More

    ವೇದಾವತಿ ನದಿ ಪಾತ್ರದಲ್ಲಿ ಜಲ ಸಮರ

    ಚಳ್ಳಕೆರೆ: ತಾಲೂಕಿನ ವೇದಾವತಿ ನದಿಯಿಂದ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ವೇದಾವತಿ ನದಿ ಸಂರಕ್ಷಣಾ ವೇದಿಕೆಯಿಂದ ಪರಶುರಾಮಪುರದಿಂದ ಜಿಲ್ಲಾ ಕಚೇರಿ ವರೆಗೆ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಚದುರಂಗದ ಆಟಕ್ಕೆ ಕಾರಣವಾಗಿದೆ.

    ನದಿ ಭಾಗದ ಗ್ರಾಮಗಳಲ್ಲಿ ಕೇವಲ ಬಿಜೆಪಿ ಕಾರ್ಯಕರ್ತರನ್ನು ಸಂಘಟನೆ ಮಾಡಿಕೊಂಡು ಹೋರಾಟಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

    ಮೂರು ವರ್ಷಗಳಿಂದ ರೈತರಿಗೆ ಸಿಗಬೇಕಾಗಿರುವ ಬೆಳೆ ಪರಿಹಾರ ಮತ್ತು ಬೆಳೆವಿಮೆ ಸಮರ್ಪಕವಾಗಿ ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತಪರ ಹೋರಾಟಕ್ಕೆ ನಿಲ್ಲದ ಕೆಲವರು, ರೈತರ ಅನುಕೂಲಕ್ಕಾಗಿ ವೇದಾವತಿ ನದಿಗೆ ನೀರು ಹರಿಸಬೇಕು ಎಂದು ರಾಜಕೀಯ ಹೋರಾಟ ಮಾಡುತ್ತಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.

    ಬರಪೀಡಿತ ತಾಲೂಕಿನಲ್ಲಿ ಅಕ್ಷಯ ಪಾತ್ರೆಯಂತಿರುವ ವೇದಾವತಿ ನದಿ ಭಾಗದಲ್ಲಿ ಮಳೆ ನೀರನ್ನು ನಿಲ್ಲಿಸಿ, ಇಂಗಿಸುವ ಸಲುವಾಗಿ ಮೂರು ಭಾಗದಲ್ಲಿ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡುವಲ್ಲಿ ಶಾಸಕ ಟಿ.ರಘುಮೂರ್ತಿ ಸಫಲರಾಗಿದ್ದಾರೆ.

    ನದಿಗೆ ಬ್ಯಾರೆಲ್‌ಗಳನ್ನು ಕಟ್ಟಿ ಆಂಧ್ರ ಭಾಗಕ್ಕೆ ಹರಿದು ಬರುವ ನೀರನ್ನು ತಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಂಧ್ರ ಸರ್ಕಾರ ಹಸಿರು ನ್ಯಾಯಾಧೀಕರಣ ಪೀಠದಲ್ಲಿ ಹೂಡಿದ್ದ ದಾವೆಯನ್ನು ಶಾಸಕರು ಬಗೆಹರಿಸಿಕೊಂಡು ಬ್ಯಾರೆಲ್ ನಿರ್ಮಾಣ ಮಾಡಿದ್ದಾರೆ. ಜಿಲ್ಲೆಗೆ ಹರಿದು ಬರಲಿರುವ ಭದ್ರಾ ಮೇಲ್ದಂಡೆ ನೀರು ವಿವಿ ಸಾಗರದಿಂದ ವೇದಾವತಿ ನದಿಭಾಗಕ್ಕೆ 0.25 ಟಿಎಂಸಿ ಅಡಿ ನೀರು ಹರಿಸಲು ಶಾಸಕರು ಸರ್ಕಾರದಿಂದ ಈಗಾಗಲೇ ಸಮ್ಮತಿ ಪಡೆದಿದ್ದಾರೆ. ಈ ವಿಷಯ ತಿಳಿದು ನಾಟಕೀಯವಾಗಿ ಹೋರಾಟಕ್ಕೆ ಇಳಿದಿದ್ದಾರೆ ಎಂಬುದು ಹಲವರ ಆರೋಪ.

    ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹೇಳಿಕೆ: ಈಗಾಗಲೇ ಹಿರಿಯೂರಿನ ಅಚ್ಚುಕಟ್ಟು ಪ್ರದೇಶಕ್ಕೆ ವಿವಿ ಸಾಗರದಿಂದ ನೀರು ಹರಿಸಲಾಗುತ್ತಿದೆ. ಅದರಂತೆ ವೇದಾವತಿ ನದಿ ಭಾಗಕ್ಕೆ ಕುಡಿಯುವ ನೀರಿಗಾಗಿ ನೀರು ಬಿಡಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಹೋಬಳಿ ಭಾಗದ 53 ಹಳ್ಳಿಗಳಿಂದ ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

    ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿಕೆ: ವೇದಾವತಿ ನದಿಗೆ ಕುಡಿಯುವ ನೀರು ಬಿಡಬೇಕೆಂದು ಹಮ್ಮಿಕೊಂಡಿರುವ ಹೋರಾಟದಲ್ಲಿ ಯಾರೂ ನಿಜವಾದ ಹೋರಾಟಗಾರರಲಿಲ್ಲ. ನದಿಯಲ್ಲಿ ನಿರಂತರವಾಗಿ ಮರಳು ಧಂದೆ ಮಾಡುವಾಗ ಪ್ರತಿಭಟನೆ ಮಾಡಲು ಮುಂದಾಗದವರು, ಈಗಾಗಲೇ ಶಾಸಕರು 0.25 ಟಿಎಂಸಿ ಅಡಿ ನೀರು ಹರಿಸಲು ಮಾಡಿರುವ ಪ್ರಯತ್ನಕ್ಕೆ ವಿರೋಧವಾಗಿ ಹಮ್ಮಿಕೊಂಡಿರುವ ಪ್ರತಿಭಟನೆಯಾಗಿದೆ. ಇದಕ್ಕೆ ನಮ್ಮ ರೈತ ಸಂಘದ ಬೆಂಬಲ ಇಲ್ಲ.

    ರೈತಸಂಘ ರಾಜ್ಯ ಸಮಿತಿ ಸದಸ್ಯ ರೆಡ್ಡಿಹಳ್ಳಿ ವೀರಣ್ಣ ಹೇಳಿಕೆ: ಕುಡಿಯುವ ನೀರಿಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ತಾಲೂಕಿನಲ್ಲಿ ನಿರಂತರ ಬರಗಾಲದ ಪರಿಸ್ಥಿತಿ ಇದೆ. ವೇದಾವತಿ ನದಿಗೆ ನೀರು ಹರಿಯುವುದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts