸಿರುವ 11,750 ರೂಪಾಯಿ ಸಾಲದಿರುವುದು.

    ನಫೆಡ್ ಖರೀದಿ ಕೇಂದ್ರ ಕೇವಲ ಸಾಂಕೇತಿಕ ಎನಿಸುತ್ತೆ. ಸರ್ಕಾರ ಬೆಲೆ ನಿಗದಿಯಲ್ಲಿ ತಾರತಮ್ಯ ಮಾಡದೆ ಸೂಕ್ತ ಬೆಲೆ ನಿಗದಿಪಡಿಸಬೇಕು. ಜತೆಗೆ ರಾಜ್ಯ ಸರ್ಕಾರ ಸಹಾಯಧನದ ನೀಡಬೇಕು. ಮತ್ತು ಖರೀದಿಸಿದ ಕೊಬ್ಬರಿಗೆ ತಕ್ಷಣ ಹಣ ಪಾವತಿ ಮಾಡಬೇಕು.
    |ತಿಮ್ಲಾಪುರ ದೇವರಾಜು ರೈತ ಸಂಘದ ತಾಲೂಕು ಅಧ್ಯಕ್ಷ

    ನಫೆಡ್ ಪ್ರಾರಂಭದ ಬಗ್ಗೆ ಪ್ರಚಾರವೇನೋ ಆಗಿದೆ. ಆದರೆ ಎಫ್.ಎ.ಕ್ಯೂ ಗುಣಮಟ್ಟದ ಕೊಬ್ಬರಿಗೆ ನಿಗದಿಪಡಿಸಿರುವ 11,750 ರೂಪಾಯಿ (ಕ್ವಿಂಟಾಲಿಗೆ) ಏನೇನೂ ಸಾಲದು. ಮಾರುಕಟ್ಟೆ ದರ ಇದರ ಆಜು-ಬಾಜಿನಲ್ಲೇ ಇರುವುದರಿಂದ ರಾಜ್ಯ ಸರ್ಕಾರ ಸಹಾಯಧನ ಘೋಷಿಸಿದರೆ ರೈತರ ನೋಂದಣಿ ಸಂಖ್ಯೆ ಹೆಚ್ಚಬಹುದು.
    | ನಾಗೇಶ್ ಪ್ರಗತಿಪರ ರೈತ ಬಿಳಿಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts