More

    ಗೋಲ್‌ಮಾಲ್ ಕೋಲಾಹಲ, ಮುತ್ತಿಗೆ ಯತ್ನ ಹಲವರ ಬಂಧನ, ಬಿಡುಗಡೆ

    ಶಿವಮೊಗ್ಗ: ನಗರದ ಶಿವಪ್ಪನಾಯಕ ಮಾರುಕಟ್ಟೆಯಲ್ಲಿರುವ ಸಿಟಿ ಸೆಂಟಲ್ ಮಾಲ್‌ನ ಲೀಸ್ ಅವಧಿ ವಿಸ್ತರಣೆ ಸಬಂಧ ತನಿಖಾ ವರದಿ ಬಹಿರಂಗಗೊಳಿಸದ ಕ್ರಮ ಖಂಡಿಸಿ ಬುಧವಾರ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಮಹಾನಗರ ಪಾಲಿಕೆ ಮಹಾದ್ವಾರದಲ್ಲೇ ತಡೆದು ಹಲವರನ್ನು ಬಂಧಿಸಿದರು.
    ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಪ್ರಮುಖರು, ಯುವ ಕಾಂಗ್ರೆಸ್ ಮತ್ತು ಎನ್‌ಐಸಿಯು ಕಾರ್ಯಕರ್ತರು ಪಾಲಿಕೆ ಮುಖ್ಯದ್ವಾರದ ಎದುರು ಪ್ರತಿಭಟನೆ ನಡೆಸಿ ಆಡಳಿತರೂಢ ಬಿಜೆಪಿ ವಿರುದ್ಧ ಕಿಡಿಕಾರಿದರು. ಇದೇ ವೇಳೆ ಪೊಲೀಸರು ಮುಖ್ಯದ್ವಾರದಲ್ಲೇ ತಡೆದ ಕಾರಣ ಕೆಲವರು ಗೇಟ್ ಹತ್ತಿ ಮೇಯರ್ ಕಚೇರಿಗೆ ತೆರಳಲು ಯತ್ನಿಸಿದರು.
    ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರದಿ ಬಂದು 5 ತಿಂಗಳಾದರೂ ಮೇಯರ್ ಸಭೆ ಕರೆದಿಲ್ಲ. ಬಿಜೆಪಿ ಪಾಲಿಕೆ ಸದಸ್ಯರು ಕಿಕ್‌ಬ್ಯಾಕ್ ಪಡೆದಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿದರು. ಈ ಹಗರಣದಲ್ಲಿ ಆಡಳಿತರೂಢ ಸದಸ್ಯರ ಜತೆಗೆ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕೈವಾಡವೂ ಇದೆ ಎಂದು ಪ್ರತಿಭಟನಾಕಾರರು ದೂರಿದರು.
    ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಎಂಎಲ್ಸಿ ಆರ್.ಪ್ರಸನ್ನಕುಮಾರ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಶಮೀರ್ ಖಾನ್, ಆರ್.ಸಿ.ನಾಯ್ಕ, ಯಮುನಾ ರಂಗೇಗೌಡ, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ, ಪಕ್ಷದ ಮುಖಂಡರಾದ ಎಸ್.ಪಿ.ದಿನೇಶ್, ಎನ್.ರಮೇಶ್, ಎಸ್.ಪಿ.ಶೇಷಾದ್ರಿ, ರವಿಕುಮಾರ್, ಕೆ.ದೇವೇಂದ್ರಪ್ಪ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್‌ಕುಮಾರ್, ಕಾಂಗ್ರೆಸ್ ಉತ್ತರ ಬ್ಲಾಕ್ ಅಧ್ಯಕ್ಷ ದೀಪಕ್ ಸಿಂಗ್, ಕವಿತಾ, ಸುವರ್ಣಾ ನಾಗರಾಜ್, ಸ್ಟೆಲ್ಲಾ ಮಾರ್ಟಿನ್, ಚಂದ್ರಿಕಾ, ಕೆ.ಎಲ್.ಪವನ್, ನದೀಮ್, ಮಸ್ತಾನ್, ಸುಹಾಸ್ ಗೌಡ ಇತರಿದ್ದರು.
    ಬಿಗಿ ಪೊಲೀಸ್ ಬಂದೋಬಸ್ತ್: ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ವಿನೋಬನಗರ ಠಾಣೆ ಇನ್‌ಸ್ಪೆಕ್ಟರ್ ರವಿ, ಕೋಟೆ ಠಾಣೆ ಇನ್‌ಸ್ಪೆಕ್ಟೆರ್ ಟಿ.ಕೆ.ಚಂದ್ರಶೇಖರ್ ಮತ್ತಿತರ ಹಿರಿಯ ಅಧಿಕಾರಿಗಳು ಇದ್ದರು. ಪ್ರತಿಭಟನಾಕಾರರು ಪಾಲಿಕೆ ಆವರಣಕ್ಕೆ ನುಗ್ಗದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆದರೂ ಗೇಟ್ ಹತ್ತಿ ಆವರಣ ಪ್ರವೇಶಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಡಿಎಆರ್ ಮೈದಾನಕ್ಕೆ ಕರೆದೊಯ್ದು ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts