More

    ಸಿಎಂ ಮನವೊಲಿಕೆಯಿಂದಾಗಿ ಪಟ್ಟು ಸಡಿಲಿಸಿದ ರೇವಣ್ಣ; ಯಡಿಯೂರಪ್ಪ ಮಾತಿಗೆ ಮೆತ್ತಗಾಗಿ ಧರಣಿ ಕೈಬಿಟ್ಟ ಜೆಡಿಎಸ್

    ಬೆಂಗಳೂರು: ತಮ್ಮ ಕ್ಷೇತ್ರಗಳಿಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಲಾದ ಅನುದಾನ ತಡೆ ಹಿಡಿದಿರುವುದನ್ನು ವಿರೋಧಿಸಿ ಜೆಡಿಎಸ್ ಶಾಸಕರು ಗುರುವಾರ ವಿಧಾನಸಭೆಯಲ್ಲಿ ಕಲಾಪ ಮುಗಿದ ಬಳಿಕವೂ ಸ್ಪೀಕರ್ ಪೀಠದ ಮುಂಭಾಗ ಧರಣಿ ನಡೆಸಿದ ಪ್ರಸಂಗ ನಡೆಯಿತು. ಬಳಿಕ ಅಹೋರಾತ್ರಿ ಮತ್ತು ಅನಿರ್ದಿಷ್ಟಾವಧಿ ಧರಣಿ ನಡೆಸುವ ಎಚ್ಚರಿಕೆಯೊಂದಿಗೆ ಧರಣಿ ಮುಂದುವರಿಸುತ್ತಿದ್ದಂತೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವ ನಾರಾಯಣ ಗೌಡ ವಿಧಾನಸೌಧಕ್ಕೆ ದೌಡಾಯಿಸಿ ಜೆಡಿಎಸ್ ಶಾಸಕರ ಮನವೊಲಿಸುವಲ್ಲಿ ಸಫಲರಾದರು.

    ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯವಾಗಿ ಚರ್ಚೆ ಆರಂಭಿಸಿದ ಜೆಡಿಎಸ್ ಶಾಸಕರು, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಅನುದಾನ ತಡೆಹಿಡಿಯಲಾಗಿದೆ. ಕುಡಿಯುವ ನೀರಿನ ಯೋಜನೆಗೂ ತಡೆ ಹಾಕಲಾಗಿದೆ. ಕೂಡಲೇ ಅನುದಾನ ಒದಗಿಸಿ ಎಂದು ಕೈಮುಗಿದರು. ಚರ್ಚೆ ಬಳಿಕ ಉತ್ತರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ಹಿಂದೆ ಅನುದಾನ ಹಂಚಿಕೆಯಲ್ಲಿ ಅಸಮತೋಲನ ಉಂಟಾಗಿತ್ತು, ಕೋವಿಡ್ ಕಾರಣಕ್ಕೆ ಈ ಸಾಲಿನಲ್ಲಿ ಅನುದಾನ ಹಂಚಿಕೆ ಕಷ್ಟ. ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುತ್ತದೆ ಎಂದರು. ಆದರೆ, ಈ ಉತ್ತರಕ್ಕೆ ತೃಪ್ತರಾಗದ ಜೆಡಿಎಸ್ ಶಾಸಕರು, ಸಿಎಂ ಸೂಕ್ತ ಉತ್ತರ ನೀಡದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಬಳಿಕ ಸ್ಪೀಕರ್ ಪೀಠದ ಮುಂದೆ ಧಾವಿಸಿ ಧರಣಿ ಆರಂಭಿಸಿದರು. ಈ ವೇಳೆ ಸ್ಪೀಕರ್ ವಿಧೇಯಕವೊಂದಕ್ಕೆ ಅನುಮೋದನೆ ಪಡೆದುಕೊಂಡರು. ಬಾಕಿ ಉಳಿದ ಪ್ರಕ್ರಿಯೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳುವುದಾಗಿ ಕಲಾಪವನ್ನೂ ಮುಂದೂಡಿದರು.

    ಇದನ್ನೂ ಓದಿ: ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?

    ಈ ವೇಳೆ ಧರಣಿ ನಿರತ ಶಾಸಕರು ತಮ್ಮ ಹಠ ಬಿಡಲಿಲ್ಲ. ನಾವು ಅಹೋರಾತ್ರಿ ಧರಣಿ ನಡೆಸುತ್ತೇವೆ, ಯಾವುದೇ ಕಾರಣಕ್ಕೂ ಪಟ್ಟು ಸಡಿಲಿಸಲ್ಲ ಎಂದು ಎಚ್.ಡಿ. ರೇವಣ್ಣ ಘೋಷಿಸಿದರು. ಸಂಜೆ 7 ಗಂಟೆಗೆ ಕಲಾಪ ಮುಗಿದು ಎಲ್ಲ ಶಾಸಕರು ಹೊರನಡೆದರೂ ಜೆಡಿಎಸ್ ಸದಸ್ಯರು ಮಾತ್ರ ಸ್ಥಳಬಿಟ್ಟು ಕದಲಲಿಲ್ಲ. ಕೊನೆಗೆ ಎಚ್.ಡಿ.ರೇವಣ್ಣ ಅವರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು, ಈಗ ಧರಣಿ ಕೈಬಿಡಿ, ನಾಳೆ ಮತ್ತೆ ಈ ವಿಷಯದಲ್ಲಿ ಧರಣಿ ಮುಂದುವರಿಸುವಿರಂತೆ ಎಂದು ಕೋರಿದರೂ ಒಪ್ಪಲಿಲ್ಲ. ಹೀಗಾಗಿ ವಿಧಾನಸಭೆ ಸಭಾಂಗಣದಲ್ಲಿ ಧರಣಿ ನಿರತರಿಗೆ ತಂಗಲು ಹಾಸಿಗೆ, ಹೊದಿಕೆ, ಊಟದ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸ್ಪೀಕರ್ ಸೂಚಿಸಿದರು. ಜತೆಗೆ ಧರಣಿ ವಿಷಯವನ್ನು ಸಿಎಂ ಗಮನಕ್ಕೆ ತರುವ ಪ್ರಯತ್ನ ಮಾಡಿದರು.

    ರಾತ್ರಿ 8.20ಕ್ಕೆ ಮನೆಯಿಂದ ವಿಧಾನಸೌಧಕ್ಕೆ ದೌಡಾಯಿಸಿದ ಸಿಎಂ ಯಡಿಯೂರಪ್ಪ, ಧರಣಿ ನಿರತರೊಂದಿಗೆ ಚರ್ಚೆ ನಡೆಸಿದರು. ಹಣಕಾಸಿನ ಲಭ್ಯತೆ ನೋಡಿಕೊಂಡು ಅನುದಾನ ಬಿಡುಗಡೆ ಮಾಡುವ ಭರವಸೆಯನ್ನೂ ನೀಡಿದರು. ಬಳಿಕ ಎಚ್.ಡಿ.ರೇವಣ್ಣ ನೇತೃತ್ವದ ಶಾಸಕರ ತಂಡ ಧರಣಿ ಹಿಂಪಡೆಯಿತು. ಈ ವಿಷಯವಾಗಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದರು.
    ಜೆಡಿಎಸ್ ಶಾಸಕರು ಮಾತ್ರ ಮಾಧ್ಯಮದ ಮುಂದೆ ಹಾಜರಾಗಿ ಸಿಎಂ ನೀಡಿದ ಭರವಸೆಯನ್ನು ತಿಳಿಸಿ, ಮುಖ್ಯಮಂತ್ರಿಯವರೆ ಮನೆಯಿಂದ ವಾಪಸಾಗಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆದೆವು, ಅವರ ಭರವಸೆ ಮೇಲೆ ವಿಶ್ವಾಸವಿದೆ ಎಂದರು.

    ಜೆಡಿಎಸ್ ಶಾಸಕರ ಧರಣಿ; ರಾತ್ರಿ ವಿಧಾನಸೌಧಕ್ಕೆ ದೌಡಾಯಿಸಿದ ಸಿಎಂ!

    ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲು ಮುಂದಾದ ಜೆಡಿಎಸ್​ ಶಾಸಕರು: ಕಾರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts