More

    ಸಮಗ್ರ ನೀರಾವರಿ ಅಭಿವೃದ್ಧಿಗೆ ಒತ್ತು ; ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ; ಕೇಂದ್ರದ ನೆರವು ಪಡೆದು ಯೋಜನೆಗಳು ತ್ವರಿತ ಪೂರ್ಣ

    ತಿಪಟೂರು: ಹೆಚ್ಚು ಅನುದಾನ ಮೀಸಲಿಡುವ ಮೂಲಕ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿಗೆ ಒತ್ತು ನೀಡಿ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

    ನಗರದಲ್ಲಿ ಶನಿವಾರ ಮಿನಿ ವಿಧಾನಸೌಧ, ನಗರಸಭೆ ಕಚೇರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿನ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.
    ಎಷ್ಟೇ ಕಷ್ಟವಾದರೂ ರಾಜ್ಯದ ಸಮಗ್ರ ನೀರಾವರಿ ಯೋಜನೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗುವುದು, ಜತೆಗೆ ಕೇಂದ್ರ ಸರ್ಕಾರದ ಸಹಕಾರ ಪಡೆದು ಯೋಜನೆಗಳನ್ನು ಪೂರ್ಣಗೊಳಿಸಿ ನಾಡಿನ ಎಲ್ಲ ಕೆರೆಗಳನ್ನು ತುಂಬಿಸುವ ಸಂಕಲ್ಪ ಮಾಡಿದ್ದೇನೆ. ಈ ವರ್ಷ ದಾಖಲೆಯ ಬೆಳೆ ಬೆಳೆದಿರುವ ರೈತರಿಗೆ ನೀರಾವರಿ ಯೋಜನೆಯನ್ನು ಕೊಡುಗೆ ನೀಡುವುದಾಗಿ ಅಭಯವಿತ್ತರು.

    ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ 2023ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಗಮನಹರಿಸಲಾಗಿದೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಗ್ರಾಮೀಣರ ಸಮಸ್ಯೆಗೆ ಸ್ಪಂದಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮುಖ್ಯಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸಚಿವರಿಗೆ ತಿಂಗಳಲ್ಲಿ ಒಂದು ದಿನ ವಾಸ್ತವ್ಯ ಮಾಡಲು ಸೂಚಿಸುವುದಾಗಿ ಹೇಳಿದರು.

    ಸರ್ಕಾರಿ ಕಚೇರಿಗಳಲ್ಲಿ ಉತ್ತಮ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ, ಅಧಿಕಾರಿಗಳು ಕಡತಗಳ ವಿಲೇವಾರಿಯಲ್ಲಿ ವಿಳಂಬ ಮಾಡಬಾರದು ಹಾಗೂ ಜನರೂ ಸಹ ಜಾಗೃತರಾಗಬೇಕು, ಆಗ ಭ್ರಷ್ಟಾಚಾರ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಸದ ಜಿ.ಎಸ್. ಬಸವರಾಜ್ ಮಾತನಾಡಿದರು, ಶಾಸಕರಾದ ಮಸಾಲ ಜಯರಾಮ್, ಚಿದಾನಂದ ಎಂ.ಗೌಡ, ಜಿಪಂ ಉಪಾಧ್ಯಕ್ಷೆ ಶಾರದಾ, ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ, ಕೇಂದ್ರವಲಯ ಐಜಿಪಿ ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ, ತಹಸೀಲ್ದಾರ್ ಚಂದ್ರಶೇಖರ್ ಮತ್ತಿತರರು ಇದ್ದರು.

    ಜಿಲ್ಲಾಕೇಂದ್ರ ೋಷಣೆ ಮನವಿ: ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ತಿಪಟೂರು ತಾಲೂಕು ಅಭಿವೃದ್ಧಿಗೆ ಸಿಎಂ ಹೆಚ್ಚು ಒತ್ತು ನೀಡಿದ್ದಾರೆ. ನೀರಾವರಿ ಸೇರಿ ಹಲವು ಯೋಜನೆಗಳನ್ನು ತಾಲೂಕಿಗೆ ನೀಡಿದ್ದಾರೆ ಎಂದರಲ್ಲದೆ ತಿಪಟೂರು ತಾಲೂಕನ್ನು ಜಿಲ್ಲಾಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಹಾಗೂ ಈಗಾಗಲೇ ಘೋಷಣೆಯಾಗಿರುವ ತೋಟಗಾರಿಕೆ ಕಾಲೇಜು ಪ್ರಾರಂಭಿಸುವಂತೆ ಸಿಎಂಗೆ ಮನವಿ ಮಾಡಿದರು.

    ಉಪಸಮರಕ್ಕೆ ನಿಯಮ ಅನ್ವಯ ಆಗಲ್ಲ!: ಸೂಕ್ತ ಸಾಕ್ಷಾಧಾರ ಇಲ್ಲದೇ ಆರೋಪ ಮಾಡುವುದು ವಿರೋಧ ಪಕ್ಷದವರಿಗೆ ಶೋಭೆಯಲ್ಲ ಎನ್ನುವ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ಕುರಿತ ಆರೋಪಗಳಿಗೆ ತೀಕ್ಣವಾಗಿ ಪ್ರತಿಕ್ರಿಯಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಕರೋನಾ ನಿಯಂತ್ರಣ ಸಂದರ್ಭ ಸರ್ಕಾರಿ ಹಣ ದುರುಪಯೋಗವಾಗಿದೆ ಎಂಬ ಆರೋಪದಲ್ಲಿ ಸತ್ಯವಿಲ್ಲ, ಈಗಾಗಲೇ ಖರ್ಚಿನ ವಿವರವನ್ನು ವಿಧಾನಮಂಡಲದಲ್ಲಿ ಕೊಟ್ಟಿದ್ದೇವೆ. ದುರುಪಯೋಗವಾಗಿದೆ ಅಂತ ಹೇಳೋದು ಸುಲಭ, ಸಾಕ್ಷಾೃಧಾರ ಇಲ್ಲದೇ ಆರೋಪ ಮಾಡೋದು ಸರಿಯಲ್ಲ ಎಂದರು.
    ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಬಂದ್ ಮಾಡುವ ಯೋಚನೆ ಸದ್ಯಕ್ಕಿಲ್ಲ. ಆದರೆ, ಪರಿಸ್ಥಿತಿ ಕೈ ಮೀರಿದರೆ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದ ಬಿಎಸ್‌ವೈ, ನಾಲ್ಕು ಗೋಡೆಯ ಮಧ್ಯೆ ನಡೆಯುವ ಕಾರ್ಯಕ್ರಮಗಳಿಗೆ ನಿರ್ಬಂಧವಿದೆ. ಆದರೆ, ಉಪ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಕಠಿಣ ನಿಯಮ ಜಾರಿಯಾಗಲ್ಲ. ಕರೊನಾ ನಿಯಂತ್ರಣ ಜನರ ಕೈಯಲ್ಲೇ ಇದೆ, ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡುವುದು ಹಾಗೂ ಕರೊನಾ ಲಸಿಕೆ ಪಡೆದು ಮುನ್ನೆಚ್ಚರಿಕೆ ವಹಿಸುವ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

    ಸಚಿವ ಜೆ.ಸಿ.ಮಾಧುಸ್ವಾಮಿ ಚೇತರಿಕೆ: ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಿಎಂ ಯಡಿಯೂರಪ್ಪ ಭಾಗವಹಿಸಿದ್ದ ಸಮಾರಂಭದಲ್ಲಿ ಗೈರಾಗಿದ್ದರು. ಕಳೆದೊಂದು ವಾರದಿಂದ ಬೆಂಗಳೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜೆಸಿಎಂ ಚೇತರಿಸಿಕೊಂಡಿದ್ದು ದೂರವಾಣಿ ಮೂಲಕ ಅಧಿಕಾರಿಗಳು, ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂದಿನ ಒಂದೆರಡು ವಾರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಸಚಿವರ ಕಚೇರಿ ಮೂಲ ತಿಳಿಸಿದೆ.

    ಎತ್ತಿನಹೊಳೆ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಭದ್ರಾ ಮೇಲ್ದಂಡೆ ಯೋಜನೆ ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಬೆಂಗಳೂರಿನ ವೃಷಭಾವತಿ ನದಿಯ ಸಂಸ್ಕರಿಸಿದ ನೀರನ್ನು ತುಮಕೂರು ಸೇರಿ ನಾಲ್ಕು ಜಿಲ್ಲೆಗಳ 234 ಕೆರೆಗಳಿಗೆ ತುಂಬಿಸಲು 500 ಕೋಟಿ ರೂ. ಮೀಸಲಿಡಲಾಗಿದೆ.
    ಬಿ.ಎಸ್.ಯಡಿಯೂರಪ್ಪ, ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts