

ಮುಂಬೈ: ಬಾಲಿವುಡ್ನ ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ (75) ಗುರುವಾರ (ಅ.8) ತೀವ್ರ ಹೃದಯಾಘಾತದಿಂದ ಗೋವಾದಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ.
ನಾನಾ ಪಾಟೇಕರ್, ತಮ್ಮ ಸ್ವಗೃಹದಲ್ಲಿ ಬೆಳಿಗ್ಗೆ 5.20 ರ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಕುಟುಂಬದವರು ಪಣಜಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾನಾ ಇಹಲೋಕ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ನಾನಾ ಅವರ ಜೀವನಶೈಲಿ, ಸಿನಿಮಾ ಜೀವನ ಹಾಗೂ ಬದುಕಿನ ಸುತ್ತಲಿನ ಹಲವು ಘಟನೆಗಳು ಈಗ ಮತ್ತೆ ಚರ್ಚೆಗೆ ಹಾಗೂ ಮುನ್ನಲೆಗೆ ಬರುತ್ತಿವೆ.
ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ನಾನಾ ಪಾಟೇಕರ್ ತಮ್ಮ ಸಿಗರೇಟ್ ಸೇದುವ ಚಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ನಾನಾ ಹೇಳುವಂತೆ ಅವರು ದಿನಕ್ಕೆ 20 ರ ಮೂರು ಪ್ಯಾಕ್ ಎಂದರೆ ಭರ್ತಿ 60 ಸಿಗರೇಟನ್ನು ಸೇದುತ್ತಿದ್ದರಂತೆ. ನಾನು ದಿನವೀಡಿ ಸಿಗರೇಟ್ ಸೇದುತ್ತಲೇ ಇರುತ್ತಿದೆ. ಊಟ ಮಾಡುವಾಗ, ಸ್ನಾನ ಮಾಡುವಾಗ, ಟಿವಿ ನೋಡುವಾಗ ಎಲ್ಲಾ ಸಮಯದಲ್ಲಿ ನನಗೆ ಸಿಗರೇಟ್ ಬೇಕೇ ಬೇಕಿತ್ತು. ನಾನು ನನ್ನ ಕಾರಿನಲ್ಲಿ ಸಹ ಸಿಗರೇಟ್ ಸೇದುತ್ತಿದ್ದೆ. ಅದರ ಕೆಟ್ಟ ವಾಸನೆ ನನ್ನ ಕಾರನ್ನು ಆವರಿಸಿರುತ್ತಿತ್ತು. ಹೀಗಾಗಿ ನನ್ನ ಕಾರಿನಲ್ಲಿ ಯಾರು ಕುಳಿತುಕೊಳ್ಳಲು ಬರುತ್ತಿರಲಿಲ್ಲ ಎಂದು ನಾನ ಪಾಟೇಕರ ಹೇಳಿದ್ದರು.
ಹೀಗೆ ನಾನು, ಮತ್ತು ನನ್ನ ಸಿಗರೇಟ್ ಚಟ ಮುಂದುವರಿದಿತ್ತು. ನನ್ನ ಸಿಗರೇಟ್ ಚಟದಿಂದ ಇತರರಿಗೆ ತೊಂದರೆ ಆಗುತ್ತಿದೆ ಎಂದು ನನಗೂ ಕೂಡ ಅನ್ನಿಸಿತ್ತು. ಆದರೆ ಬಿಡಲು ಆಗುತ್ತಿರಲಿಲ್ಲ. ಮದ್ಯದ ಸೇವನೆಯಲ್ಲಿ ನನಗೆ ಹಿಡಿತವಿತ್ತು. ಆದರೆ ಈ ಸಿಗರೇಟಿಗೆ ನಾನು ದಾಸನಾಗಿದ್ದೆ.
ಒಂದು ದಿನ ನಾನು ಟಿವಿ ನೋಡುತ್ತಾ ಸಿಗರೇಟ್ ಸೇದುತ್ತಾ ಕುಳಿತಿದ್ದೆ. ಆಗ ನಾನು ಜೋರಾಗಿ ಕೆಮ್ಮ ತೊಡಗಿದೆ. ಕೋಣೆಯೊಳಗಿದ್ದ ನನ್ನ ತಂಗಿ ಹೊರಬಂದಳು. ಆ ಸಮಯದಲ್ಲಿ ಆಕೆಯ 30 ವರ್ಷದ ಮಗನೊಬ್ಬ ಅಕಾಲಿಕ ಮರಣಹೊಂದಿದ್ದ. ಹೊರಬಂದ ಆಕೆ, ನನ್ನ ನೋಡುತ್ತಾ, ಈ ಜೀವನದಲ್ಲಿ ಇನ್ನು ಏನೇನು ನೋಡಬೇಕೋ ಎಂದು ದುಃಖಿಸಿದಳು. ಅವಳ ಆ ಮಾತು ನನ್ನ ಮನಸ್ಸನ್ನು ತೀವ್ರವಾಗಿ ನಾಟಿತು.
ಆ ದಿನದಿಂದ ನಾನು ಸಿಗರೇಟ್ ಸೇದಬಾರದು ಎಂದು ನಿರ್ಧರಿಸಿದೆ. ಒಂದೆರಡು ಸೇದುವುದನ್ನು ಬಿಟ್ಟೆ. ಆಮೇಲೆ ನಾನು ಮುಂಬೈಗೆ ಬಂದೆ. ಸಿನಿಮಾ ಸೆಟ್ನಲ್ಲಿ ಕೂಡ ಸೇದಲಿಲ್ಲ. ಇದನ್ನು ನೋಡಿದ ಕೆಲವರು ಏನಾಯಿತು ಸರ್? ಏಕೆ ಸಿಗರೇಟ್ ಸೇದುತ್ತಿಲ್ಲ? ಎಂದು ಕೇಳಿದರು. ಐದು ದಿನ ಆಗಿದೆ ನಾನು ಸಿಗರೇಟ್ ಬಿಟ್ಟು ಎಂದೆ. ನಾನು ಇವತ್ತಿಗೂ ಇವತ್ತು ಒಂದು ದಿನ ಸೇದೋದಿಲ್ಲ ಎಂದು ಹೇಳುತ್ತೇನೆ, ಈಗ ನಾನು ಸಿಗರೇಟ್ ಬಿಟ್ಟು 20 ವರ್ಷ ಕಳೆದಿದೆ ಎಂದು ನಾನಾ ಹೆಮ್ಮೆಯಿಂದ ಹೇಳಿದ್ದರು, (ಏಜೆನ್ಸೀಸ್).