More

    ಇಂದಿರಾ ಕ್ಯಾಂಟಿನ್,ನ್ಯಾಯಬೆಲೆ ಅಂಗಡಿಗಳಲ್ಲಿ ಸಿರಿಧಾನ್ಯ ಬಳಸಲು ಯೋಜನೆ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

    ಬೆಂಗಳೂರು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟಕ್ಕೆ, ಅಂಗನವಾಡಿ, ಇಂದಿರಾಕ್ಯಾಂಟಿನ್ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಸಿರಿಧಾನ್ಯ ಬಳಸಲು ನೂತನ ಯೋಜನೆಯನ್ನು ಪರಿಚಯಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

    ‘ಸಿರಿಧಾನ್ಯ ಮತ್ತು ಸಾವಯವ: ಪರಂಪರೆಯ ಕೃಷಿ-ಭವಿಷ್ಯದ ಪೋಷಣೆ’ ಪರಿಕಲ್ಪನೆಯಡಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಇಲಾಖೆ, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ ‘ಸಿರಿಧಾನ್ಯ ಮತ್ತು ಸಾವಯವ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದರು. ಪೌರಾಡಳಿತ, ಆಹಾರ, ಶಿಕ್ಷಣ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಜತೆ ಚರ್ಚಿಸಿ ಅದಷ್ಟೂ ಬೇಗ ಯೋಜನೆಯನ್ನು ಸಿದ್ಧಪಡಿಸಿ ಜಾರಿಗೆ ತರಲಾಗುವುದು. ಇದರಿಂದಾಗಿ ಸಿರಿಧಾನ್ಯಗಳಿಗೆ ಇನ್ನಷ್ಟು ಬೇಡಿಕೆ ಬರಲಿದೆ.ಸಿರಿಧಾನ್ಯ ಬೆಳೆಯುವುದರಿಂದ ಲಾಭವಾಗಲಿದೆ ಎಂಬ ವಾತಾವರಣವೂ ನಿರ್ಮಾಣವಾಗಲಿದೆ ಎಂದರು.

    ಕೃಷಿ ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆ ಮೂಲಕ ಕೃಷಿ ಕ್ಷೇತ್ರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು.ಆಧುನಿಕ ತಂತ್ರಜ್ಞಾನ ಅಳವಡಿಸಿ ಸಂಶೋಧನೆ ನಡೆಸಬೇಕು. ಗುಣಮಟ್ಟ ಬೀಜ, ಸಾವಯವ ಕೃಷಿ ಸೇರಿ ಪ್ರಮುಖ ಸಲಹೆಗಳನ್ನು ರೈತರಿಗೆ ನೀಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿದೆ. ಅಂತಾರಾಷ್ಟ್ರೀಯ ಸಿರಿ ಧಾನ್ಯ ವರ್ಷ ಎಂದು ಘೋಷಣೆ ಮಾಡಿದ್ದರಿಂದ ರಾಜ್ಯದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಸಿರಿಧಾನ್ಯ ಬೆಳೆಗೆ ನಮ್ಮ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ವಿದೇಶಗಳಲ್ಲಿ ಮುಂದಿನ ವರ್ಷದ ಋತುಮಾನದಲ್ಲಿ ಎಷ್ಟು ಮಳೆ ಬೀಳುವುದು, ಬಿತ್ತನೆ, ಉತ್ಪಾದನೆ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಮಾರುಕಟ್ಟೆ ಆಧಾರಿಸಿ ವರದಿ ಸಿದ್ಧಪಡಿಸುತ್ತಾರೆ. ಅದೇರೀತಿ, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸಬೇಕು ಎಂದು ಸಿಎಂ ಸಲಹೆ ನೀಡಿದರು.ಶಾಸಕರಾದ ಬಿ.ಆರ್,ಪಾಟೀಲ್, ವಿನಯ್‌ಕುಲಕರ್ಣಿ, ಕೋನರೆಡ್ಡಿ, ರಾಜೇಗೌಡ, ಉದಯ್, ಎಂಎಲ್ಸಿ ನಜೀರ್ ಅಹ್ಮದ್, ದಿನೇಶ್ ಗೂಳಿಗೌಡ, ಕೃಷಿ ಇಲಾಖೆಯ ಕಾರ್ಯದರ್ಶಿ ವಿ.ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಜಿ.ಟಿ.ಪುತ್ರ. ಐಎಎಸ್ ಅಧಿಕಾರಿಯಾ ಶಾಲನಿ ರಜನೀಶ್, ರೋಹಿಣಿ ಸಿಂಧೂರಿ ಸೇರಿ ಮತ್ತಿರರಿದ್ದರು.

    ತಗ್ಗಿದ ಬರಗಾಲ ಬಿಸಿ:
    ಈ ಬಾರಿ ಕರ್ನಾಟಕ ಸೇರಿ ದೇಶದ 12 ರಾಜ್ಯಗಳಲ್ಲಿ ಭೀಕರ ಬರಗಾಲವಿದೆ. ನಮ್ಮ ರಾಜ್ಯದ 223 ತಾಲೂಕುಗಳು ಬರಗಾಲದಿಂದ ತತ್ತರಿಸಿವೆ. ಇದರಿಂದಾಗಿ ರೈತರು ಸಮರ್ಪಕವಾಗಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಲಿಲ್ಲ. ನಾವು ಜಾರಿಗೆ ತಂದಿದ್ದ 5 ಗ್ಯಾರಂಟಿಗಳಿಂದ ಜನರಿಗೆ ಬರಗಾಲದ ಬಿಸಿ ತೀವ್ರವಾಗಿ ತಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವರ್ಷದಿಂದ ವರ್ಷಕ್ಕೆ ಕೃಷಿ ಮಾಡುತ್ತಿರುವ ಸಂಖ್ಯೆ ಕುಸಿಯುತ್ತಿದೆ. ಈಗ ಶೇ.60 ಮಂದಿ ಮಾತ್ರ ಕೃಷಿ ಮಾಡುತ್ತಿದ್ದಾರೆ. ಹಿಂದೆ ಇದರ ಸಂಖ್ಯೆ ಶೇ.80 ಇತ್ತು. ಸಾವಯವ ಕೃಷಿ ಪದ್ಧತಿ ನಶಿಸುತ್ತಿತ್ತು. ಇದರ ನಿವಾರಣೆಗಾಗಿ 2004ರಲ್ಲಿ ‘ಸಾವಯವ ಕೃಷಿ ನೀತಿ’ ಜಾರಿಗೆ ತರಲಾಗಿತ್ತು. 2013ರಲ್ಲಿ ಇದನ್ನು ಪರಿಷ್ಕರಿಸಿ ನೀತಿಯನ್ನು ಜಾರಿಗೆ ತಂದವು. ಇದರಿಂದಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಿಎಂ ವಿವರಿಸಿದರು. ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಹಸಿರು ಕ್ರಾಂತಿ ಜಾರಿಗೆ ತಂದಿದ್ದರಿಂದ ಈ ದೇಶವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿತ್ತು. ದೇಶ ಮಾತ್ರವಲ್ಲದೆ ಹೊರ ದೇಶಗಳಿಗೂ ಸಿರಿಧಾನ್ಯವನ್ನು ರ್ತು ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯ ಮತ್ತು ಸಾವಯವ ಬೆಳೆಗಳು ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಸಿಎಂ ತಿಳಿಸಿದರು.

    ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಗಮ್ಮತ್ತು: ಖರೀದಿದಾರರ- ರೈತರು ಸಮಾಗಮ

    ಸಿಎಂಗೆ ಆಹ್ವಾನ:
    ಅಯೋಧ್ಯೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯಪ್ರತಾಪ್ ಶಾಹಿ ಆಮಂತ್ರಣ ನೀಡಿದರು. ವೇದಿಕೆಯಲ್ಲಿ ಮಾತನಾಡುತ್ತಿದ್ದ ವೇಳೆ ರಾಮಮಂದಿರ ಉದ್ಘಾಟನೆಗೆ ಆಗಮಿಸಬೇಕೆಂದು ವೈಯಕ್ತಿಕವಾಗಿ ನಿಮಗೆ ಆಹ್ವಾನ ನೀಡುತ್ತಿರುವುದಾಗಿ ಸೂರ್ಯಪ್ರತಾಪ್ ಶಾಹಿ ಹೇಳಿದರು. ಇದೇ ವೇಳೆ ಉತ್ತರ ಪ್ರದೇಶ ಸರ್ಕಾರವು ಸಿರಿಧಾನ್ಯಗಳಿಗೆ ನೀಡುತ್ತಿರುವ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.

    ಭಾಷಣಕ್ಕೆ ಅಡ್ಡಿ:
    ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಭಾಷಣಕ್ಕೆ ಶಾಸಕ ವಿನಯ್ ಕುಲಕರ್ಣಿ ಅಡ್ಡಪಡಿಸಿದ ಪ್ರಸಂಗ ಮೇಳದಲ್ಲಿ ನಡೆಯಿತು. ಸಿರಿಧಾನ್ಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರವು ಒತ್ತು ಕೊಟ್ಟಿರುವ ಕುರಿತು ಶೋಭಾ ಕರಂದ್ಲಾಜೆ ಮಾತನಾಡುತ್ತಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ವಿನಯ್ ಕುಲಕರ್ಣಿ, ಏಕಾಏಕಿ ಆಗಮಿಸಿ ಭಾಷಣ ಮೊಟಕುಗೊಳಿಸುವಂತೆ ಶೋಭಾ ಕರಂದ್ಲಾಜೆಗೆ ಸೂಚಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಶೋಭಾ ಕರಂದ್ಲಾಜೆ, ‘ರಾಜಕೀಯ ಮಾಡಬೇಡಿ’ ಎಂದು ಗದರಿದರು.

    ಕರ್ನಾಟಕ ಸಿರಿಧಾನ್ಯಗಳ ರಾಜ್ಯವಾಗಿದೆ. ಪೂರ್ವಜರ ಕಾಲದಿಂದಲೂ ಸಿರಿಧಾನ್ಯ ಆಹಾರವನ್ನು ಸೇವಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಶೇ.20ರಷ್ಟು ಸಿರಿಧಾನ್ಯ ಬೆಳೆ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ತಾಜಾ ಸಿರಿಧಾನ್ಯಗಳಿಗೆ ಬೇಡಿಕೆ ಬರಲಾರಂಭಿಸಿದೆ. ಆಹಾರ ಸಂಸ್ಕರಣೆ ಘಟಕ ಮತ್ತು ಸಾವಯವ ಕೃಷಿಗೆ ಕೇಂದ್ರ ಸರ್ಕಾರ ಒತ್ತು ಕೊಟ್ಟಿದೆ. ರಾಜ್ಯದಲ್ಲಿ ಆಹಾರ ಸಂಸ್ಕರಣೆ ಘಟಕ ಸ್ಥಾಪನೆ ಸೇರಿ ಇತರೆ ಯೋಜನೆಗಳಿಗೆ ಜಾರಿಗೆ ಸಂಬಂಧಪಟ್ಟಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಇದಕ್ಕೆ ಅನುಮೋದನೆ ಕೊಡಿಸಲಾಗುವುದು. ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರದ ಜತೆ ನಾವು ಕೈಜೋಡಿಸಲಿದ್ದೇವೆ.
    | ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ.

    ನಮ್ಮ ಸರ್ಕಾರವು ರೈತ ಸಿರಿ, ಕೃಷಿ ಭಾಗ್ಯ ಯೋಜನೆಗಳನ್ನು ಮರು ಜಾರಿಗೆ ತಂದಿದೆ. ಇದರಿಂದಾಗಿ ರೈತರ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಸಿರಿಧಾನ್ಯದಲ್ಲಿ ರೋಗ ನಿರೋಧಕ ಶಕ್ತಿಯಿದೆ. ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಸಿರಿಧಾನ್ಯ ಮಾರಾಟ ಮಳಿಗೆಗಳಿವೆ. ಶರವೇಗದಲ್ಲಿ ಸಿರಿಧಾನ್ಯ ಕ್ಷೇತ್ರ ಬೆಳೆಯುತ್ತಿದೆ. ಸಿರಿಧಾನ್ಯ ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು.ಮೇಳದಲ್ಲಿ ಮೌಲ್ಯವರ್ಧನೆ, ಬ್ರ್ಯಾಂಡಿಂಗ್ ಸೇರಿ ಇತರ ವಿಷಯಗಳಿಗೆ ಒತ್ತು ನೀಡಲಾಗಿದೆ.
    | ಎನ್​. ಚಲುವರಾಯಸ್ವಾಮಿ. ಕೃಷಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts