More

    ಕಳಪೆ ಬೀಜ ಮಾರಿದರೆ ಕ್ರಿಮಿನಲ್ ಕೇಸ್

    ಚಿತ್ರದುರ್ಗ: ಕಳಪೆ ಬಿತ್ತನೆ ಬೀಜ ಮಾರಿದರೆ ರೈತರನ್ನು ಕೊಲೆ ಮಾಡಿದಂತೆ. ಯಾರಾದರೂ ರೈತರಿಗೆ ಮೊಸ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದರು.

    ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರೈತ ಪ್ರಮುಖರು,ಜನಪ್ರತಿನಿಧಿಗಳ, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ರಾಜ್ಯಾದ್ಯಂತ ಕೃಷಿ ಇಲಾಖೆಯ ವಿಚಕ್ಷಣಾದಳ ಹಠಾತ್ ದಾಳಿ ನಡೆಸುತ್ತಿದ್ದು ಕಳಪೆ ಕಂಡು ಬಂದರೆ ಅಂತಹ ಮಾರಾಟಗಾರರ ಪರವಾನಗಿ ರದ್ದುಗೊಳಿಸುವ ಜತೆಗೆ ದೂರು ದಾಖಲು ಮಾಡಲಾಗುವುದು ಎಂದು ತಿಳಿಸಿದರು.

    ಈ ವಿಷಯದಲ್ಲಿ ಕೃಷಿ ಇಲಾಖೆಯ ಸ್ಥಳೀಯ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ಹೇಳಿದರು.

    ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಶೇಂಗಾ ಬಿತ್ತನೆ ಬೀಜ ಮಾರುತ್ತಿರುವ ದೂರಿದೆ. ವಿತರಣೆಗೆ ಮೊದಲು ಅದರ ಪ್ಯೂರಿಟಿ ಹಾಗೂ ಜರ್ಮಿನೇಷನ್ ಪರೀಕ್ಷಿಸಬೇಕು ಎಂದು ತಾಕೀತು ಮಾಡಿದರು.

    ಆಲಿಕಲ್ಲು ಮಳೆ, ಬಿರುಗಾಳಿ ಹಾಗೂ ಕರೋನಾ ಕಾರಣದಿಂದ ಹೂ ಮತ್ತಿತರ ಬೆಳೆ ಹಾನಿ ಆಗಿದೆ. ಈ ಕುರಿತು ವರದಿ ಸಲ್ಲಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

    ಕೃಷಿ ಉತ್ಪನ್ನಗಳ ರಕ್ಷಣೆಗೆ ಕೋಲ್ಡ್ ಸ್ಟೊರೇಜ್, ಆಹಾರ ಸಂಸ್ಕರಣಾ ಘಟಕಗಳ ಅಗತ್ಯವಿದ್ದು ರೈತರಿಗೆ ನೆರವಾಗಲು ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ತಾತ್ಕಾಲಿಕವಾಗಿ ತಲಾ 4 ಕಂಟೈನರ್‌ಗಳ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದರು.

    ಮೆಕ್ಕೆಜೋಳ ಖರೀದಿ ಕುರಿತು ಕೇಂದ್ರಕ್ಕೆ ಸಿಎಂ ಮತ್ತಮ್ಮೆ ಮನವಿ ಮಾಡಲಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ, ವಿದ್ಯುತ್ ಪರಿವರ್ತಕ ಸುಟ್ಟರೆ ಕೂಡಲೇ ಬದಲಿ ವ್ಯವಸ್ಥೆ ಮಾಡಲು ಸೂಚಿಸಿದರು.

    ಜಂಟಿ ಕೃಷಿ ನಿರ್ದೇಶಕ ಸದಾಶಿವ ಮಾತನಾಡಿ, ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಯಂತ್ರಧಾರೆ ಕೇಂದ್ರಗಳು ತೆರೆದಿವೆ.

    ಮುಂಗಾರು ಹಂಗಾಮಿಗೆ 87 ಸಾವಿರ ಟನ್ ಬಿತ್ತನೆ ಬೀಜ ವಿತರಿಸಲಾಗುವುದು. 53371 ಟನ್ ರಸಗೊಬ್ಬರದ ಅಗತ್ಯವಿದ್ದು 14557 ಸಾವಿರ ಟನ್ ದಾಸ್ತಾನು ಇದೆ ಎಂದರು.

    ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ ಮಾತನಾಡಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ 89 ಹೆ.ಬೆಳೆ ನಷ್ಟವಾಗಿದೆ ಎಂದು ಮಾಹಿತಿ ನೀಡಿದರು. ರೈತ ಮುಖಂಡರು ಕೃಷಿ ಕ್ಷೇತ್ರದ ಹತ್ತಾರು ಸಮಸ್ಯೆ ವಿವರಿಸಿದರು.

    ಎಂಎಲ್ಸಿ ಜಯಮ್ಮ ಬಾಲರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್,ಜಿಲ್ಲಾಧಿಕಾರಿ ಆರ್. ವಿನೋತ್‌ಪ್ರಿಯಾ, ಜಿಪಂ ಸಿಇಒ ಎಸ್.ಹೊನ್ನಾಂಬ, ಎಸ್ಪಿ ಜಿ.ರಾಧಿಕಾ, ರೈತ ಮುಖಂಡರಾದ ಸುರೇಶ್ ಬಾಬು, ನುಲೇನೂರು ಶಂಕ್ರಪ್ಪ, ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ,ಈಚಘಟ್ಟದ ಸಿದ್ದವೀರಪ್ಪ ಮೊದಲಾದ ರೈತ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts