More

    ಭೂಪರಿವರ್ತನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಎನ್‌ಸಿ ಧರಣಿ

    ಮಡಿಕೇರಿ: ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದ ಜಮೀನುಗಳನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿತು.


    ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರಮುಖರು ಭೂಪರಿವರ್ತನೆಗೆ ಅವಕಾಶ ನೀಡುವ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ವಾಣಿಜ್ಯೋದ್ಯಮ ಉದ್ದೇಶಕ್ಕಾಗಿ ಭೂಪರಿವರ್ತಿಸುವುದನ್ನು ಸಂಪೂರ್ಣವಾಗಿ ತಡೆಯಬೇಕು. ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಭೂಪರಿವರ್ತನಾ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


    ನಂತರ ಎನ್.ಯು.ನಾಚಪ್ಪ ಮಾತನಾಡಿ, ಕೊಡಗಿನ ಕಾಫಿ ತೋಟಗಳನ್ನು ಭೂಪರಿವರ್ತಿಸುವ ಮೂಲಕ ಭೂಮಾಫಿಯಾ, ರೆಸಾರ್ಟ್ ದೊರೆಗಳು, ರಿಯಲ್ ಎಸ್ಟೇಟ್ ದಣಿಗಳು, ಅನಿವಾಸಿ ಭಾರತೀಯ ಉದ್ಯಮಪತಿಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕಾರ್ಪೋರೇಟ್ ವಲಯಗಳಿಗೆ ವಿಲಾ, ಬೃಹತ್ ಬಂಗಲೆ ಹಾಗೂ ಟೌನ್ ಶಿಪ್‌ಗಳನ್ನು ನಿರ್ಮಿಸಲು ಸರ್ಕಾರ ಅವಕಾಶ ನೀಡಲು ಮುಂದಾಗಿದೆ. ಕಾವೇರಿ ನದಿ ಪಾತ್ರದ ಭೂಪ್ರದೇಶವನ್ನು ನಾಶ ಪಡಿಸಿದಲ್ಲಿ ಅದು ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗಲಿದೆ. ದಕ್ಷಿಣ ಭಾರತದ ಜೀವನ ರೇಖೆಯಾದ ಕಾವೇರಿಯ ಜಲಮೂಲಗಳಿಗೆ ದಕ್ಕೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


    ದಿನದ ೨೪ ಗಂಟೆಯೂ ಎಸ್ಕೆವೇಟರ್‌ಗಳು, ಬುಲ್ಡೋಜರ್‌ಗಳು, ಜೆಸಿಬಿಗಳು ಭೂಮಿತಾಯಿಯನ್ನು ಬಗೆಯುವ ಮತ್ತು ಜಲಧಾರೆಯನ್ನು ಕೊಲ್ಲುವ ಕರ್ಕಶ ಶಬ್ಧವನ್ನು ನಾವು ಕೇಳುತ್ತಿದ್ದೇವೆ. ನಾವು ನಮ್ಮ ಪ್ರಾಚೀನ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ಕಳೆದುಕೊಂಡಿದ್ದೇವೆ. ನಮ್ಮ ದೀರ್ಘಕಾಲಿಕ ಜಲಮೂಲವಾದ ನೀರಿನ ಬುಗ್ಗೆಗಳು, ವಿಹಂಗಮ ಸ್ಥಳಾಕೃತಿ, ಬಗೆದರು ಮುಗಿಯದ ಸಂಪನ್ಮೂಲ, ಪ್ರಾಕೃತಿಕ ಪರಿಸರ, ಕೊಡವ ಬುಡಕಟ್ಟು ನೀತಿಯ ಆದಿಮಸಂಜಾತ ಗುಣಲಕ್ಷಣಗಳು ಮತ್ತು ಕೊಡವರ ಸ್ವಾಭಿಮಾನ, ಅದೃಶ್ಯವಾಗಲಿದೆ. ಇದು ಕೊಡವ ಗುರುತು ಮತ್ತು ಅಸ್ತಿತ್ವಕ್ಕೆ ಹಾನಿಕಾರಕವಾಗಿದೆ ಎಂದು ನಾಚಪ್ಪ ತಿಳಿಸಿದರು.


    ಸರ್ಕಾರ ಮತ್ತು ವಿಶ್ವ ಸಮುದಾಯವು ಈ ದೇಶಭಕ್ತ ಕೊಡವ ಜನಾಂಗವನ್ನು ದೊಡ್ಡ ಪ್ರಮಾಣದ ದುರಂತದಿಂದ ರಕ್ಷಿಸಬೇಕು. ಈ ವಿಪತ್ತಿನಿಂದ ಹೊರಬರಲು ಕೊಡವರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ಗುರುತಿಸಬೇಕು. ಅವರ ಭೂಮಿ, ಪರಂಪರೆ, ಜಲಸಂಪನ್ಮೂಲ, ಪರಿಸರ, ದೇವನೆಲೆಗಳಾದ ಮಂದ್, ದೇವಕಾಡ್, ಬುಡಕಟ್ಟು ಜನಾಂಗ, ಅವರ ಐತಿಹಾಸಿಕ ನಿರಂತರತೆಯನ್ನು ಕಾಯ್ದೆಬದ್ಧವಾಗಿ ಸಂರಕ್ಷಿಸಲು ವಿಶ್ವ ರಾಷ್ಟ್ರಸಂಸ್ಥೆಯ ಅಡಿಯಲ್ಲಿ ವಿಶ್ವ ಆದಿಮಸಂಜಾತ ಜನಾಂಗದ ಹಕ್ಕುಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಾನೂನು ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ಕರ್ನಾಟಕದ ಸ್ವಾಮ್ಯದೊಳಗೆ ಸ್ವಾಯತ್ತ ಕೊಡವ ಲ್ಯಾಂಡ್ ಮತ್ತು ಸ್ವಯಂ ಆಡಳಿತವನ್ನು ಸೃಷ್ಟಿಸುವ ಮೂಲಕ ಖಾತರಿಪಡಿಸಬೇಕು ಎಂದು ಒತ್ತಾಯಿಸಿದರು.


    ಈ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ, ಯುನೆಸ್ಕೋದ ಮಹಾನಿರ್ದೇಶಕರು, ವಿಶ್ವ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.


    ಧರಣಿ ಸತ್ಯಾಗ್ರಹದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳಮಂಡ ಜೈ, ಕಿರಿಯಮಾಡ ಶೆರಿನ್, ಪುಲ್ಲೇರ ಕಾಳಪ್ಪ, ಚಂಬಂಡ ಜನತ್ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts