More

    ಅರಳಿ ಹೂವಾದವು ಚಿತ್ರದುರ್ಗ ಕೋಟೆ ಕಲ್ಲುಗಳು

    ಚಿತ್ರದುರ್ಗ: ಅಲ್ಲಿ ಕಲರ್‌ಫುಲ್ ಹಕ್ಕಿಗಳ ಕಲರವ, ಪ್ರೇಮ ಪಕ್ಷಿಗಳ ಪ್ರಣಯ ಗೀತೆ. ಅಲ್ಲಲ್ಲಿ ಪಡ್ಡೆ ಹುಡುಗರ ಪಡೆ, ಅವನು ಗುರಾಯಿಸ್ತಾ ಇದಾನೆ ನೋಡೇ ಅಂತ ಕಣ್ಣಲ್ಲೇ ಮಾತನಾಡುತ್ತಿದ್ದ ಬೆಡಗಿಯರು… ಇಂತಹ ದೃಶ್ಯಕಾವ್ಯ ಕಂಡು ಪ್ರತಿಯೊಂದು ಕಲ್ಲುಗಳು ಹೂವಾಗಿ ಅರಳಿದ ಕ್ಷಣ ಅದು.

    ಇಂತಹ ಅಮೋಘ ದೃಶ್ಯಕಾವ್ಯಕ್ಕೆ ಸಾಕ್ಷಿಯಾಗಿದ್ದು ಚಿತ್ರದುರ್ಗದ ಕಲ್ಲಿನ ಕೋಟೆ. ಬರೀ ಕಲ್ಲುಗಳೇ ಕಾಣುತ್ತಿದ್ದ ಕೋಟೆಯಲ್ಲಿ ಇಂದು ಕಲ್ಲುಗಳು ಮಾಯವಾಗಿ ಹೂವುಗಳು ಕಾಣುತ್ತಿದ್ದವು. 2019ಕ್ಕೆ ವಿದಾಯ ಹೇಳಿ 2020 ಅನ್ನು ಸ್ವಾಗತ ಮಾಡಿಕೊಳ್ಳಲು ಸಾವಿರಾರು ಮನಸುಗಳು ಕೋಟೆಯಲ್ಲಿ ಸಮ್ಮಿಲನಗೊಂಡಿದ್ದವು.

    ಕಾಲೇಜು ಯುವಕ ಯುವತಿಯರು ಕ್ಲಾಸ್‌ಗೆ ಚಕ್ಕರ್ ಹೊಡೆದು ಗುಂಪುಗುಂಪಾಗಿ ಬಂದು ಕೇಕ್ ಕತ್ತರಿಸಿ ಸಂಭ್ರಮಿಸಿದರೆ, ಪ್ರೇಮಿಗಳು ಗಿಫ್ಟ್ ವಿನಿಮಯದ ಜತೆ ಪ್ರೇಮ ನಿವೇದನೆ ಮಾಡಿಕೊಂಡರು. ಕುಟುಂಬ ಸಮೇತ ಬಂದವರು ಮಕ್ಕಳ ಜತೆ ಆಟವಾಡಿಕೊಂಡು, ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡಿದರು.

    ಹೊಸ ವರ್ಷದ ಪ್ರಯುಕ್ತ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಕಲ್ಲಿನ ಕೋಟೆ, ಚಂದ್ರವಳ್ಳಿ, ಮುರುಘಾಮಠ, ಆಡು ಮಲ್ಲೇಶ್ವರ, ಹಿರಿಯೂರು ಬಳಿಯ ವಾಣಿವಿಲಾಸ ಸಾಗರಕ್ಕೆ ಸ್ಥಳೀಯರೂ ಸೇರಿದಂತೆ ರಾಜ್ಯ ವಿವಿಧ ಭಾಗಗಳಿಂದ ತಂಡೋಪ ತಂಡವಾಗಿ ಪ್ರವಾಸಿಗರು ಆಗಮಿಸಿ ಹರ್ಷದ ಕಡಲಲ್ಲಿ ತೇಲಿದರು.

    ಕೋಟೆಗೆ ದಾಖಲೆ ಪ್ರವಾಸಿಗರು: ಪ್ರತಿ ವರ್ಷದಂತೆ ಈ ವರ್ಷವೂ ಕೋಟೆಗೆ ದಾಖಲೆ ಸಂಖ್ಯೆಯ ಪ್ರವಾಸಿಗರು ಲಗ್ಗೆಯಿಟ್ಟಿದ್ದರು. ಬೆಳಗ್ಗೆ 7 ಗಂಟೆಯಿಂದಲೇ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸಿದರು. ಹೆಚ್ಚಿನ ಪ್ರವಾಸಿಗರನ್ನು ನಿರೀಕ್ಷಿಸಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳು ಮುಂಗಡವಾಗಿ 4 ಸಾವಿರ ಟಿಕೆಟ್ ಪ್ರಿಂಟ್ ಮಾಡಿಕೊಂಡಿದ್ದರು. ಆದರೆ, ಆ ಟಿಕೆಟ್‌ಗಳು ಮಧ್ಯಾಹ್ನದ ವೇಳೆಗೆ ಖಾಲಿಯಾಗಿ ಅಧಿಕಾರಿಗಳು ಪೇಚಿಗೆ ಸಿಲುಕಿದರು. ಪುನಃ ಟಿಕೆಟ್ ಪ್ರಿಂಟ್ ಮಾಡಿಕೊಡಲು ತಡವಾಗಿದ್ದರಿಂದ ಟಿಕೆಟ್ ಕೌಂಟರ್ ಬಳಿ ವಾಗ್ವಾದ, ನೂಕುನುಗ್ಗಲು ಉಂಟಾಗಿತ್ತು. ಸಂಜೆ 6 ಗಂಟೆ ವೇಳೆಗೆ ಅಂದಾಜು 0000 ಪ್ರವಾಸಿಗರು ಕೋಟೆ ವೀಕ್ಷಣೆ ಮಾಡಿದರು.

    ಪ್ರವಾಸಿಗರ ಹಾಟ್‌ಸ್ಪಾಟ್: ಪ್ರವಾಸಿಗರಿಗೆ ಏಳು ಸುತ್ತಿನ ಕೋಟೆ ಜತೆ ಆಡುಮಲ್ಲೇಶ್ವರ, ಚಂದ್ರವಳ್ಳಿ, ಮುರುಘಾಮಠ, ಹಿರಿಯೂರಿನ ವಾಣಿವಿಲಾಸ ಸಾಗರ ಫೆವರೇಟ್ ಹಾಟ್‌ಸ್ಪಾಟ್ ಆಗಿತ್ತು. ಕೋಟೆ ನೋಡಿದ ಪ್ರವಾಸಿಗರು ಪ್ರಕೃತಿ ಸವಿಯಲು ಸಾಲುಗಟ್ಟಿ ನಿಂತಿದ್ದರು.

    ಟ್ರಾಫಿಕ್ ಜಾಮ್: ಕೋಟೆ ಮುಂಭಾಗದಲ್ಲಿ ಮಾರುದ್ದ ಟ್ರಾಫಿಕ್ ಜಾಮ್ ಆಗಿತ್ತು. ಟಿಕೆಟ್ ಕೊಳ್ಳಲು 200 ಮೀಟರ್‌ನಷ್ಟು ಸರತಿ ಸಾಲು ನಿಂತಿತ್ತು. ಕೋಟೆ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಇರೋದ್ರಿಂದ ಪ್ರತಿಯೊಬ್ಬರು ಟಿಕೆಟ್ ಪಡೆದೇ ಹೋಗಬೇಕಿತ್ತು. ಟಿಕೆಟ್ ವಿತರಣೆಗೆ ಕೇವಲ ಒಂದೇ ಕೌಂಟರ್ ಮಾಡಿದ್ದಕ್ಕೆ ಕೋಟೆ ಮುಂಭಾಗ ನೂಕುನುಗ್ಗಲು, ಟ್ರಾಫಿಕ್ ಜಾಮ್ ಆಗಿತ್ತು. ಕೋಟೆ ಒಳಗಿನ ಓಬವ್ವನ ಕಿಂಡಿಯಲ್ಲೂ ಫುಲ್ ಟ್ರಾಫಿಕ್. ನಾ ಮುಂದೆ ತಾ ಮುಂದೆ ಎಂದು ಕಿಂಡಿಯಲ್ಲಿ ನುಗ್ಗಲು ಯತ್ನಿಸುತ್ತಿದ್ದವರ ಸಂಖ್ಯೆಯೇ ಜಾಸ್ತಿಯಾಗಿತ್ತು.

    ಎಲ್ಲೆಲ್ಲಿಂದ ಬಂದಿದ್ದಾರೆ: ಚಿತ್ರದುರ್ಗ, ದಾವಣಗೆರೆ, ಹಾವೇರಿ, ರಾಣೆಬೆನ್ನೂರು, ಬಾಗಲಕೋಟೆ, ತುಮಕೂರು, ಪಾವಗಡ, ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ವಿವಿಧ ತಾಲೂಕುಗಳಿಂದ ಶಾಲಾ ಮಕ್ಕಳು, ಯುವಕ ಸಂಘಗಳ ಸದಸ್ಯರು, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts