More

    ಸಿನಿಮಾ ವಿಮರ್ಶೆ: ಮಗು ಹುಡುಕಾಟದಲ್ಲಿ ಸಿಗುವ ನಗುವಿನ ಕಥೆ

    ಚಿತ್ರ: ಗಾಳಿಪಟ 2
    ನಿರ್ದೇಶನ: ಯೋಗರಾಜ್​ ಭಟ್​
    ನಿರ್ಮಾಣ: ರಮೇಶ್​ ರೆಡ್ಡಿ
    ತಾರಾಗಣ: ಗಣೇಶ್​, ದಿಗಂತ್​, ಪವನ್​ ಕುಮಾರ್​, ಅನಂತ್​ ನಾಗ್​, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್​, ರಂಗಾಯಣ ರಘು, ಸುಧಾ ಬೆಳವಾಡಿ, ನಿಶ್ವಿಕಾ ನಾಯ್ಡು ಮುಂತಾದವರು
    ಸ್ಟಾರ್ಸ್​ – 3.5

    ನಾಯಕಿ: ನೀವ್​ ಯಾಕೆ ಲೈಫ್​ನ ಇಷ್ಟೊಂದು ತಮಾಷೆಯಾಗ್​ ತಗೋತೀರಾ?
    ನಾಯಕ (ನಗುತ್ತಾ) : ಜೀವನದಲ್ಲಿ ತಮಾಷೆಯಿಂದಾನೇ ಎಷ್ಟೋ ಸಮಸ್ಯೆಗಳು ಬಗೆಹರಿಯೋದು. ತಮಾಷೆ ಇಲ್ದಿರೋ ಕಡೆ ನಾನ್​ ಕಾಲ್​ ಕೂಡ ಇಡಲ್ಲ…

    ಹೀಗೆ ಹೇಳೋ ನಾಯಕ ಗಣಿ ಸಿನಿಮಾದಾದ್ಯಂತ ತಮಾಷೆಯಿಂದ ನಗಿಸುತ್ತಾ, ಒಮ್ಮೆ ಅಳಿಸಿಯೂ ಬಿಡುತ್ತಾರೆ. “ಗಾಳಿಪಟ 2′ ಚಿತ್ರ ಮೂವರು ಯುವಕರ ಕಥೆ. ಅವರ ಗೆಳೆತನ, ಪ್ರೀತಿ – ಪ್ರೇಮ – ಪ್ರಣಯ, ಅವರ ಹುಡುಗಾಟ, ಮೇಷ್ಟ್ರೊಬ್ಬರ ಹುಡುಕಾಟ … ಈ ಚಿತ್ರದ ಹೂರಣ ಎಂದರೆ ತಪ್ಪಿಲ್ಲ.

    ಗಣೇಶ್​, ದಿಗಂತ್​, ಭೂಷಣ್​ (ಪವನ್​ ಕುಮಾರ್​) ಮೂವರೂ ಕನ್ನಡದಲ್ಲಿ ಉನ್ನತ ವ್ಯಾಸಂಗಕ್ಕಾಗಿ ನೀರುಪೇಟೆ ಕಾಲೇಜಿಗೆ ಹೋಗುತ್ತಾರೆ. ಅಲ್ಲಿ ಕನ್ನಡ ಪ್ರಾಧ್ಯಾಪಕ ಕಿಶೋರ್​ (ಅನಂತ್​ ನಾಗ್​) ಅವರಿಗೆ ಆಸರೆ ನೀಡುತ್ತಾರೆ. ಗಣೇಶ್​ ಅದೇ ಊರಿನ ಹುಡುಗಿ ಶ್ವೇತಾಗೆ (ವೈಭವಿ ಶಾಂಡಿಲ್ಯ) ಮನಸೋತರೆ, ದಿಗಂತ್​ ಹಳೆಯ ಗರ್ಲ್​್ರೆಂಡ್​ ಅನುಪಮಾ (ಸಂಯುಕ್ತಾ ಮೆನನ್​) ಭೇಟಿಯೂ ಅಲ್ಲೇ ಆಗುತ್ತದೆ. ಮತ್ತೊಂದೆಡೆ ಭೂಷಣ್​ ಕಾಲೇಜಿನ ಲೆಕ್ಚರರ್​ ಶರ್ಮಿಳಾ ಹಿಂದೆ ಬೀಳುತ್ತಾರೆ. ಆದರೆ, ಎರಡು ವರ್ಷ ಓದು ಮುಗಿಯುವುದರ ಒಳಗೆ ಈ ಮೂವರ ಲವ್​ಸ್ಟೋರಿಯೂ ಮುರಿದುಬೀಳುತ್ತದೆ. ಮತ್ತೆ ತಮ್ಮ ಪಾಡಿಗೆ ಒಂದೊಂದು ದಾರಿಗೆ ಹೋಗುವ ಈ ಗೆಳೆಯರು ತಮ್ಮ ನೆಚ್ಚಿನ ಲೆಕ್ಚರರ್​ ಕಿಶೋರ್​ ಮಗನ ಹುಡುಕಾಟಕ್ಕಾಗಿ ಮತ್ತೆ ಒಂದಾಗುತ್ತಾರೆ. ಕಿಶೋರ್​ ಮಗ ಸಿಗುತ್ತಾನಾ? ಈ ಮೂವರ ಮುರಿದುಬಿದ್ದ ಪ್ರೀತಿ ಮತ್ತೆ ಒಂದಾಗುತ್ತಾ? ಸಿನಿಮಾ ನೋಡಿ…

    ಗಣೇಶ್​ ಎಂದಿನಂತೆ ನಗಿಸಿ, ಅಳಿಸಿ ಮತ್ತೆ ನಗಿಸುತ್ತಾರೆ. ದಿಗಂತ್​ ಲೀಲಾಜಾಲ. ಇಬ್ಬರು ಸ್ಪರ್ಧೆಗೆ ಬಿದ್ದಂತೆ ನಟಿಸಿದ್ದಾರೆ. ನಾಯಕ-ನಾಯಕಿಯ ಕೆಮಿಸ್ಟ್ರಿಗಿಂತ ಈ ಇಬ್ಬರು ನಾಯಕರ ಕೆಮಿಸ್ಟ್ರಿ ವರ್ಕೌಟ್​ ಆಗಿದೆ. ಅವರ ಜುಗಲ್​ಬಂದಿ, ಜಗಳ್​ಬಂದಿ ಕಥೆಯ ಹೈಲೈಟ್​ಗಳಲ್ಲೊಂದು. ಪವನ್​ ಕುಮಾರ್​ ಅವರನ್ನೇ ಭಟ್ಟರು ಆಯ್ಕೆ ಮಾಡಿಕೊಳ್ಳಲು ಕಾರಣ ಸಿನಿಮಾ ನೋಡಿದವರಿಗೆ ಗೊತ್ತಾಗುತ್ತೆ. ಮೂವರು ನಾಯಕಿಯರೂ ಹಾಗೂ ನಿಶ್ವಿಕಾ ನಾಯ್ಡು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೆ, ಕನ್ನಡ ಪ್ರಾಧ್ಯಾಪಕ ಕಿಶೋರ್​ ಪಾತ್ರದಲ್ಲಿ ಅನಂತ್​ ನಾಗ್​ ಮತ್ತವರ ಕನ್ನಡದ ಕುರಿತ ಸಂಭಾಷಣೆ ಮನಸ್ಸಿಗೆ ನಾಟುತ್ತದೆ. ಗಣಿ ತಂದೆ, ಮಾಜಿ ಶಾಸಕನ ಪಾತ್ರದಲ್ಲಿ ರಂಗಾಯಣ ರು, ನಗಿಸುವುದರಲ್ಲಿ ಎಲ್ಲರಿಗಿಂತ ಒಂದು ಕೈ ಮೇಲೆ.

    2008ರ ಗೆಳೆಯರ “ಗಾಳಿಪಟ’ ಹೊಸ ಅನುಭವ ನೀಡಿತ್ತು. ಈಗ 14 ವರ್ಷಗಳ ಬಳಿಕ “ಗಾಳಿಪಟ 2′ ಬರುತ್ತಿದೆ ಅಂದಾಗ ಅದೇ ನಿರೀಕ್ಷೆ ಪ್ರೇಕ್ಷಕರಲ್ಲಿ ಸಾಮಾನ್ಯ. ಆದರೆ, ಈಗಿನ ಯುವಪೀಳಿಗೆ ಫಾಸ್ಟ್​ ಆಗಿರುವ ಕಾರಣ ನಿರ್ದೇಶಕ ಯೋಗರಾಜ್​ ಭಟ್​ರು ಕಥೆಗೂ ವೇಗ ನೀಡಿದ್ದಾರೆ. ಆ ವೇಗದಲ್ಲಿ ಮೂರೂ ಜೋಡಿಗಳ ಎರಡು ವರ್ಷಗಳ ಓದು, ಲವ್​, ಬ್ರೇಕಪ್​, ಜಗಳ, ಎಲ್ಲವೂ ಮುಗಿದುಹೋಗುತ್ತದೆ. ಎಷ್ಟೊಂದು ಫಾಸ್ಟ್​ ಆಗಿ ಮುಗೀತು ಎನ್ನುತ್ತಿರುವಾಗಲೇ ದ್ವೀತಿಯಾರ್ಧದಲ್ಲಿ ಕಥೆಯನ್ನು ಮತ್ತಷ್ಟು ಕಳೆಗಟ್ಟುವಂತೆ ಮಾಡಿದ್ದಾರೆ ನಿರ್ದೇಶಕರು. “ದೇವ್ಲೆ ದೇವ್ಲೆ’, “ಎಗ್ಸಾಂ ಸಾಂಗ್​’, “ನೀನು ಬಗೆಹರಿಯದ’, “ನಾನಾಡದ ಮಾತೆಲ್ಲವೂ’ ಹಾಡುಗಳು ಇಷ್ಟವಾದರೂ, ಮನಸ್ಸಿಗೆ ಹೆಚ್ಚು ಹತ್ತಿರವಾಗುವುದು “ಪ್ರಾಯಶಃ’ ಹಾಡು. “ಗಾಳಿಪಟ’ದ ಎತ್ತರಕ್ಕೆ ಸೀಕ್ವಲ್​ನಲ್ಲೂ ಹಾಡುಗಳನ್ನು ಹಾರಿಸುವ ಪ್ರಯತ್ನ ಮಾಡಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ. ಮಳೆ, ಚಳಿ, ಹಸಿರು, ಹಿಮ, ಬೆಟ್ಟ, ಗುಡ್ಡ… ಹೀಗೆ ದೃಶ್ಯವೈಭವವನ್ನು ಕಣ್ಣಿಗೆ ಹಬ್ಬದಂತೆ ಕ್ಯಾಮರಾದಲ್ಲಿ ಹಿಡಿದುಕೊಟ್ಟಿದ್ದಾರೆ ಛಾಯಾಗ್ರಾಹಕ ಸಂಪತ್​ ರೈ ಪಾತಾಜೆ. ಪ್ರಾಯಶಃ “ಗಾಳಿಪಟ 2′ ಅಪರೂಪಕ್ಕೆ ಒಂದೊಳ್ಳೆ ಚಿತ್ರ ನೋಡಿದ ಫೀಲ್​ ನೀಡೋದರಲ್ಲಿ ಸಂದೇಹವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts