More

    ಕರೊನಾ ಸೋಂಕಿತ ಹಳ್ಳಿಗೆ ಜಲ ಸಂಕಟ!

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಕರೊನಾ ಪ್ರಕರಣದಿಂದ ಸೀಲ್‌ಡೌನ್ ಆಗಿರುವ ತಾಲೂಕಿನ ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ.

    ಗ್ರಾಮಸ್ಥರು ಕೊಡಗಳ ಹಿಡಿದು ತೋಟ, ಕಪಿಲೆ, ಜಮೀನುಗಳು ತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಪಂಚಾಯಿತಿಯಿಂದ ಎರಡು ದಿನ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ನಂತರ ತಳಕು ಗ್ರಾಮದಿಂದ ನೀರು ಪೂರೈಕೆಗೆ ಮುಂದಾದಾಗ ಸೋಂಕಿತ ಗ್ರಾಮಕ್ಕೆ ನೀರು ಕೊಡುವುದಿಲ್ಲ ಎಂದು ನಿರಾಕರಿಸಿದ್ದಾರೆ ಎನ್ನಲಾಗಿದೆ.

    ಬಳಿಕ ತಾಲೂಕು ಆಡಳಿತ ಗ್ರಾಮದ ಹೊರವಲಯದಲ್ಲಿ ಹೊಸದಾಗಿ ಸಾವಿರ ಅಡಿಯವರೆಗೆ ಕೊಳವೆಬಾವಿ ಕೊರೆಯಿಸಿದರೂ ನೀರು ಲಭ್ಯವಾಗಿಲ್ಲ. ಆಗ ನೀರು ಬೀಳುವ ತನಕ ಬೋರ್‌ವೆಲ್ ಕೊರೆಯಿಸಬೇಕು ಎಂದು ಪಟ್ಟು ಹಿಡಿದ ಬೋರ್‌ವೆಲ್ ಕೊರೆಯುವ ಲಾರಿ ತಡೆ ಹಿಡಿದಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಇಒ ಶ್ರೀಧರ್ ಬಾರೀಕರ್ ಅವರು ವಿಶೇಷ ಅಂತರ್ಜಲ ತಜ್ಞರನ್ನು ಕರೆಸಿ ಎರಡು ಕಡೆ ಕೊಳವೆ ಬಾವಿ ಕೊರೆಯಿಸುವ ಭರವಸೆ ನೀಡಿದ್ದರಿಂದ ಜನ ಲಾರಿ ಬಿಟ್ಟಿದ್ದಾರೆ.

    ಕಾರ್ಮಿಕರ ಅಳಲು: ಲಾಕ್‌ಡೌನ್‌ನಿಂದ ದುಡಿಯುವ ಕೆಲಸ ಬಿಟ್ಟು ಬೆಂಗಳೂರಿನಿಂದ ಗ್ರಾಮಕ್ಕೆ ಬಂದು ಇಲ್ಲಿ ಸೀಲ್‌ಡೌನ್ ಆಗಿದ್ದೇವೆ. ಊರಲ್ಲಿ ಕೆಲಸವಿಲ್ಲ. ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಬೆಂಗಳೂರಿಗೆ ಹೋಗುವ ಕಾರ್ಮಿಕರಿಗೆ ಅವಕಾಶ ಮಾಡುವುದಾಗಿ ಹೇಳಿದ್ದರು. ಆದರೆ, ತಾಲೂಕು ಮಟ್ಟದ ಅಧಿಕಾರಿಗಳು ಸೋಂಕಿತ ಗ್ರಾಮದವರನ್ನು ಹೊರಗೆ ಕಳುಹಿಸುವುದಿಲ್ಲ. ಒಂದು ವೇಳೆ ಹೋದರೂ, ಬೆಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ ಎಂಬುದು ಕಾರ್ಮಿಕರ ಅಳಲು.

    ತಳಕು ಗ್ರಾಪಂ ಅಧ್ಯಕ್ಷ ಎನ್.ಎಚ್.ರಾಜಣ್ಣ ಹೇಳಿಕೆ: ಸೀಲ್‌ಡೌನ್ ಮಾಡಿರುವ ಗ್ರಾಮಗಳ ಮೂಲ ಸೌಕರ್ಯಗಳಿಗೆ ಅಧಿಕಾರಿಗಳ ಸ್ಪಂದನೆ ಸಿಗುತ್ತಿಲ್ಲ. ಗ್ರಾಮಸ್ಥರ ನಿರ್ಲಕ್ಷ್ಯದಿಂದಲೇ ಸೋಂಕಿತ ಪ್ರಕರಣಕ್ಕೆ ದಾರಿಯಾಗಿದೆ ಎನ್ನುತ್ತಿದ್ದಾರೆ. ಕೊಳವೆಬಾವಿ ಕೊರೆಯಿಸುವ ಕುರಿತು ಭರವಸೆ ನೀಡಿದ್ದ ಇಒ ಅವರು ಈವರೆಗೆ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ.

    ಜಿಪಂ ಸದಸ್ಯ ಡಾ.ಯೋಗೇಶ್‌ಬಾಬು ಹೇಳಿಕೆ: ಸೀಲ್‌ಡೌನ್ ಗ್ರಾಮಗಳ ಜನರ ಸಮಸ್ಯೆ ಪರಿಹರಿಸಲು ಮುಂದಾದಾಗ ನಿಯಮ ಮೀರಿ ಗ್ರಾಮದಲ್ಲಿ ನಡೆದುಕೊಳ್ಳುವಂತಿಲ್ಲ. ಸಹಕಾರ ಮಾಡುವುದಾದರೆ ತಾಲೂಕು ಆಡಳಿತಕ್ಕೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ಎಫ್‌ಐಆರ್ ದಾಖಲಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೀಲ್‌ಡೌನ್ ಮಾಡಿರುವ ಎರಡು ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸದಿದ್ದರೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.

    ಚಳ್ಳಕೆರೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶೋಭಾ ಹೇಳಿಕೆ: ನೂರು ಅಡಿ ಕೊಳವೆಬಾವಿ ಕೊರೆಸಿದರೂ ನೀರು ಲಭ್ಯವಾಗಿಲ್ಲ. ಮತ್ತೆ ಅಂತರ್ಜಲ ತಜ್ಞರಿಗೆ ವರದಿ ಸಲ್ಲಿಸಿ ಅವಕಾಶ ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶವಾಗುತ್ತದೆ. ಜನರ ಅನುಕೂಲಕ್ಕೆ ಟ್ಯಾಂಕರ್ ವ್ಯವಸ್ಥೆಗೆ ಟೆಂಡರ್ ಮಾಡಿಕೊಳ್ಳಲಾಗಿದೆ. ಇನ್ನೆರಡು ದಿನದಲ್ಲಿ ಬೋರ್‌ವೆಲ್ ಕೊರೆಸಲು ಕ್ರಮ ಕೈಗೊಳ್ಳಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts