More

    ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ

    ಆಲ್ದೂರು: ಆಲ್ದೂರು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಕೆರೆ, ಸ್ಮಶಾನ ಭೂಮಿ ಒತ್ತುವರಿ, ಬೀದಿ ನಾಯಿಗಳ ಹಾವಳಿ, ಬಸ್ ನಿಲ್ದಾಣ ದುರಸ್ತಿ, ಕೃಷಿಯಂತ್ರಧಾರೆ ಅವ್ಯವಹಾರ, ಅಂಗನವಾಡಿ ಕಟ್ಟಡ ನಿರ್ಮಾಣ, ವಿದ್ಯುತ್ ಕಂಬಗಳ ಅಳವಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆದವು.

    ಸ್ಥಳೀಯ ಧನಂಜಯ್ ಒತ್ತುವರಿ ಕುರಿತು ಪ್ರಸ್ತಾಪಿಸಿ, ಪಟ್ಟಣ ಸಮೀಪದ ಸರ್ವೇ ನಂಬರ್ 617ರಲ್ಲಿ ಹೊಸಳ್ಳಿ ದೊಡ್ಡಕೆರೆಯ ಜಾಗ ಒತ್ತುವರಿಯಾಗಿದೆ. ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದು, ತಹಸೀಲ್ದಾರ್ ಸರ್ವೇ ಮಾಡಲು ಆದೇಶಿಸಿದ್ದರು. ಕಂದಾಯ ಅಧಿಕಾರಿಗಳ ತಂಡ ಸರ್ವೇ ಮಾಡಿ 2 ಎಕರೆಗೂ ಹೆಚ್ಚು ಜಾಗ ಒತ್ತುವರಿಯಾಗಿದೆ ಎಂದು ವರದಿ ಸಲ್ಲಿಸಿ 2 ವರ್ಷಗಳು ಕಳೆದಿವೆ. ಈ ಬಗ್ಗೆ ಪ್ರತಿ ಗ್ರಾಮಸಭೆಯಲ್ಲಿ ಚರ್ಚೆ ನಡೆದರೂ ತೆರವು ಮಾಡಿಲ್ಲ ಎಂದು ದೂರಿದರು.
    ಹೊಸಳ್ಳಿ-ಅಡ್ಡಮಕ್ಕಿ ಗ್ರಾಮದ ಸರ್ವೇ ನಂಬರ್ 430ರಲ್ಲಿ 5 ಎಕರೆ ಸರ್ಕಾರಿ ಜಾಗವನ್ನು ಆಶ್ರಯ ನಿವೇಶನಕ್ಕೆ ಕಾಯ್ದಿರಿಸಲಾಗಿದೆ. ಅಲ್ಲಿ ಸುಮಾರು 40 ಕುಟುಂಬಗಳು ವಾಸವಿದ್ದು ಆ ಜಾಗ ಒತ್ತುವರಿಯಾಗಿದೆ. ಒತ್ತುವರಿ ತೆರವುಗೊಳಿಸದಿದ್ದರೆ ಅಧಿಕಾರಿಗಳು ಹಾಗೂ ಒತ್ತುವರಿದಾರರ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಪಿಡಿಒ ಶಂಶೂನ್ ನಹರ್ ಪ್ರತಿಕ್ರಿಯಿಸಿ, ಅಡ್ಡಮಕ್ಕಿ ಗ್ರಾಮದ ಜಾಗಕ್ಕೆ ನಕ್ಷೆ ತಯಾರಿಸಿಲ್ಲ. ನಕ್ಷೆ ತಯಾರಿಸುವಂತೆ ತಹಸೀಲ್ದಾರ್ ಅವರಿಂದ ಆದೇಶ ಬಂದಿದೆ. ಒತ್ತುವರಿ ತೆರವು ಮಾಡಿಸಲು ನಮ್ಮ ಹಂತದಲ್ಲಿ ಸಾಧ್ಯವಿಲ್ಲ. ಈ ವಿಚಾರವನ್ನು ತಾಪಂ ಇಒ ಗಮನಕ್ಕೆ ತರಲಾಗಿದೆ ಎಂದರು.
    ಬೀದಿ ನಾಯಿಗಳನ್ನು ಸ್ಥಳಾಂತರಿಸಿದ್ದರೂ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಬೇಕು ಎಂದು ಸದಸ್ಯ ಅಶೋಕ್ ಒತ್ತಾಯಿಸಿದರು. ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸುವುದಾಗಿ ಪಶು ಇಲಾಖೆ ಅಧಿಕಾರಿ ತಿಳಿಸಿದರು.
    ಗ್ರಾಪಂ ಅಧ್ಯಕ್ಷೆ ಬಿ.ಆರ್ ನಾಗರತ್ನಾ, ಸದಸ್ಯರು, ಕೃಷಿ ಇಲಾಖೆ ಅಧಿಕಾರಿ ಪಾಪಣ್ಣ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಅಂಗನವಾಡಿ ಕಾರ್ಯರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts