

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಸುಂಟರಗಾಳಿ ಸಿನಿಮಾದಲ್ಲಿ ಲೇಡಿ ವಿಲನ್ ಆಗಿ ಅಭಿನಯಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲಲಿತಮ್ಮ (65) ಇಂದು (ಅಕ್ಟೋಬರ್ 3) ನಿಧನರಾಗಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ 'ಅಮ್ಮನ ಮಡಿಲು' ಎಂಬ ಟ್ರಸ್ಟ್ನಲ್ಲಿ ಆಶ್ರಯ ಪಡೆಯುತ್ತಿದ್ದ ಇವರು ಇಂದು ಬೆಳಿಗ್ಗೆ 9.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಸಿನಿಮಾ ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಲಲಿತಮ್ಮ, ಜಂಗ್ಲಿ, ಲೈಫು ಇಷ್ಟೇನೆ, ಭಜರಂಗಿ, ಕಿತ್ತೂರು ಸೇರಿದಂತೆ 200 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಹಾಗೂ ಹಾಸ್ಯಭರಿತ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚಿಗೆಗೆ ಪಾತ್ರರಾಗಿದ್ದರು.
ಮಾಹಿತಿ ಪ್ರಕಾರ, ಎರಡು ತಿಂಗಳ ಹಿಂದೆ ಸ್ಟ್ರೋಕ್ಗೆ ತುತ್ತಾಗಿದ್ದು, ನಂತರ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ. ಇವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದ ಹಿನ್ನಲೆ, ಸದ್ಯ ಇವರು ಅಮ್ಮನ ಮಡಿಲು ಎಂ ಆಶ್ರಮದವರ ಆಶ್ರಯದಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.
ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಲಲಿತಮ್ಮ ನಂತರ, ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಹ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ರಂಗೋಲಿ, ಮಾಂಗಲ್ಯ, ಮಹಾಮಾಯಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಲಲಿತಮ್ಮ ತಮ್ಮ ವಿಭಿನ್ನ ಶೈಲಿಯ ನಟನೆ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.
2006 ರಲ್ಲಿ ತೆರೆಕಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸುಂಟರಗಾಳಿ ಸಿನಿಮಾದಲ್ಲಿ ಲಲಿತಮ್ಮ ಸಾರಾಯಿ ಶಾರದೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಬಿಡುಗಡೆಯಾದಾಗ ಈ ಪಾತ್ರ ಜನರ ಭಾರಿ ಮೆಚ್ಚುಗೆಯ ಪಾತ್ರವಾಗಿತ್ತು. ಈ ಸಿನಿಮಾ ಬಳಿಕ ಲಲಿತಮ್ಮ ಅವರಿಗೆ ಅನೇಕ ಅವಕಾಶಗಳು ಹುಡುಕಿ ಬಂದಿದ್ದವು. ಲಲಿತಮ್ಮ ಪುನೀತ್ ರಾಜ್ಕುಮಾರ್ ಅಭಿನಯದ 'ಜಾಕಿ', ಶಿವರಾಜ್ಕುಮಾರ್ ಅಭಿನಯದ 'ವಜ್ರಕಾಯ', ದುನಿಯಾ ವಿಜಯ್ ನಟನೆಯ 'ಜಂಗ್ಲಿ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.