BBK13: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 13ರ ನಾಲ್ಕನೇ ವಾರದಲ್ಲಿ ಎಂಟ್ರಿಕೊಟ್ಟ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆರಂಭದಲ್ಲಿ ಕಿಚ್ಚು ಹಚ್ಚಿದಂತೆ ಕಂಡರೂ ನಂತರದ ದಿನಗಳಲ್ಲಿ ಠುಸ್ ಆಗಿದ್ದು ಸದ್ಯ ಬಿಗ್ಬಾಸ್ ವೀಕ್ಷಕರನ್ನು ಮಾತ್ರವಲ್ಲದೇ ಸ್ವತಃ ನಿರೂಪಕ ಕಿಚ್ಚ ಸುದೀಪ್ ಅವರಿಗೂ ಬೇಸರ ತಂದಿದೆ. ಮತ್ತೊಂದೆಡೆ, ಮನೆಗೆ ವಾಪಾಸ್ ಬಂದ ತಾಂಡವ್ ರಾಮ್ ಕ್ಯಾಪ್ಟನ್ ಆಗಿ ಆಯ್ಕೆ ಆದರೂ ಮನೆಯ ಸದಸ್ಯರ ನಡುವಿನ ಜಗಳ ಮನಸ್ತಾಪ ಎಂದಿನಂತೆ ಜೋರಾಗಿಯೇ ಸಾಗಿದೆ.
ಕಳೆದ ವಾರ ಟ್ವಿಸ್ಟ್, ಡಬಲ್ ಎಕ್ಸಿಟ್ ಬಳಿಕ ಹೊಸದಾಗಿ ವೈಲ್ಡ್ ಕಾರ್ಡ್ ಪಟ್ಟಿಯಲ್ಲಿ ಮನೆ ಪ್ರವೇಶಿಸಿದ ಗಾನವಿ ಗೌಡ, ಸೋನಿಕಾ ಮತ್ತು ಪ್ರಶಾಂತ್, ಮನೆ ಮಂದಿಗೆಲ್ಲ ತಮ್ಮ ಖಡಕ್ ಮತ್ತು ಖಾರದ ಮಾತಿನಿಂದಲೇ ಕೌಂಟರ್ಗಳನ್ನು ಕೊಟ್ಟಿದ್ದೇ ಆದರೂ ಅಷ್ಟಾಗಿ ಸದ್ದು ಮಾಡಲಿಲ್ಲ. ಇದು ಒಂದೆಡೆಯಾದರೆ, ಈ ವಾರ ಮಂಜು ಮತ್ತು ಲಿಖಿತ್ ಉಸ್ತುವಾರಿಗಳಾಗಿ ತೆಗೆದುಕೊಂಡ ನಿರ್ಧಾರಗಳು ಮತ್ತು ಆಟದ ವೈಖರಿಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚನಿಂದ ಖಡಕ್ ಕ್ಲಾಸ್ ಕೂಡ ಸಿಕ್ಕಾಗಿದೆ. ಇನ್ನು, ಭಾನುವಾರ ಸಂಚಿಕೆಯಲ್ಲಿ ಯಾರಪ್ಪ ಈ ವಾರ ಎಲಿಮಿನೇಟ್ ಆಗಿದ್ದು ಎಂಬ ವಿಷಯಕ್ಕೆ ಅದಾಗಲೇ ಉತ್ತರ ಸಿಕ್ಕಂತಾಗಿದೆ.
ಮಂಜು, ಲಿಖಿತ್, ಕಿರಣ್ ಶಾಸ್ತ್ರಿ, ಧನುಷ್, ಯಶಸ್ ಮತ್ತು ಸಂಗೀತಾ ಭಟ್ ಸೇರಿ ಒಟ್ಟು ಆರು ಮಂದಿ ಈ ವಾರ ನಾಮಿನೇಟ್ ಆಗಿ ಹಾಟ್ ಸೀಟ್ನಲ್ಲಿ ಕುಳಿತಿದ್ದಾರೆ. ಇವರ ಪೈಕಿ ಒಬ್ಬರು ನಾಲ್ಕನೇ ವಾರದ ಕೊನೆಯಲ್ಲಿ ದೊಡ್ಮೆನೆಗೆ ಗುಡ್ಬೈ ಹೇಳುವುದು ಖಚಿತವಾಗಿದೆ. ಅಂತೆಯೇ, ಯಾರು ಹೋಗಬಹುದು ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದೇ ತಡ ಬಿಗ್ಬಾಸ್ ವೀಕ್ಷಕರು ಲಿಖಿತ್ ಅಥವಾ ಕಿರಣ್ ಇರಬಹುದು ಎಂದು ಊಹಿಸಿದ್ದರು. ಸಿನಿ ಮೂಲಗಳ ಪ್ರಕಾರ, ಲಿಖಿತ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಇದೆಷ್ಟು ನಿಜ ಎಂಬುದನ್ನು ಸಂಚಿಕೆಯ ಕೊನೆಯವರೆಗೂ ಕಾದು ನೋಡಬೇಕಿದೆ.