More

    ಇಂದು ಬಿಎಸ್​ವೈ ಹುಟ್ಟುಹಬ್ಬ, ಅಭಿನಂದನಾ ಸಮಾರಂಭ: ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ, ಸಿದ್ದು, ಎಚ್​ಡಿಕೆ ಸಮಾಗಮಕ್ಕೆ ಸಾಕ್ಷಿ

    ಬೆಂಗಳೂರು: ರಾಜಕೀಯ ಮುತ್ಸದ್ಧಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 77ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಗುರುವಾರ (ಫೆ,.27) ಅಭಿನಂದನಾ ಸಮಾರಂಭ ಆಯೋಜನೆಗೊಂಡಿದೆ.

    ಅರಮನೆ ಮೈದಾನದ ವೈಟ್ ಪೆಟಲ್ಸ್​ನಲ್ಲಿ ಬಿಎಸ್​ವೈ ಅಭಿನಂದನಾ ಸಮಿತಿ ಕಾರ್ಯಕ್ರಮ ಏರ್ಪಡಿಸಿದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡುವರು. ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಕಾಫಿ ಟೇಬಲ್ ಪುಸ್ತಕವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನಾವರಣಗೊಳಿಸಿದರೆ, ಸಾಕ್ಷ್ಯಚಿತ್ರವನ್ನು ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಉಪಸ್ಥಿತರಿರುವರು. ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಲ್ಹಾದ ಜೋಷಿ, ಸುರೇಶ್ ಅಂಗಡಿ ಹಾಜರಿರಲಿದ್ದಾರೆ. ಡಾ.ಸಿದ್ದಲಿಂಗಯ್ಯ ಅಭಿನಂದನಾ ನುಡಿಗಳನ್ನಾಡುವರು. ಸಂಜೆ 4ರಿಂದ 5ರವರೆಗೆ ಪಂಡಿತ್ ವೆಂಕಟೇಶ್​ಕುಮಾರ್ ತಂಡದಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದ್ದು, ಬಳಿಕ ಸಭಾ ಕಾರ್ಯಕ್ರಮ ಆರಂಭವಾಗಲಿದೆ.

    ನಾಡಿನ ಸಮಸ್ತ ಪ್ರಜೆಗಳ ಸಮೃದ್ಧ ಬದುಕಿಗಾಗಿ ಬಿ.ಎಸ್.ಯಡಿಯೂರಪ್ಪ ರೂಪಿಸಿದ ‘ದೂರದರ್ಶಿತ್ವದ ಯೋಜನೆಗಳು ಹಲವು, ವಿರೋಧ ಪಕ್ಷದಲ್ಲಿದ್ದಾಗ ಛಲ ಬಿಡದ ಹೋರಾಟಗಾರ, ಮುಖ್ಯಮಂತ್ರಿಯಾಗಿದ್ದಾಗ ಸದಾ ಪ್ರಗತಿ ಕೇಂದ್ರಿತ ಆಡಳಿತಗಾರ. ಕರ್ನಾಟಕದ ಅಭ್ಯುದಯವೇ ಅವರ ಹೆಗ್ಗುರಿ. ಶಿಸ್ತು, ಪ್ರಾಮಾಣಿಕತೆ, ಪರಿಶ್ರಮದಿಂದಲೇ ನಾಡಿನ ಅಗ್ರಗಣ್ಯ ನಾಯಕರಾದ ಅವರಿಗೆ ಕ್ರಿಯಾಶೀಲತೆ, ನಂಬಿಕೆ, ನಿರಂತರ ವಿಶ್ವಾಸವೇ ಬದುಕಿನ ಮಂತ್ರ. ಇಂತಹ ಅಪೂರ್ವ ಮುತ್ಸದ್ಧಿ ಯಡಿಯೂರಪ್ಪ ಫೆ.27ಕ್ಕೆ 77ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಅಭಿನಂದನಾ ಸಮಿತಿ ತಿಳಿಸಿದೆ.

    ದುಂದುವೆಚ್ಚ ಮಾಡಬೇಡಿ

    ಗುರುವಾರ ನನ್ನ ಹುಟ್ಟುಹಬ್ಬ ಸಂದರ್ಭ ಭೇಟಿಯಾಗುವ ಅಭಿಮಾನಿಗಳು, ಹಾರ, ತುರಾಯಿ, ಉಡುಗೊರೆ ಸಲ್ಲಿಸುವುದಾಗಲಿ, ಪಟಾಕಿ ಸಿಡಿಸುವುದಾಗಲಿ ಇನ್ನಿತರ ದುಂದುವೆಚ್ಚ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ. ಅಭಿಮಾನಿಗಳ ಶುಭ ಹಾರೈಕೆಗಿಂತ ದೊಡ್ಡ ಉಡುಗೊರೆ ಯಾವುದೂ ಇಲ್ಲ. ಯಾರೂ ಆಚರಣೆ ನಿಮಿತ್ತ ದುಂದುವೆಚ್ಚಕ್ಕೆ ಮುಂದಾಗಬಾರದು ಎಂದಿದ್ದಾರೆ.

    ಕಾವೇರಿಗೆ ಗೃಹಪ್ರವೇಶ

    ಶಿವಮೊಗ್ಗ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಜನ್ಮದಿನದಂದು ಸಿಎಂ ನಿವಾಸ ಕಾವೇರಿಗೆ ಪೂಜೆ ಸಲ್ಲಿಸಲಿದ್ದಾರೆ. ಫೆ.27ರಂದು ಕಾವೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ವಾಸ್ತುಪೂಜೆ ನಡೆಯಲಿದೆ. ಯಡಿಯೂರಪ್ಪ ಅವರಿಗೆ ಆಯಸ್ಸು ಆರೋಗ್ಯ ವೃದ್ಧಿ ಹಾಗೂ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಹೋಮ ಹವನಗಳು ನಡೆಯಲಿವೆ. ಒಂದೆರಡು ದಿನಗಳ ನಂತರ ಸಿಎಂ ಅಧಿಕೃತವಾಗಿ ಗೃಹ ಪ್ರವೇಶಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಮಾಡಿ 7 ತಿಂಗಳಾದರೂ ಬಿಎಸ್​ವೈ ಕಾವೇರಿಗೆ ತೆರಳಿರಲಿಲ್ಲ.

    ತವರು ಜಿಲ್ಲೆಗೆ ಬರ್ತ್ ಡೇ ಗಿಪ್ಟ್: ಫೆ.27ರಂದು ಶಿವಮೊಗ್ಗ-ಚೆನ್ನೈ ವಿಶೇಷ ರೈಲಿಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಕಚೇರಿಯಲ್ಲಿ ವೀಡಿಯೋ ಕಾನ್ಪರೆನ್ಸ್ ಮೂಲಕ ಯಡಿಯೂರಪ್ಪ ಹಸಿರು ನಿಶಾನೆ ತೋರಲಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಂಸದ ಬಿ.ವೈ.ರಾಘವೇಂದ್ರ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನೂತನ ರೈಲು ಶಿವಮೊಗ್ಗದಿಂದ ಚೆನ್ನೈಗೆ ಸಂಚಾರ ಆರಂಭಿಸಲಿದೆ. ಈಗ ವಾರದಲ್ಲಿ ಒಂದು ದಿನ ಸಂಚರಿಸುತ್ತಿರುವ ರೈಲು, ಇನ್ನುಮುಂದೆ ವಾರದಲ್ಲಿ ಎರಡು ದಿನ ಓಡಾಟ ನಡೆಸಲಿದೆ.

    ಶಿವಮೊಗ್ಗ-ಚೆನ್ನೈ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಯಡಿಯೂರಪ್ಪ ತವರಿನ ಜನರಿಗೆ ಜನ್ಮದಿನದ ಕೊಡುಗೆ ನೀಡುತ್ತಿದ್ದಾರೆ. ಜತೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಪ್ರವೇಶಿಸಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

    | ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ

    ಎಲ್ಲ ಶಾಸಕರಿಗೆ ಸಂವಿಧಾನದ ಪ್ರತಿ ವಿತರಣೆ

    ಕೊಪ್ಪಳ: ಈ ಬಾರಿಯ ಬಜೆಟ್ ಅಧಿವೇಶನ ಐತಿಹಾಸಿಕವಾಗಲಿದ್ದು, ಎಲ್ಲ ಶಾಸಕರು ಸಂವಿಧಾನದ ಬಗ್ಗೆ ಮಾತನಾಡಲಿದ್ದಾರೆ. ಹೀಗಾಗಿ ಎಲ್ಲ ಶಾಸಕರಿಗೆ ಸಂವಿಧಾನದ ಕನ್ನಡ ಪ್ರತಿ ಮುದ್ರಿಸಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನ ಕುರಿತು ಪ್ರತಿಯೊಬ್ಬರೂ ಅರಿಯಬೇಕು. ಮಾರ್ಚ್ 3 ಮತ್ತು 4ರಂದು ಶಾಸಕರಿಗೆ ಸಂವಿಧಾನ ಕುರಿತು ಮಾತನಾಡಲು ಅವಕಾಶ ನೀಡಲಾಗುವುದು. ನಮ್ಮ ಸರ್ಕಾರದಲ್ಲಿ ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಯಲಬುರ್ಗಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮಾರ್ಚ್ 5ರಂದು ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆ ನಡೆದಿದ್ದು, ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದೆ. ಇದಕ್ಕೆ ಪರ್ಯಾಯವಾಗಿ 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ವಿುಸಲಾಗುವುದು. ಇದಕ್ಕೆ ಅಂದಾಜು 6 ಸಾವಿರ ಕೋಟಿ ರೂ. ಖರ್ಚಾಗಲಿದೆ. ಇದು ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ಆ ಎರಡೂ ರಾಜ್ಯಗಳ ಜತೆ ರ್ಚಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts