

ಕೊಚ್ಚಿ: ಕುಂಚಾಕೋ ಬೋಬನ್ ಮತ್ತು ಪ್ರಿಯಾಮಣಿ ನಟನೆಯ ಸೂಪರ್ಹಿಟ್ ಮಲಯಾಳಂ ಸಿನಿಮಾ 'ಆಫೀಸರ್ ಆನ್ ಡ್ಯೂಟಿ' (Officer on Duty) ಚಿತ್ರತಂಡಕ್ಕೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ.
ಸಿನಿಮಾದ ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ. ಎರ್ನಾಕುಲಂ ಮೂಲದ ಸಾಫ್ಟ್ವೇರ್ ಟೆಕ್ಕಿಯೊಬ್ಬರು, ತಮ್ಮ ಪರ್ಸನಲ್ ಮೊಬೈಲ್ ಸಂಖ್ಯೆಯನ್ನು ತಮ್ಮ ಅನುಮತಿಯಿಲ್ಲದೆ ಈ ಸಿನಿಮಾದಲ್ಲಿ ಬಳಸಲಾಗಿದೆ. ಅದು ಒಂದಲ್ಲ, ಎರಡು ಬಾರಿ ಎಂದು ದೂರಿನಲ್ಲಿಉಲ್ಲೇಖಿಸಿದ ಕಾರಣ, ಕೋರ್ಟ್ ಪೊಲೀಸರಿಗೆ ಎಫ್ಐಆರ್ ದಾಖಲಿಸುವಂತೆ ಆದೇಶ ಹೊರಡಿಸಿದೆ.
ಟೆಕ್ಕಿ ಅಕ್ಷಯ್ ಪ್ರಕಾಶ್ ಸಲ್ಲಿಸಿದ ಅರ್ಜಿಯ ಮೇರೆಗೆ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶಮ್ನಾಡ್ ಎಸ್. ಅವರ ಪೀಠವು, ಈ ನಿರ್ದೇಶನ ನೀಡಿದೆ. ಜಿತು ಅಶ್ರಫ್ ನಿರ್ದೇಶನದ ಈ ಚಿತ್ರವು ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿಯಲ್ಲಿ ರಿಲೀಸ್ ಆದಾಗಿನಿಂದಲೂ ತಮಗೆ ಲೋಕಲ್ನಿಂದ ಹಿಡಿದು ಅಂತಾರಾಷ್ಟ್ರೀಯ ಫೋನ್ ಕಾಲ್ಗಳು ಮತ್ತು ಮೆಸೇಜ್ಗಳು ನಿರಂತರವಾಗಿ ಬರುತ್ತಿವೆ. ಚಿತ್ರದ ಒಂದು ವೈದ್ಯರ ಪಾತ್ರವನ್ನು ತೋರಿಸುವಾಗ, ನನ್ನ ಅಸಲಿ ಮೊಬೈಲ್ ಸಂಖ್ಯೆಯನ್ನು ಮಹಿಳಾ ವೈದ್ಯೆಯ ನಂಬರ್ ಎಂದು ತೋರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಾಥಮಿಕ ಪೊಲೀಸ್ ಪರಿಶೀಲನೆಯ ಪ್ರಕಾರ, ಈ ಸಂಖ್ಯೆಯು ಚಿತ್ರದ ದೃಶ್ಯದಲ್ಲಿ ಎರಡು ಬಾರಿ ಕಾಣಿಸಿಕೊಂಡಿದೆ. ಈ ನಿರಂತರ ಕರೆಗಳು ಮತ್ತು ಮೆಸೇಜ್ಗಳಿಂದ ವಿಪರೀತ ಮಾನಸಿಕ ಯಾತನೆ ಮತ್ತು ಸಾಕಷ್ಟು ತೊಂದರೆಯಾಗಿದೆ. ಈ ಸಿಮ್ ಕಾರ್ಡ್ ನಮ್ಮ ತಾಯಿಯ ಹೆಸರಿನಲ್ಲಿದ್ದರೂ, ನಾನೇ ಅದನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ಭಾರತ ಮಾತ್ರವಲ್ಲದೇ, ಪಾಕಿಸ್ತಾನ, ಬಾಂಗ್ಲಾದಿಂದಲೂ ಕರೆಗಳು ಬಂದಿವೆ. ಇವರಲ್ಲಿ, ಅನೇಕರು ಪಾತ್ರದಲ್ಲಿರುವ ನಟಿ ಎಂದುಕೊಂಡೇ ನನಗೆ ಮಾಡಿದ್ದಾರೆ ಎಂದಿದ್ದಾರೆ.
ನಂಬರ್ ಬದಲಾಯಿಸೋಣ ಎಂದರೆ, ಅದು ನನ್ನ ಬ್ಯಾಂಕ್ ಅಕೌಂಟ್, ಆಧಾರ್, ಪ್ಯಾನ್ ಕಾರ್ಡ್ ಮತ್ತು ಇತರ ಅಗತ್ಯ ಸೇವೆಗಳೊಂದಿಗೆ ಜೋಡಣೆ ಆಗಿರುವುದರಿಂದ, ಅದನ್ನು ಬದಲಾಯಿಸುವುದು ಅಥವಾ ನಿಲ್ಲಿಸುವುದು ತುಂಬಾ ಕಷ್ಟಕರವಾಗಿದೆ. ಇದರಿಂದ, ನನಗೆ ವಿಪರೀತ ಮಾನಸಿಕ ಹಿಂಸೆ ಮತ್ತು ತೊಂದರೆಗಳು ಆಗಿವೆ ಎಂದು ಚಿತ್ರತಂಡ ಮಾಡಿದ ಎಡವಟ್ಟಿನ ವಿರುದ್ಧ ಸಿಡಿದೆದ್ದಿದ್ದಾರೆ.
ಪೊಲೀಸರು ನಡೆಸಿದ ಹಿಂದಿನ ಪ್ರಾಥಮಿಕ ತನಿಖಾ ವರದಿಯು ತಮ್ಮ ಅಹವಾಲುಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಅಕ್ಷಯ್ ಆಕ್ಷೇಪಿಸಿದ್ದರು. ಇದರ ಬೆನ್ನಲ್ಲೇ ಮ್ಯಾಜಿಸ್ಟ್ರೇಟ್ ಕೋರ್ಟ್, ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್‌ಗೆ (SHO), 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ'ಯ (BNSS) ಸೆಕ್ಷನ್ 175(3) ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನಿರ್ದೇಶಿಸಿದೆ.
ಈ ದೂರಿನಲ್ಲಿ ನಿರ್ಮಾಪಕ ಮಾರ್ಟಿನ್ ಪ್ರಕಾಟ್, ಸಹ-ನಿರ್ಮಾಪಕರಾದ ಸಿಬಿ ಚವಾರ ಹಾಗೂ ರಂಜಿತ್ ನಾಯರ್ ಮತ್ತು ಹೆಸರಾಂತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸೇರಿ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಗುರುತನ್ನು ಕದಿಯುವುದು ಮತ್ತು ಇನ್ನೊಬ್ಬರಂತೆ ನಟಿಸಿ ವಂಚಿಸುವುದಕ್ಕೆ ಸಂಬಂಧಿಸಿದ 'ಮಾಹಿತಿ ತಂತ್ರಜ್ಞಾನ ಕಾಯಿದೆ'ಯ (Information Technology Act) ಸೆಕ್ಷನ್ 66C ಮತ್ತು 66D ಅಡಿಯಲ್ಲಿಯೂ ಅಕ್ಷಯ್ ದೂರು ನೀಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).