More

    ಅವಧೂತ ದತ್ತಪೀಠದ ಜನಪರ ಕಾರ್ಯಗಳಿಗೆ ಸಹಕಾರ

    ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಜೀವನ ಇತಿಹಾಸದ ಪುಟಗಳಲ್ಲಿ ಬರೆದಿಡುವಂತದ್ದು, ಅವರ ಜನಪರ ಕಾರ್ಯಗಳಿಗೆ ನಾನು ಸಂಪೂರ್ಣ ಸಹಕಾರ ಕೊಟ್ಟು ಕೆಲಸ ಮಾಡುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭರವಸೆ ನೀಡಿದರು.

    ಅವಧೂತ ದತ್ತ ಪೀಠದ ನಾದಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗಣಪತಿ ಸಚ್ಚಿನಂದ ಸ್ವಾಮೀಜಿಯವರ 81ನೇ ವರ್ಷದ ಜನ್ಮ ದಿನೋತ್ಸವದ ಪ್ರಯುಕ್ತ ಆದಿವಾಸಿಗಳು ಮತ್ತು ಅಂಗವಿಕಲರಿಗೆ ಕೊಡುಗೆಗಳನ್ನು ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

    ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನರ ಏಳಿಗೆಗಾಗಿ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಐತಿಹಾಸಿಕ ನಿರ್ಧಾರಗಳಿಂದ ಮಾದರಿ ಆಡಳಿತ ನೀಡಿ ಮಾದರಿಯಾಗಿರುವಂತೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮಹಾನ್ ಮಾನವತಾವಾದಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

    ಆದಿವಾಸಿ ಮಕ್ಕಳಿಗೆ ಶಾಲಾ ವಾಹನ ನೀಡುವುದು, ಅಲ್ಪಸಂಖ್ಯಾತರಿಗೆ, ಅಂಗವಿಕಲರಿಗೆ ಸಹಾಯಹಸ್ತ ನೀಡಿ, ಸಮಾಜಮುಖಿ ಕೆಲಸ ಮಾಡುವ ಮೂಲಕ ಸ್ವಾಮೀಜಿಯವರು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ನುಡಿದರು.

    ಸ್ವಾಮೀಜಿಯವರ ಇಡೀ ಜೀವನವೇ ಸಾರ್ಥಕವಾದುದು ಎಂದು ಬಣ್ಣಿಸಿದ ಸಚಿವರು, ಸ್ವಾಮೀಜಿ ದೊಡ್ಡ ಮಾನವತಾವಾದಿ. ಅವರು ನೂರು ವರ್ಷಗಳನ್ನು ಆರೋಗ್ಯವಂತರಾಗಿ ಪೂರೈಸಲಿ ಎಂದು ಹಾರೈಸಿದರು.

    ಶೋಷಿತ ಸಮುದಾಯದವರಿಗೆ, ನಿರ್ಗತಿಕರಿಗೆ, ಬಡವರಿಗೆ, ಮಹಿಳೆಯರಿಗೆ ಮತ್ತು ಎಲ್ಲ ಜನರಿಗೆ ಸ್ವಾಮೀಜಿಯವರ ಮಾರ್ಗದರ್ಶನ ಲಭ್ಯವಾಗಲಿ ಹಾರೈಸಿದರು.
    ಪಾಳು ಬಿದ್ದ ಈ ದೊಡ್ಡದಾದ ಜಾಗವನ್ನು ಸ್ವಾಮೀಜಿಯವರು ವೈಕುಂಠವನ್ನಾಗಿ ಮಾಡಿದ್ದಾರೆ. ಶ್ರೀಗಳಲ್ಲಿ ಮಾನವಿಯ ಗುಣ ತುಂಬಿ ತುಳುಕಾಡುತ್ತಿದೆ ಎಂದರು. ಪ್ರತ್ಯೇಕತೆ, ಜಾತಿ-ಧರ್ಮದ ತಾರತಮ್ಯ ಮಾಡದೆ ಮನುಷ್ಯರು ಎಲ್ಲರೂ ಒಂದೇ ಎಂಬ ಭಾವನೆಯಿಂದ ಆಶ್ರಮವನ್ನು ಬೃಹದಾಕಾರವಾಗಿ ಕಟ್ಟಿದ್ದಾರೆ ಎಂದು ತಿಳಿಸಿದರು.

    ಇದಕ್ಕೂ ಮೊದಲು ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಭಗವದ್ಗೀತೆ ಎಲ್ಲರನ್ನು ರಕ್ಷಣೆ ಮಾಡುವ ಒಂದು ವರ. ಭೂಕಂಪ ಸೇರಿದಂತೆ ಯಾವುದೇ ಅವಘಡಗಳಿಂದ ಭಗವದ್ಗೀತೆ ನಮ್ಮನ್ನು ರಕ್ಷಣೆ ಮಾಡುತ್ತದೆ. ಭಗವದ್ಗೀತೆಯನ್ನು ಕಂಠಪಾಠ ಮಾಡುತ್ತಿದ್ದರೆ ಮನಸ್ಸು ಪವಿತ್ರವಾಗುತ್ತದೆ. ಪ್ರತಿದಿನ ಗೀತೆಯ ಒಂದು ಅಧ್ಯಾಯ ಓದಿದರೆ ಒಳಿತಾಗಲಿದೆ ಎಂದು ಸಲಹೆ ನೀಡಿದರು.

    ಪ್ರತಿದಿನ ಭಗವಂತನ ಸ್ಮರಣೆಗೆ ಸ್ವಲ್ಪವಾದರೂ ಸಮಯ ಮೀಸಲಿಡಿ ಎಂದು ಶ್ರೀಗಳು ತಿಳಿಸಿದರು. ಇದೇ ವೇಳೆ ಭಗವದ್ಗೀತೆ 700 ಶ್ಲೋಕಗಳನ್ನು ಕಂಠಪಾಠ ಮಾಡಿದವರಿಗೆ ಚಿನ್ನದ ಪದಕವನ್ನು ಸ್ವಾಮೀಜಿ ವಿತರಣೆ ಮಾಡಿದರು.
    ಇದೇ ವೇಳೆ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಅವಧೂತ ದತ್ತ ಪೀಠದ ವತಿಯಿಂದ ಪೀಠ ಪ್ರಸಾದ ನೀಡಿ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಗೌರವಿಸಿದರು.

    ಅವಧೂತ ದತ್ತ ಪೀಠದ ವತಿಯಿಂದ ಎಚ್.ಡಿ.ಕೋಟೆ, ಸೋನಹಳ್ಳಿ, ಮಡಿಲು ಸೇವಾ ಟ್ರಸ್ಟ್ ಅವರಿಗೆ ಶಾಲಾ ವಾಹನ ಹಾಗೂ ಅಂಗವಿಕಲರಿಗೆ 80ಕ್ಕೂ ಹೆಚ್ಚು ಉಪಕರಣಗಳನ್ನು ದತ್ತಪೀಠದ ಪರವಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts