More

    ಮಠಗಳ ಕಾರ್ಯಗಳಿಗೆ ಸರ್ಕಾರದ ನೆರವು : ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ

    ತಿಪಟೂರು/ನೊಣವಿನಕೆರೆ: ಧರ್ಮಪ್ರಜ್ಞೆ, ರಾಷ್ಟ್ರಪ್ರಜ್ಞೆ, ಸಮಾಜಪ್ರಜ್ಞೆ ರೂಪಿಸುವ ಮಠ ಮಾನ್ಯಗಳ ಕಾರ್ಯ ನಿರಂತರವಾಗಿರಲಿ. ಅದಕ್ಕೆ ಬೇಕಾದ ಎಲ್ಲ ನೆರವು ನೀಡಲು ಸರ್ಕಾರ ಬದ್ಧ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

    ತಾಲೂಕಿನ ನೊಣವಿನಕೆರೆ ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಬುಧವಾರ ಶ್ರೀ ಕರಿಬಸವ ಸ್ವಾಮೀಜಿ 227ನೇ ವಾರ್ಷಿಕ ಸ್ಮರಣೋತ್ಸವ, ಶ್ರೀಮಠದ 19ನೇ ಗುರುಗಳಾದ ಶ್ರೀ ಕರಿಬಸವ ದೇಶೀಕೇಂದ್ರ ಸ್ವಾಮೀಜಿ 12ನೇ ವರ್ಷದ ಪುಣ್ಯಾರಾಧನೆ ಹಾಗೂ ರಥೋತ್ಸವ, ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

    ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಕಾಡಸಿದ್ದೇಶ್ವರ ಮಠವು ಅನೇಕ ಸಂಸ್ಥಾನಗಳಿಗೆೆ ಮಾರ್ಗದರ್ಶನ ನೀಡಿದ ತಪೋಭೂಮಿ ಎನಿಸಿದೆ. ಶಾಂತಿ ಹಾಗೂ ಧಾರ್ಮಿಕ ಸಾಮರಸ್ಯದ ರೂವಾರಿಗಳಾಗಿರುವ ಶ್ರೀಗಳು, ಸಮಾಜದ ಉಜ್ವಲ ಸೌಹಾರ್ದ ಬದುಕಿಗೆ ಸ್ಫೂರ್ತಿಯಾಗಿದ್ದಾರೆ. ತಪೋನಿಷ್ಠರು, ವಿದ್ವಾಂಸರನ್ನು ಕೊಡುಗೆ ನೀಡಿದ ಕೀರ್ತಿ ಈ ಮಠಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು.

    ಬಿಎಸ್‌ವೈ ಬಡವರ ದನಿ!: ಕಡುಬಡವರಿಗೆ ದನಿಯಾಗುವ, ಸೂರಿಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿ ಕೊಂಡಿದ್ದಾರೆ. ಸಣ್ಣ ಅಪಚಾರವೂ ಆಗದಂತೆ ಮುಂದಿನ 3 ವರ್ಷ 4 ತಿಂಗಳನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಪೂರೈಸಲಿದ್ದು ಇಡೀ ದೇಶವೇ ಗುರುತಿಸುವ ಹಂತಕ್ಕೆ ರಾಜ್ಯವನ್ನು ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

    ಸಮಾರಂಭದಲ್ಲಿ ಸುತ್ತೂರು ಮಠದ ಉತ್ತರಾಧಿಕಾರಿ ಶ್ರೀ ಶಿವರಾತ್ರಿ ಜಯರಾಜೇಂದ್ರ ಸ್ವಾಮೀಜಿ, ಮಹಾರಾಷ್ಟ್ರ ಕರಜಗಿ ವಿರಕ್ತ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಯಲಗೋಡ್ ಮಠದ ಶ್ರೀಗುರುಲಿಂಗ ಸ್ವಾಮೀಜಿ, ಶಾಸಕ ಬಿ.ಸಿ.ನಾಗೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಮುಖಂಡ ಲೋಕೇಶ್ವರ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಎಸ್ಪಿ ಡಾ.ಕೆ. ವಂಶಿಕೃಷ್ಣ , ರಾಜ್ಯ ಪುರೋಹಿತ ಸಂಘದ ಅಧ್ಯಕ್ಷ ಷಡಕ್ಷರಿ ಶಾಸ್ತ್ರಿ ಇತರರಿದ್ದರು.

    ಶ್ರೀಮಠ ಧಾರ್ಮಿಕ, ಶೈಕ್ಷಣಿಕ ಸಾಂಸ್ಕೃತಿಕ ಕ್ಷೇತ್ರಗಳ ಸಂಗಮ: ಜನಸ್ಪಂದನೆಯೇ ನಿಜವಾದ ಧರ್ಮ ಎಂಬ ತತ್ವಪಾಲನೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಗಳು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮತ್ತು ನಾಡಿನ ಅಭ್ಯುದಯಕ್ಕೆ ಅಭೂತಪೂರ್ವ ಕೊಡುಗೆ ನೀಡಿ, ನೊಂದವರ ಕಣ್ಣೊರೆಸುವ ಕಾರ್ಯ ಮಾಡುತ್ತಿದ್ದಾರೆ. ಶ್ರೀಮಠವು ನಾಡಿನ ಪರಂಪರೆ, ಧಾರ್ಮಿಕ, ಶೈಕ್ಷಣಿಕ ಸಾಂಸ್ಕೃತಿಕ ಕ್ಷೇತ್ರಗಳ ಸಂಗಮವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.

    ಹೋಮಕ್ಕೆ ಪೂರ್ಣಾಹುತಿ: ಬೆಳಗ್ಗೆ 5ಗಂಟೆಗೆ ಕರ್ತೃ ಕಾಡಸಿದ್ದೇಶ್ವರರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ನಂತರ 101 ಮಕ್ಕಳಿಗೆ ವಿದ್ಯಾಯಜ್ಞ್ಞ, ಕೆಂಡಾರ್ಚನೆ ಕಾರ್ಯಕ್ರಮ ನಡೆಯಿತು. ಸಿಎಂ ಯಡಿಯೂರಪ್ಪ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗಣಪತಿ, ರುದ್ರ ಹಾಗೂ ದುರ್ಗ ಹೋಮಕ್ಕೆ ಪೂರ್ಣಹುತಿ ನೀಡಿದರು.

    ಮೂವರೂ ಶ್ರೀಮಠದ ಮಕ್ಕಳಾಗಿದ್ದೇವೆ: ಬಿಎಸ್‌ವೈ ದೂರದೃಷ್ಟಿಯ ಚಿಂತನೆಯ ಫಲವಾಗಿ ಶ್ರೀಮಠ ಇಷ್ಟು ಎತ್ತರಕ್ಕೆ ಬೆಳೆೆದಿದೆ. ನಾನು, ಡಿ.ಕೆ.ಶಿವಕುಮಾರ್ ಹಾಗೂ ಚಲುವರಾಯಸ್ವಾಮಿ ಮೂವರೂ ಶ್ರೀಮಠದ ಮಕ್ಕಳಾಗಿದ್ದೇವೆ. ಶ್ರೀಗಳ ಅಪೇಕ್ಷೆಯಂತೆ ನೆಮ್ಮದಿಯ ವಾತಾವರಣ ಸೃಷ್ಟಿಸಲು ಅವರ ಸಂದೇಶ ಪಾಲಿಸಲು ನಾವು ಸದಾ ಬದ್ಧ ಎಂದು ವಸತಿ ಸಚಿವ ವಿ.ಸೋಮಣ್ಣ ಅಭಯವಿತ್ತರು.

    ಬದಲಾವಣೆ ತಂದ ಪುಣ್ಯಕ್ಷೇತ್ರ: ಕಾಡಸಿದ್ದೇಶ್ವರ ಮಠ ನನ್ನ ಮನಸ್ಸಿಗೆ ನೆಮ್ಮದಿ, ಜೀವನದಲ್ಲಿ ಬದಲಾವಣೆ ತಂದ ಪುಣ್ಯ ಕ್ಷೇತ್ರವಾಗಿದ್ದು ಮಠದಲ್ಲಿ ಜಾತಿ ಇಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಶ್ರೀಮಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಧರ್ಮ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಶ್ರಮಿಸಬೇಕು. ಕಾಡಸಿದ್ದೇಶ್ವರ ಮಠದಲ್ಲಿ ಧರ್ಮವಿದ್ದು ಅಲ್ಲಿ ಜಯವಿದೆ ಎಂದರು. ಗಂಗಾಧರ ಅಜ್ಜ ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಪವಿತ್ರ ಕ್ಷೇತ್ರದಲ್ಲಿ ಧರ್ಮದಿಂದಲೇ ಶಾಂತಿ ಹಾಗೂ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಮಾತು ನಿಜವಾಗಿದೆ ಎಂದರು. ನನಗೆ ನೆಮ್ಮದಿ, ಶಾಂತಿ, ಧೈರ್ಯವಿದ್ದು ನನ್ನ ಗುರಿ ತಲುಪುವ ಶ್ರೀರಕ್ಷೆ ಶ್ರೀಮಠದಿಂದಾಗಿದೆ, ಮಠದಿಂದ ಅನುಕೂಲವಾಗಿರುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ, ಮಠದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳು ವಿಶ್ವಕ್ಕೆ ಶಾಂತಿ ತರಲಿದೆ ಎಂದರು.

    ಎಲ್ಲ ಮಠ, ಮಂದಿರಗಳ ನಿರಂತರ ಸೇವೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡಿರುವ ಸಿಎಂ ಯಡಿಯೂರಪ್ಪ ಅಧಿಕಾರದ ಸಮಯದಲ್ಲಿ ಶ್ರೀಮಠದ ಸಂಕಲ್ಪ ಹಾಗೂ ಆಶೀರ್ವಾದ ಪಡೆದಿದ್ದರು. ಮುಂದಿನ 3 ವರ್ಷ 4 ತಿಂಗಳ ಕಾಲವೂ ಅಧಿಕಾರ ಪೂರೈಸಲಿದ್ದಾರೆ. ನಮ್ಮ ಅಶೀರ್ವಾದ ಸದಾ ಅವರಿಗಿದೆ.
    ಶ್ರೀ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ಕಾಡಸಿದ್ದೇಶ್ವರ ಮಠ, ನೊಣವಿನಕೆರೆ. ತಿಪಟೂರು.

    ಶತಮಾನಗಳಿಂದ ದೀನ ದಲಿತರೆಂಬ ಬೇಧ ಭಾವ ಮಾಡದೆ ಅನ್ನದಾಸೋಹ, ಜ್ಞಾನದಾಸೋಹ ಮುಂದುವರೆಸಿಕೊಂಡು ಬಂದಿರುವ ಶ್ರೀಮಠವು ಸಿದ್ಧಗಂಗಾ ಮಠದಂತೆ ತ್ರಿವಿಧ ದಾಸೋಹದ ಮಹಾಮನೆಯಾಗಿದೆ. ಶ್ರೀಮಠದ ಅಭಿವೃದ್ಧಿಗೆ ನನ್ನ ಅಪೇಕ್ಷೆಯಂತೆ ಸಕಲ ನೆರವು ನೀಡಲು ಸರ್ಕಾರ ಸದಾ ಸಿದ್ಧ.
    ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts