More

    ಸಿಎಂ ಬಿಎಸ್​ವೈ ಹುಟ್ಟುಹಬ್ಬ ವಿಶೇಷ: ಜನಪ್ರಿಯ ಯೋಜನೆಗಳ ಸರದಾರ

    ಬೆಂಗಳೂರು: ಹೋರಾಟವನ್ನೇ ಉಸಿರಾಗಿಸಿಕೊಂಡ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಅವಧಿಯಲ್ಲಿ ಜಾರಿಗೆ ತಂದ ಜನಪ್ರಿಯ ಯೋಜನೆಗಳಿಗೆ ಲೆಕ್ಕವಿಲ್ಲ. ರೈತ ಮತ್ತು ಕಾರ್ವಿುಕ ನಾಡಿನ ಎರಡು ಕಣ್ಣುಗಳು ಎಂದು ಒತ್ತಿ ಹೇಳುವ ಬಿಎಸ್​ವೈ, 2008ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ರೈತರಿಗೆ 10 ಎಚ್​ಪಿ ತನಕ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿ, ಅನುಷ್ಠಾನಕ್ಕೆ ತಂದರು.

    ಮಹಿಳೆ ಕುಟುಂಬದ ಕಣ್ಣು: ಮಹಿಳೆಗೂ ಸಮಾನ ಅವಕಾಶ ಸಿಗಬೇಕು ಎನ್ನುವ ವಿಶಾಲ ಮನೋಭಾವ ಬಿಎಸ್​ವೈ ಅವರದ್ದು. ಆ ಕಾರಣಕ್ಕಾಗಿಯೇ ಹೆಣ್ಣುಮಕ್ಕಳ ಬಗೆಗಿನ ತಾತ್ಸಾರ ಭಾವನೆ ತೊಲಗಿಸಲು ಪಣತೊಟ್ಟ ಅವರು, ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ಇದು ಇಂದಿಗೂ ನಾಡಿನ ಜನಪ್ರಿಯ ಯೋಜನೆಗಳಲ್ಲೊಂದಾಗಿ ಜನಮನ ಸೆಳೆದಿದೆ. ಅಲ್ಲದೆ, ನ್ಯಾಯಬೆಲೆ ಅಂಗಡಿ ಮೂಲಕ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸೀರೆ ನೀಡುವ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತಂದರು.

    ಜನಪರ ಯೋಜನೆಗಳಿಗೆ ನಾಂದಿ: 2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ, ಹಣಕಾಸು ಖಾತೆ ಜವಾಬ್ದಾರಿ ಹೊತ್ತಿದ್ದ ಸಂದರ್ಭದಲ್ಲಿಯೇ ಜನಪರ ಯೋಜನೆಗಳಿಗೆ ನಾಂದಿಯಾಡಿದರು. ಘೋಷಣೆ ಬರೀ ಪೇಪರ್​ನಲ್ಲಿ ಮಾತ್ರ ಉಳಿಯಬಾರದೆಂದು ಅವುಗಳ ಜಾರಿಗೆ ಕಂಕಣಬದ್ಧರಾಗಿ ದುಡಿದರು.

    ಪ್ರತ್ಯೇಕ ಕೃಷಿ ಬಜೆಟ್: ಹಸಿರು ಶಾಲು ಹೊದ್ದು ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿದ್ದಲ್ಲದೆ, ವಿಧಾನಸಭೆ ಒಳಗೆ ಮತ್ತು ಹೊರಗೆ ರೈತ ಪರವಾದ ಧ್ವನಿ ಮೊಳಗಿಸಿದ ಹೆಮ್ಮೆಯೂ ಯಡಿಯೂರಪ್ಪ ಅವರದ್ದು. ತಾವು ರೈತ ಪರ ಎನ್ನುವುದನ್ನು ಸಾಬೀತು ಮಾಡಲು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮೊದಲ ಸಿಎಂ ಎಂಬ ದಾಖಲೆ ಬರೆದರು. ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ನೀಡುವ ಯೋಜನೆ ಜಾರಿಗೆ ತಂದರು.

    ಹಾಲಿಗೆ ಪ್ರೋತ್ಸಾಹ ಧನ: 2008ರಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಬಿಎಸ್​ವೈ ಮುಂದಾಗಿದ್ದಲ್ಲದೆ, ಪ್ರತಿ ಲೀಟರ್​ಗೆ 2 ರೂ. ಪ್ರೋತ್ಸಾಹಧನ ಬಜೆಟ್​ನಲ್ಲಿ ಘೋಷಿಸಿದರು. ಈಗ ಈ ಸಹಾಯಧನ 5 ರೂ.ಗೆ ಏರಿಕೆ ಆಗಿದೆ. 25 ಲಕ್ಷ ರೈತರಿಗೆ ಅನುಕೂಲವಾಗುತ್ತಿದೆ.

    ಸಂಘ-ಸಂಸ್ಥೆಗಳಿಗೆ ನೆರವು: ನಾಡು-ನುಡಿ ವಿಚಾರದಲ್ಲಿಯೂ ಯಡಿಯೂರಪ್ಪ ಎಂದೂ ಹಿಂದೆ ಬೀಳಲಿಲ್ಲ. ಕನ್ನಡ ಸಾಹಿತ್ಯ ಪರಿಷತ್​ಗೆ ಕೋಟಿ ರೂ. ನಿಧಿ ನೀಡಿದ್ದಲ್ಲದೆ, ಜಿಲ್ಲಾ ಘಟಕಗಳಿಗೆ ಸಮ್ಮೇಳನಕ್ಕಾಗಿ ನೇರವಾಗಿ ಅನುದಾನ ಬಿಡುಗಡೆ ಮಾಡಿದರು. ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರ ಭವನಗಳ ನಿರ್ವಣಕ್ಕಾಗಿ ಮೊದಲ ಬಾರಿಗೆ ಬಜೆಟ್​ನಲ್ಲಿ ಪ್ರತಿ ಜಿಲ್ಲೆಗೆ 25 ಲಕ್ಷ ರೂ. ನೆರವು ನೀಡಿದ್ದನ್ನು ಈಗಲೂ ಪತ್ರಿಕಾ ಸಂಘಟನೆಗಳು ಅಭಿಮಾನದಿಂದ ನೆನಪಿಸಿಕೊಳ್ಳುತ್ತವೆ. ವಯೋವೃದ್ಧರಿಗಾಗಿ ‘ಸಂಧ್ಯಾಸುರಕ್ಷಾ’ ಯೋಜನೆ ರೂಪಿಸಿದ್ದಲ್ಲದೆ, ವಿಧವಾ ಮತ್ತು ಅಂಗವಿಕಲ ವೇತನಗಳನ್ನು ಹೆಚ್ಚಳ ಮಾಡಿದ ಹೆಗ್ಗಳಿಕೆ ಬಿಎಸ್​ವೈ ಅವರದು.

    ಕಿಸಾನ್ ಸಮ್ಮಾನ್

    ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಮತ್ತೊಮ್ಮೆ ಸಿಎಂ ಆಗುವ ಅವಕಾಶ ಯಡಿಯೂರಪ್ಪ ಅವರಿಗೆ ಒದಗಿ ಬಂತು. 2019ರ ಜುಲೈ 26ರಂದು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರ ರೂ. ನೆರವಿನ ಜತೆಗೆ ರಾಜ್ಯ ಸರ್ಕಾರದಿಂದ ರೈತರ ಖಾತೆಗೆ ತಲಾ 4 ಸಾವಿರ ರೂ. ನೀಡುವ ಘೋಷಣೆ ಮಾಡಿ ಅನುಷ್ಠಾನಕ್ಕೆ ತಂದರು. ನೇಕಾರರ ಸಾಲ ಮನ್ನಾ ಮಾಡುವ ಕ್ರಾಂತಿಕಾರಿ ನಿರ್ಣಯ ತೆಗೆದುಕೊಂಡರು.

    ಪ್ರತಿ ಮನೆಗೆ -ಠಿ;5 ಲಕ್ಷ

    ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದೆಂದೂ ಕಂಡರಿಯದ ಮಳೆ ಬಿದ್ದು, ಅತಿವೃಷ್ಟಿಯಲ್ಲಿ ಜನ ಬದುಕು ಕಳೆದುಕೊಂಡಾಗ ಅವರ ನೆರವಿಗೆ ಬಿಎಸ್​ವೈ ಸಹಾಯ ಹಸ್ತ ಚಾಚಿದ್ದಲ್ಲದೆ, ಪ್ರತಿ ಸಂತ್ರಸ್ತ ಕುಟುಂಬಗಳಿಗೂ ತತ್​ಕ್ಷಣಕ್ಕೆ ತಲಾ 10 ಸಾವಿರ ರೂ. ನೆರವು ಘೋಷಿಸಿದರು. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಳ್ಳಲು ತಲಾ 5 ಲಕ್ಷ ರೂ. ನೆರವು ಘೋಷಿಸಿ ಸಂತ್ರಸ್ತರಿಗೆ ಸೂರಾದರು. ಬೇರೆ ಯಾವುದೇ ರಾಜ್ಯದಲ್ಲಿ ಇಷ್ಟು ಹಣ ನೀಡಿದ ಉದಾಹರಣೆಗಳಿಲ್ಲ. ಮಠ-ಮಾನ್ಯಗಳು, ರೈತರು, ನೇಕಾರರು, ಹಾಲು ಉತ್ಪಾದಕರು, ಮಹಿಳೆಯರು, ದೀನ ದಲಿತರಿಗಾಗಿ ಹತ್ತು ಹಲವು ಯೋಜನೆ ರೂಪಿಸಿದ ಯಡಿಯೂರಪ್ಪ ಅವರಿಗೆ ಅವರೇ ಸಾಟಿ ಎಂದರೆ ಅತಿಶಯೋಕ್ತಿ ಆಗದು.

    | ಶಿವಾನಂದ ತಗಡೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts