

Triptii Dimri : ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಮತ್ತು ರಣಬೀರ್ ಕಪೂರ್ ಅಭಿನಯದ ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸುಮಾರು 900 ಕೋಟಿ ರೂಪಾಯಿ ಲೂಟಿ ಮಾಡಿತು. ನಾಯಕಿಯಾಗಿ ಕನ್ನಡತಿ ಹಾಗೂ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಇಮೇಜ್ ಪಡೆದ ಮತ್ತೊಬ್ಬ ಚೆಲುವೆ ಅಂದರೆ ಅವರು ತೃಪ್ತಿ ದಿಮ್ರಿ.
ಜೋಯಾ ಪಾತ್ರದಲ್ಲಿ ತಮ್ಮ ಬೋಲ್ಡ್ನೆಸ್ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆದರು. ಕೇವಲ ಒಂದೇ ದೃಶ್ಯದಿಂದ ಪಡ್ಡೆ ಹುಡುಗರ ನಿದ್ದೆ ಕದ್ದರು. ತೃಪ್ತಿ ಅವರು ಈ ಹಿಂದೆ ಸಾಕಷ್ಟು ಸಿನಿಮಾ ಮಾಡಿದರೂ ಅನಿಮಲ್ ಸಿನಿಮಾದಿಂದ ಒಳ್ಳೆಯ ಕ್ರೇಜ್ ಸಿಕ್ಕಿದೆ. ಇದರೊಂದಿಗೆ ಸತತ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ತಾಜಾ ಸಂಗತಿ ಏನೆಂದರೆ, ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗಿಯಾದ ತೃಪ್ತಿ ದಿಮ್ರಿ, ತಮ್ಮ ವೃತ್ತಿಜೀವನದ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಆರಂಭದಲ್ಲಿ ಅವಕಾಶಗಳ ಕೊರತೆಯಿಂದ ಸಾಕಷ್ಟು ಬಾರಿ ಕಣ್ಣೀರಾಕಿದ್ದೆ ಎಂದಿದ್ದಾರೆ. ಅಲ್ಲದೆ, ಅನಿಮಲ್ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ ಏನೆಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.
ಅನಿಮಲ್, ಮಹಿಳೆಯರನ್ನು ದ್ವೇಷಿಸುವ ಚಿತ್ರ ಎಂದು ನಾನೆಂದಿಗೂ ಯೋಚಿಸಲಿಲ್ಲ. ನಾನು ಸಿನಿಮಾಗಳಿಗೆ ಅಂತಹ ಟ್ಯಾಗ್ಗಳನ್ನು ನೀಡುವುದಿಲ್ಲ. 'ಕೋಲಾ' ಮತ್ತು 'ಬುಲ್ಬುಲ್' ಚಿತ್ರಗಳನ್ನು ನಾನು ಸ್ತ್ರೀವಾದಿ ಚಿತ್ರಗಳೆಂದು ಪರಿಗಣಿಸಿಲ್ಲ. ನಿರ್ದೇಶಕರ ಮೇಲೆ ನಂಬಿಕೆ ಇಟ್ಟು ಸಿನಿಮಾ ಆಯ್ಕೆ ಮಾಡುತ್ತೇವೆ. ನಾವು ಕಥೆಗಳಲ್ಲಿನ ಪಾತ್ರಗಳೊಂದಿಗೆ ಸಂಪರ್ಕ ಸಾಧಿಸುತ್ತೇವೆ. ಅನಿಮಲ್ ಚಿತ್ರದ ಆಫರ್ ಬಂದಾಗ ನಿರ್ದೇಶಕ ಸಂದೀಪ್ ಅವರನ್ನು ಭೇಟಿಯಾಗಿದ್ದೆ. ನಾನು ಇಡೀ ಕಥೆಯನ್ನು ಕೇಳಲಿಲ್ಲ. ನಾನು ಜೋಯಾ ಪಾತ್ರವನ್ನು ಮಾತ್ರ ಕೇಳಿದೆ ಎಂದು ತೃಪ್ತಿ ದಿಮ್ರಿ ಹೇಳಿದರು.
ಅನಿಮಲ್ ಸಿನಿಮಾ ಮಾಡುವ ಮೊದಲು ನಾನು ಪಾಸಿಟಿವ್ ಪಾತ್ರಗಳನ್ನು ಮಾತ್ರ ಮಾಡಿದ್ದೆ. ಆದರೆ, ಈ ಸಿನಿಮಾದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಈ ಪಾತ್ರದಲ್ಲಿ ನನ್ನ ಮನಸ್ಸಿನಲ್ಲಿ ಮೋಸ ಮಾಡುವ ಆಲೋಚನೆ ಇದ್ದರೂ ಸಹ ದಯೆ ಮತ್ತು ಸಹಾನುಭೂತಿ ತೋರಿಸಬೇಕು ಎಂದು ನಿರ್ದೇಶಕರು ಹೇಳಿದರು. ನಾನು ಅದನ್ನು ಸವಾಲಾಗಿ ತೆಗೆದುಕೊಂಡೆ, ನಾನು ತಕ್ಷಣ ಚಿತ್ರಕ್ಕೆ ಒಪ್ಪಿಕೊಂಡೆ ಎಂದು ತೃಪ್ತಿ ದಿಮ್ರಿ ತಿಳಿಸಿದರು. (ಏಜೆನ್ಸೀಸ್)