More

    ಸಿಟಿ ಸ್ಮಾರ್ಟ್ ಆಗೋದು ಯಾವಾಗ?

    ಬೆಳಗಾವಿ: ನಗರದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಕೈಗೊಂಡಿರುವ ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿಗಳು ಸಾರ್ವಜನಿಕರಿಗೆ ದಿನದಿಂದ
    ದಿನಕ್ಕೆ ಸಮಸ್ಯೆ ತಂದೊಡ್ಡುತ್ತಿವೆ. ಅಲ್ಲದೆ, ಓಡಾಡಲು ಪಾದಚಾರಿಗಳು ಭಯಪಡುವಂತಾಗಿದೆ.

    ಸ್ಮಾರ್ಟ್‌ಸಿಟಿ ಯೋಜನೆಯಡಿ ನೂರಾರು ಕೋಟಿ ರೂ. ಅನುದಾನದಲ್ಲಿ ರಸ್ತೆ, ಚರಂಡಿ ಕಾಮಗಾರಿ ಕೈಗೊಂಡು ವರ್ಷ ಕಳೆದಿದ್ದರೂ ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಇನ್ನೂ ಮುಕ್ತವಾಗಿಲ್ಲ. ಸಂಚಾರಿ ಪೊಲೀಸರು, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನೂ ರೂಪಿಸಿಲ್ಲ. ಹೀಗಾಗಿ ನಿತ್ಯದ ಸಂಚಾರ ವ್ಯವಸ್ಥೆಗೆ ಕಿರಿಕಿರಿ ಉಂಟಾಗುತ್ತಿದೆ.

    ಸಂಚಾರಕ್ಕೆ ತೊಡಕು: ನಗರದ ಪ್ರಮುಖ ಜನಸಂದಣಿಗಳಲ್ಲಿ ಒಂದಾದ ಜಿಲ್ಲಾ ನ್ಯಾಯಾಲಯ, ಕೇಂದ್ರ ಬಸ್ ನಿಲ್ದಾಣ, ನೆಹರು ನಗರ, ಶಿವಬಸವನ ನಗರ, ಕಾಕತಿ ರಸ್ತೆ, ಗಾಂಧಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಜನರು ಓಡಾಡುವ ಮಾರ್ಗದಲ್ಲಿ ಕಲ್ಲು, ಮಣ್ಣು ಹಾಕಲಾಗಿದೆ. ಇದರಿಂದಾಗಿ ಸರ್ಕಾರಿ ಕಚೇರಿಗಳಿಗೆ, ನ್ಯಾಯಾಲಯಕ್ಕೆ ಹಾಗೂ ಆಸ್ಪತ್ರೆಗಳಿಗೆ ಹೋಗಲು ಸಮಸ್ಯೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಕಳಪೆ ಕಾಮಗಾರಿ ಆರೋಪ: ಬೆಳಗಾವಿ ನಗರದಲ್ಲಿ ಎರಡು ವರ್ಷಗಳಿಂದ ನೂರಾರು ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆದರೆ, ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ. ನಿಗದಿತ
    ಸಮಯದಲ್ಲಿ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಖಾಸಗಿ ಕಂಪನಿಯ ಉದ್ಯೋಗಿ ನಾರಾಯಣ
    ಎಸ್.ಅಮ್ಮೇನಕರ್, ಆರ್.ಇ. ಮಠದ ದೂರಿದ್ದಾರೆ.

    ಪೂರ್ಣಗೊಳ್ಳದ ಅಭಿವೃದ್ಧಿ ಕಾಮಗಾರಿ

    ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ 41 ಕಿ.ಮೀ. ಸ್ಮಾರ್ಟ್ ರಸ್ತೆಗಳ ನಿರ್ಮಾಣ, ಟಿಳಕವಾಡಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, 182 ಕಿ.ಮೀ. ಉದ್ದಕ್ಕೆ ಅಂಡರ್‌ಗ್ರೌಂಡ್ ಎಲ್‌ಟಿ ವಿದ್ಯುತ್ ಕೇಬಲ್, ಸಿಟಿ ಬಸ್ ನಿಲ್ದಾಣ, ವಂಟಮುರಿಯಲ್ಲಿ 30 ಹಾಸಿಗೆಯುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರ, ಕಣಬರ್ಗಿ ಕೆರೆ ಅಭಿವೃದ್ಧಿ ಸೇರಿ ಒಟ್ಟು 568 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಇನ್ನೂವರೆಗೂ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ.

    ನಗರದ ವಿವಿಧ ಕಡೆ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳುವ ಮುನ್ನ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಡೆ ಏಕಕಾಲದಲ್ಲಿ ಕಾಮಗಾರಿಯಿಂದ ಜನರಿಗೆ ಅಡಚಣೆ ಉಂಟಾಗಿದೆ. ಇನ್ನು ಸ್ವಲ್ಪ ಸಮಯದಲ್ಲೇ ಕಾಮಗಾರಿ ಮುಗಿದ ಬಳಿಕ ಸಮಸ್ಯೆ ನೀಗಲಿದೆ.
    | ಶಶಿಧರ ಕುರೇರ ಸ್ಮಾರ್ಟ್ ಸಿಟಿ ಎಂ.ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts