

Aditi Rao Hydari : ಪ್ರೇಮ ಸಂಬಂಧ ಮುರಿದುಬಿದ್ದ ಬಳಿಕ ಅಥವಾ ವಿಚ್ಛೇದನದ ನಂತರ ಮಾಜಿ ಸಂಗಾತಿಯ ಮುಖ ನೋಡಲು ಇಷ್ಟಪಡದವರೇ ಹೆಚ್ಚು. ಆದರೆ, ಇದಕ್ಕೆ ತದ್ವಿರುದ್ಧವಾಗಿ ಡಿವೋರ್ಸ್ ಬಳಿಕವೂ ಮಾಜಿ ಪತಿಯೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಮುಂದುವರಿಸಬಹುದು ಎಂಬ ಬೋಲ್ಡ್ ಹೇಳಿಕೆ ನೀಡುವ ಮೂಲಕ ಖ್ಯಾತ ನಟಿ ಅದಿತಿ ರಾವ್ ಹೈದರಿ ಎಲ್ಲರ ಗಮನ ಸೆಳೆದಿದ್ದಾರೆ.
ಬ್ರೇಕ್‌ಅಪ್ ಅಥವಾ ವಿಚ್ಛೇದನದ ನಂತರ ದೂರವಾದವರು ಎಂದಿಗೂ ಸ್ನೇಹಿತರಾಗಲು ಸಾಧ್ಯವಿಲ್ಲ ಎಂಬ ವಾದವನ್ನು ತಾನು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದು ನೆಟ್‌ಫ್ಲಿಕ್ಸ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ನಟಿ ಅದಿತಿ ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು ಪರಸ್ಪರ ಗೌರವ, ಪರಿಪಕ್ವತೆ, ಉತ್ತಮ ಆಲೋಚನೆಗಳು ಮತ್ತು ಪರಸ್ಪರ ತಿಳಿವಳಿಕೆ ಇದ್ದರೆ ಮದುವೆಯಂಥ ಬಂಧ ಕಳಚಿದ ಮೇಲೂ ಸುಂದರವಾದ ಪ್ಲಾಟೋನಿಕ್ ಸ್ನೇಹವನ್ನು ಉಳಿಸಿಕೊಳ್ಳಬಹುದು ಎಂದು ಅದಿತಿ ಅಭಿಪ್ರಾಯಪಟ್ಟಿದ್ದಾರೆ.
ನಟಿ ಅದಿತಿ ರಾವ್ ಹೈದರಿ ಅವರು ಹೇಳಿದ ಈ ಮಾತುಗಳು ಕೇವಲ ವಾದಕ್ಕಷ್ಟೇ ಸೀಮಿತವಾಗಿರದೆ, ಅವರ ಸ್ವಂತ ಜೀವನಕ್ಕೂ ಅನ್ವಯಿಸುತ್ತಿದೆ. ಅದಿತಿ ಅವರು ಈ ಹಿಂದೆ ನಟ ಸತ್ಯದೀಪ್ ಮಿಶ್ರಾ ಅವರನ್ನು ವಿವಾಹವಾಗಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಈ ಜೋಡಿ 2013ರಲ್ಲಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದು ಪರಸ್ಪರ ದೂರವಾಗಿದ್ದರು. ಆದರೂ ಇಂದಿಗೂ ಇವರಿಬ್ಬರು ಸೌಹಾರ್ದಯುತವಾದ ಸ್ನೇಹ ಸಂಬಂಧವನ್ನು ಹಾಗೆ ಉಳಿಸಿಕೊಂಡಿದ್ದಾರೆ.
ಮಾಜಿ ದಂಪತಿಯಾದ ಇವರು ಪರಸ್ಪರರ ವ್ಯಕ್ತಿತ್ವಕ್ಕೆ ಗೌರವ ನೀಡುತ್ತಾ, ಒಬ್ಬರ ಬೆಳವಣಿಗೆಗೆ ಮತ್ತೊಬ್ಬರು ಬೆನ್ನೆಲುಬಾಗಿ ನಿಲ್ಲುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕಹಿ ಘಟನೆಗಳನ್ನು ಬದಿಗಿಟ್ಟು ಇಬ್ಬರೂ ತಮ್ಮದೇ ವೈಯಕ್ತಿಕ ಜೀವನದಲ್ಲಿ ಮುನ್ನಡೆದಿದ್ದಾರೆ. ಸತ್ಯದೀಪ್ ಮಿಶ್ರಾ ಅವರು ಖ್ಯಾತ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಅವರನ್ನು ವಿವಾಹವಾದರೆ, ಅದಿತಿ ರಾವ್ ಹೈದರಿ ಅವರು ನಾಯಕ ನಟ ಸಿದ್ಧಾರ್ಥ್ ಅವರೊಂದಿಗೆ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ, (ಏಜೆನ್ಸೀಸ್).