More

    ಏ.22ಕ್ಕೆ ವೇದಾವತಿಗೆ ವಿವಿ ಸಾಗರ ನೀರು

    ಚಳ್ಳಕೆರೆ: ವಿ.ವಿ.ಸಾಗರದಿಂದ ವೇದಾವತಿ ನದಿ ಪಾತ್ರಕ್ಕೆ ಏ.22ರಂದು 0.25 ಟಿಎಂಸಿ ಅಡಿ ನೀರು ಹರಿಸಲು ಕುಡಿವ ನೀರಿನ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

    ನಗರದ ಶಾಸಕರ ಭವನದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 2015 ರಿಂದ ಸರ್ಕಾರದ ಹಂತದಲ್ಲಿ ನಡೆಸಿದ ಪ್ರಯತ್ನಕ್ಕೆ ಈಗ ಫಲ ಸಿಕ್ಕಿರುವುದು ಸಂತಸ ತಂದಿದೆ ಎಂದರು.

    ನದಿ ಭಾಗದ ಎರಡು ಕಡೆಯ 50 ಗ್ರಾಮಗಳಿಗೆ ಕುಡಿವ ನೀರೊದಗಿಸಲು ಹಾಗೂ ಅಂತರ್ಜಲ ಅಭಿವೃದ್ಧಿ ದೃಷ್ಟಿಯಿಂದ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ವಿ.ವಿ.ಸಾಗರದಿಂದ ವೇದಾವತಿ ನದಿ ಭಾಗದ ಉದ್ದ 70 ಕಿ.ಮೀ. ಇದೆ. ಇದರಲ್ಲಿ ಹಿರಿಯೂರಿನ ಗಡಿ ಭಾಗಕ್ಕೆ 30 ಕಿ.ಮೀ. ಒಳಪಡುವುದರಿಂದ ಇಲ್ಲಿ ಹರಿಯುವ ನೀರನ್ನು ಲೆಕ್ಕ ಮಾಡಿಕೊಳ್ಳದೆ, ತಾಲೂಕಿನ ಗಡಿ ಶಿಡ್ಲಯ್ಯನ ಕೋಟೆ ತಲುಪುವ ಸ್ಥಳದಿಂದ ನೀರಿನ ಪ್ರಮಾಣವನ್ನು 0.25 ಟಿಎಂಸಿ ಅಡಿ ನಿಗದಿಯಂತೆ ಲೆಕ್ಕ ಹಾಕಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಈಗಾಗಲೇ ಬೊಂಬೇರಹಳ್ಳಿ, ಚೌಳೂರು, ಪರಶುರಾಂಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ವಿವಿ ಸಾಗರದಿಂದ ನೀರು ಹರಿಯುವುದರಿಂದ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಪೂರಕವಾಗಿ ಕೊಳವೆಬಾವಿಗಳ ಜಲ ಮರುಪೂರಣಕ್ಕೆ ಅನುಕೂಲವಾಗಲಿದೆ ಎಂದರು.

    ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ, ಕೃಷಿ ಇಲಾಖೆ ಅಧಿಕಾರಿ ಕೆ.ಮೋಹನ್ ಕುಮಾರ್, ಪೌರಾಯುಕ್ತ ಪಿ.ಪಾಲಯ್ಯ ಇದ್ದರು.

    ಕರೊನಾದಿಂದ ಬೆಳೆ ನಷ್ಟ: ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 763 ಹೆಕ್ಟೇರ್ ತೋಟಗಾರಿಕೆ ಬೆಳೆಯಾದ ಪಪ್ಪಾಯಿ, ಕಲ್ಲಂಗಡಿ, ಕರಬೂಜ ಮತ್ತು ಹೂವಿನ ಬೆಳೆ ಹಾಳಾಗಿ 18 ಕೋಟಿ ರೂ. ನಷ್ಟವಾಗಿದೆ. ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ 5.5 ಹೆಕ್ಟೇರ್ ಭತ್ತ, ಮೆಕ್ಕೆಜೋಳ ಹಾನಿಯಾಗಿ 5 ಲಕ್ಷ ರೂ. ನಷ್ಟವಾಗಿದೆ. ಈ ನಷ್ಟಭರಿಸಲು ಕೂಡಲೇ ರೈತರ ಜಮೀನುಗಳಿಗೆ ಭೇಟಿನೀಡಿ ಜಿಪಿಎಸ್ ಮೂಲಕ ಬೆಳೆ ನಷ್ಟದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ರಘುಮೂರ್ತಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts