More

    ಅಲೆಗಳ ಅಬ್ಬರಕ್ಕೆ ಕರಾವಳಿ ತತ್ತರ

    ಗೋಕರ್ಣ: ಚಂಡಮಾರುತ ಪರಿಣಾಮದಿಂದ ಈ ಭಾಗದಲ್ಲಿ ಶನಿವಾರ ಮಧ್ಯಾಹ್ನದಿಂದ ಮಳೆ ಪ್ರಾರಂಭವಾಗಿದೆ. ಸಮುದ್ರದಲ್ಲಿ ಭಾರಿ ತೆರೆಗಳು ಎದ್ದು ತೀರದತ್ತ ಮುನ್ನುಗ್ಗುತ್ತಿವೆ. ಇದರಿಂದಾಗಿ ತದಡಿ ಬಂದರು ಬಳಿಯ ಮೂಡಂಗಿ ಗ್ರಾಮದಲ್ಲಿ ಮತ್ತು ತೊರ್ಕೆ ಗ್ರಾಪಂನ ಅಘನಾಶಿನಿ ನದಿ ಹಿನ್ನೀರು ಪ್ರದೇಶದ ಹೊಸ್ಕಟ್ಟದಲ್ಲಿರುವ ಸಾಕಷ್ಟು ಮೀನುಗಾರ ಮನೆಗಳು ಜಲಾವೃತವಾಗಿವೆ.
    ಅಘನಾಶಿನಿ ನದಿ ಹಿನ್ನೀರನಲ್ಲಿರುವ ಈ ಪ್ರದೇಶಗಳಲ್ಲಿ ಈ ಹಿಂದೆ ಕಟ್ಟಲಾದ ಗಜನಿ ಒಡ್ಡು ಅನೇಕ ಕಡೆ ಒಡೆದಿರುವುದು ಇದಕ್ಕೆ ಕಾರಣವಾಗಿದೆ. ಈ ಎರಡು ಗ್ರಾಮಗಳಲ್ಲಿರುವ 90ರಿಂದ 100 ಮನೆಗಳಲ್ಲಿ ಮೊಣಕಾಲು ಮಟ್ಟಕ್ಕೆ ನೀರು ನಿಂತಿದೆ. ಗೋಕರ್ಣ ಮಾದನಗೇರಿ ರಸ್ತೆಯಿಂದ ಹೊಸ್ಕಟ್ಟಕ್ಕೆ ಹೋಗುವ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ತುಂಬಿ ಹೊಸ್ಕಟ್ಟ ಮತ್ತು ತೊರೆಗಜನಿ ಗ್ರಾಮ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿವೆ. ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ ಮತ್ತು ಅಧಿಕಾರಿಗಳು ಈ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯವಿರುವ ವಿವಿಧ ಸಹಾಯಗಳಿಗೆ ಪ್ರಯತ್ನಿಸುತ್ತಿದ್ದಾರೆ. ಗ್ರಾಪಂ ವತಿಯಿಂದ ಜೆಸಿಬಿ ತರಿಸಿ ನೀರು ಬಿಡಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ.
    ಗೋಕರ್ಣದಿಂದ ಗಂಗಾವಳಿ ತನಕದ 6 ಕಿ.ಮೀ. ಸಮುದ್ರ ತೀರದ ಅನೇಕ ಕಡೆಗಳಲ್ಲಿ ಸಮುದ್ರದ ಅಬ್ಬರ ಜೋರಾಗಿ ತೀರದತ್ತ ನೀರು ಉಕ್ಕೇರಿ ಬರುತ್ತಿದೆ. ಮೀನುಗಾರ ಗ್ರಾಮ ದುಬ್ಬನಸಶಿ ಮತ್ತು ಗಂಗೆಕೊಳ್ಳದಲ್ಲಿ ತಡೆಗೋಡೆಯನ್ನು ಹಾದು ನೀರು ಗ್ರಾಮದತ್ತ ನುಗ್ಗುತ್ತಿದೆ.ತೀರಕ್ಕೆ ಹೊಂದಿಕೊಂಡಿರುವ ನೂರಾರು ಮನೆಗಳು ಅಪಾಯದಲ್ಲಿವೆ. ತದಡಿ ಬಂದರು ಸೇರಿ ಈ ಭಾಗದ ವಿವಿಧ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ 450ಕ್ಕೂ ಅಧಿಕ ಮೀನುಗಾರಿಕೆ ಬೋಟ್​ಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಪ್ರವಾಸಿಗರ ಆಕರ್ಷಣೆಯ ಕುಡ್ಲೆ ತೀರವನ್ನು ಸಮುದ್ರದ ತೆರೆಗಳು ಮುತ್ತಿಕೊಂಡ ಪರಿಣಾಮ ಅನೇಕ ಅಂಗಡಿ ಮತ್ತು ವಸತಿ ಗೃಹಗಳಲ್ಲಿ ನೀರು ತುಂಬಿದೆ. ಮೂಡಂಗಿ ಮತ್ತು ಬೇಲೆಕಾನು ಭಾಗಗಳಿಗೆ ಭೇಟಿಯಿತ್ತ ಸ್ಥಳೀಯ ಗ್ರಾಪಂ ಅಧ್ಯಕ್ಷ ಮಂಜುನಾಥ ಜನ್ನು,ಉಪಾಧ್ಯಕ್ಷೆ ಶಾರದಾ ಮೂಡಂಗಿ, ಪಿಡಿಒ ವಿನಯಕುಮಾರ ಪರಿಶೀಲಿಸಿದರು.
    ಗೋಕರ್ಣದ ಉಪ್ಪಿನ ಆಗರಕ್ಕೆ ಹಾನಿ: ಚಂಡ ಮಾರುತ ಪರಿಣಾಮ ಅಘನಾಶಿನಿ ನದಿ ಹಿನ್ನೀರು ಒಳ ನುಗ್ಗಿ ಗೋಕರ್ಣದ ಉಪ್ಪಿನ ಆಗರಗಳಿಗೆ ಭಾರಿ ಹಾನಿಯಾಗಿದೆ. ಹೊಸ್ಕಟ್ಟದಲ್ಲಿನ ಖಾಸಗಿ ಉಪ್ಪಿನ ಆಗರ ಕವರಿ ಸಾಲ್ಟ್ ಸಂಪೂರ್ಣ ಮುಳುಗಿದ್ದು ಅನೇಕ ಕಡೆ ಒಡೆದು ಹಾನಿಯಾಗಿದೆ. ಇದೇ ರೀತಿ ಸಾಣೆಕಟ್ಟೆ ಉಪ್ಪಿನ ಸೊಸೈಟಿಗೆ ಸೇರಿದ ನಾರಣಾಪುರ ಆಗರ ಪೂರ್ಣವಾಗಿ ಮುಳುಗಿದೆ. ಸೈಕ್ಲೋನ್ ಪರಿಣಾಮ ಇದೇ ಮೊದಲ ಸಲ ಉಪ್ಪಿನ ಉದ್ಯಮಕ್ಕೆ ಕೋಟ್ಯಾಂತರ ರೂ. ನಷ್ಟ ತಲೆದೋರಿದೆ. ಸಮುದ್ರದ ಉಬ್ಬರ ಇದೇ ರೀತಿ ಮುಂದುವರಿದರೆ ಉಪ್ಪು ಸಂಗ್ರಹದ ಗೋಡೌನ್​ಗಳಿಗೆ ಕೂಡ ತೊಂದರೆ ಎದುರಾಗುವ ಸಾಧ್ಯತೆಗಳಿವೆಯಾಗಿ ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಈ ಭಾಗದ ಅಘನಾಶಿನಿ ನದಿಗೆ ಹೊಂದಿಕೊಂಡ ಪ್ರದೇಶಗಳು ಮತ್ತು ಸಮುದ್ರ ಕಿನಾರೆಗಳು ಅಸುರಕ್ಷಿತ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts