ಇನ್​ಸ್ಟಾಗ್ರಾಂ ಪ್ರಭಾವಿಗಳ ಪಟ್ಟಿಯಲ್ಲಿ ಆಲಿಯಾ; ರಶ್ಮಿಕಾ ಮಂದಣ್ಣಗೆ 19ನೇ ಸ್ಥಾನ

Aliya
Published on

ಆಲಿಯಾ ಭಟ್, ಹಾಲಿವುಡ್ ಚಿತ್ರ ಮಾಡುತ್ತಿರುವುದು ಗೊತ್ತೇ ಇದೆ. ಬಾಲಿವುಡ್​ನಿಂದ ಹಾಲಿವುಡ್​ಗೆ ಆಲಿಯಾ ಇನ್ನೂ ಪೂರ್ಣಪ್ರಮಾಣದಲ್ಲಿ ಎಂಟ್ರಿ ಕೊಟ್ಟೇ ಇಲ್ಲ, ಆಗಲೇ ಆಕೆಯ ಖ್ಯಾತಿ ಉತ್ತುಂಗಕ್ಕೇರಿದೆ. ಇತ್ತೀಚೆಗೆ, ಜಾಗತಿಕ ಮಟ್ಟದಲ್ಲಿ ಇನ್​ಸ್ಟಾಗ್ರಾಂನಲ್ಲಿ ಪ್ರಭಾವಿಗಳ ಸಮೀಕ್ಷೆ ಆಗಿದೆ. ಈ ಸಮೀಕ್ಷೆಯಲ್ಲಿ ಆಲಿಯಾಗೆ ಆರನೇ ಸ್ಥಾನ ಸಿಕ್ಕಿದೆ. ಇನ್​ಸ್ಟಾಗ್ರಾಂನಲ್ಲಿ ಆಲಿಯಾಗೆ 64.1 ಮಿಲಿಯನ್ ಹಿಂಬಾಲಕರಿದ್ದಾರೆ. ಬರೀ ಅಭಿಮಾನಿಗಳಷ್ಟೇ ಅಲ್ಲ, ಜಗತ್ತಿನ ಜನಪ್ರಿಯ ಬ್ರಾಂಡ್​ಗಳು ಸಹ ಅವರನ್ನು ಹಿಂಬಾಲಿಸುತ್ತಿವೆ.

ಇತ್ತೀಚಿನ ದಿನಗಳಲ್ಲಿ ಮದುವೆ ವಿಷಯದಲ್ಲಿ ಆಲಿಯಾ ಸಾಕಷ್ಟು ಸುದ್ದಿಯಲ್ಲಿದ್ದು, ಹಲವು ಪೋಸ್ಟ್​ಗಳನ್ನು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಹಿಂಬಾಲಕರ ಸಂಖ್ಯೆಯೂ ಗಣನೀಯವಾಗಿ ಏರಿದೆ ಎಂದರೆ ತಪ್ಪಿಲ್ಲ. ಈ ನಿಟ್ಟಿನಲ್ಲಿ ಅವರು ಜಗತ್ತಿನ ಪ್ರಭಾವಿಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಅಮೇರಿಕಾದ ನಟಿ ಜೆಂಡಾಯ ಇದ್ದರೆ, ಎರಡನೇ ಸ್ಥಾನದಲ್ಲಿ ‘ಸ್ಪೈಡರ್ ಮ್ಯಾನ್’ ಖ್ಯಾತಿಯ ನಟ ಟಾಮ್ ಹಾಲಂಡ್ ಇದ್ದಾರೆ. ನಂತರದ ಸ್ಥಾನಗಳಲ್ಲಿ ಡಾನ್ ಜಾನ್ಸನ್, ಜೆ ಹೋಪ್, ವಿಲ್ ಸ್ಮಿತ್ ಇದ್ದಾರೆ. ಆರನೇ ಸ್ಥಾನಕ್ಕೆ ದಾಪುಗಾಲಿಡುವ ಮೂಲಕ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಾದ ಜೆನ್ನಿಫರ್ ಲೊಪೆಜ್, ಕ್ರಿಸ್ ಹೆಮ್ಸ್​ವರ್ಥ್, ರಾಬರ್ಟ್ ಡೌನಿ ಜ್ಯೂನಿಯನ್ ಮುಂತಾದವರನ್ನು ಆಲಿಯಾ ಹಿಂದಕ್ಕೆ ಹಾಕಿರುವುದು ವಿಶೇಷ.

ಈ ಪಟ್ಟಿಯಲ್ಲಿ ಆಲಿಯಾ ಅಲ್ಲದೆ, ಭಾರತದಿಂದ ಇನ್ನಷ್ಟು ಸೆಲೆಬ್ರಿಟಿಳಿದ್ದಾರೆ. ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ಶ್ರದ್ಧಾ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಈ ಪಟ್ಟಿಯಲ್ಲಿ 13, 14, 18 ಮತ್ತು 19ನೇ ಸ್ಥಾನದಲ್ಲಿದ್ದಾರೆ. ರಶ್ಮಿಕಾ ಮಂದಣ್ಣಗೆ ಇನ್​ಸ್ಟಾಗ್ರಾಂನಲ್ಲಿ 31 ಮಿಲಿಯನ್​ಗೂ ಹೆಚ್ಚು ಹಿಂಬಾಲಕರಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದಿಂದ ಸ್ಥಾನ ಪಡೆದ ಮೊದಲ ನಟಿ ಎಂದನಿಸಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net