More

    ಚನ್ನರಾಯಪಟ್ಟಣದಲ್ಲಿ ಕ್ರಿಸ್‌ಮಸ್ ಸಂಭ್ರಮ

    ಚನ್ನರಾಯಪಟ್ಟಣ: ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಏಸುಕ್ರಿಸ್ತನ ಜನ್ಮದಿನದ ನಿಮಿತ್ತವಾಗಿ ಆಚರಿಸುವ ಕ್ರಿಸ್‌ಮಸ್ ಹಬ್ಬವನ್ನು ಸೋಮವಾರದಂದು ಪಟ್ಟಣದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

    ತಾಲೂಕಿನ ಹಲವು ಚರ್ಚಗಳಲ್ಲಿ ಕ್ಯಾಂಡೆಲ್‌ಗಳ ವಿಹಂಗಮ ನೋಟ ಕಣ್ಮನ ಸೆಳೆಯಿತು. ಪಟ್ಟಣದ ಮೈಸೂರು ರಸ್ತೆಯ ಯೇಸುವಿನ ದಿವ್ಯ ದೇವಾಲಯ ಹಾಗೂ ತಾಲೂಕಿನ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕೇಕ್ ವಿತರಿಸುವ ಜತೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಮಾಜದ ಬಾಂಧವರು ಸಂಭ್ರಮಪಟ್ಟರು. ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

    ಕ್ರಿಸ್‌ಮಸ್ ಟ್ರೀ, ಬಣ್ಣ ಬಣ್ಣದ ಸ್ಟಾರ್ಸ್‌ಗಳು, ಕೃತಕ ಗೋದಲಿಗಳು, ಬಗೆಬಗೆಯ ಗ್ರೀಟಿಂಗ್ ಕಾರ್ಡ್‌ಗಳು, ವಿದ್ಯುತ್ ಅಲಂಕಾರಿಕ ಸಾಮಗ್ರಿಗಳು ಹಾಗೂ ಬಲೂನ್‌ಗಳು ಪಟ್ಟಣದ ಕ್ರೈಸ್ತ ಬಾಂಧವರ ಮನೆಗಳಲ್ಲಿ ರಾರಾಜಿಸುತ್ತಿದ್ದವು. ಮನೆಮನೆಗಳ ಎದುರು ಮಿನುಗುವ ಹಣತೆಗಳು, ಮೇಣದ ಬತ್ತಿಗಳು, ರಾರಾಜಿಸುವ ಗೂಡುದೀಪಗಳು, ನಕ್ಷತ್ರಗಳು, ಕ್ರಿಸ್‌ಮಸ್ ವೃಕ್ಷದಲ್ಲಿ ಝಗಮಗಿಸುವ ಬಣ್ಣ ಬಣ್ಣದ ದ್ವೀಪಗಳು ಆಕರ್ಷಣೀಯವಾಗಿದ್ದವು. ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು. ಭಾನುವಾರ ಮಧ್ಯರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು.

    ಫಾದರ್ ಜರೋಮ್ ಮಾಚಾಡೋ ಅವರು ಏಸು ಕ್ರಿಸ್ತನ ಮಹಿಮೆ ಹಾಗೂ ಅವರ ಸಂದೇಶಗಳನ್ನು ಜನರಿಗೆ ತಿಳಿಸಿದರು. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣು ಎಂಬ ಶಾಂತಿ ಮಂತ್ರವನ್ನು ಪುನರ್ ಮನನ ಮಾಡಲಾಯಿತು. ಯೇಸುವಿನ ಆಶಯದಂತೆ ಎಲ್ಲರೂ ಪರಸ್ಪರ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬೇಕು. ಎಲ್ಲ ಧರ್ಮ, ಜಾತಿ, ಜನಾಂಗಗಳ ವಿಶ್ವಶಾಂತಿ ಹಾಗೂ ಬರಗಾಲ ನೀಗಿ ವರುಣನ ಸಿಂಚನವಾಗಿ ರೈತಾಪಿ ವರ್ಗ ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು. ನೂರಾರು ಸಂಖ್ಯೆಯಲ್ಲಿ ಜನರು ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಾನವೃಂದದವರು ವಿಶೇಷ ಸಂಗೀತ ಪ್ರಸ್ತುತಪಡಿಸಿದರು. ಸಮುದಾಯದ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts