More

    ಚಿತ್ರದುರ್ಗದ ಯುವತಿಗೆ ಸೋಂಕು ಪತ್ತೆ

    ಚಿತ್ರದುರ್ಗ: ಜಿಲ್ಲೆಯ 17 ವರ್ಷದ ಯುವತಿಯಲ್ಲಿ (ಪಿ.1290) ಕರೊನಾ ಸೋಂಕು ಪತ್ತೆಯಾಗಿರುವುದು ಮಂಗಳವಾರ ಬೆಳಗ್ಗೆ ದೃಢಪಟ್ಟಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ತೀವ್ರ ಉಸಿರಾಟ ತೊಂದರೆಯಿಂದ (ಎಸ್‌ಎಆರ್‌ಐ)ಬಳಲುತ್ತಿರುವ ಸೋಂಕಿತ ಯುವತಿ ಸದ್ಯಕ್ಕೆ ಉಡುಪಿ ಜಿಲ್ಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ10 ಕ್ಕೆ ಏರಿದ್ದು, ಇವರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

    ನೆಗೆಟಿವ್ ಬಂದಿತ್ತು: ಹೊಳಲ್ಕೆರೆ ತಾಲೂಕಿನ ಈ ಯುವತಿ ಜ್ವರ ತಪಾಸಣೆಗೆಂದು ಮೇ 11 ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಳು. ನಂತರ ಮೇ 14 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸಿದ ಗಂಟಲುದ್ರವದ ಮಾದರಿ ಪರೀಕ್ಷೆ ನೆಗೆಟಿವ್ ಬಂದಿದೆ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ 16 ರಂದು ನಡೆಸಿದ್ದ ಗಂಟಲು ದ್ರವದ ಮಾದರಿ ಪರೀಕ್ಷೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    84 ಜನರಿಗೂ ನೆಗೆಟಿವ್: ಚಳ್ಳಕೆರೆ ತಾಲೂಕು ಕೋಡಿಹಳ್ಳಿ ತಂದೆ-ಮಗಳಲ್ಲಿ ಮೇ 15 ರಂದು ಸೋಂಕು ದೃಢಪಟ್ಟಿದ್ದರಿಂದಾಗಿ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಆಸುಪಾಸಿನ ಗ್ರಾಮ, ನಗರದ ಎಲ್ಲ 84 ಜನರ ಗಂಟಲು ದ್ರವದ ಪರೀಕ್ಷೆ ಮಾದರಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್ ತಿಳಿಸಿದ್ದಾರೆ. ಚಿತ್ರದುರ್ಗ ಕೋವಿಡ್-19 ಆಸ್ಪತ್ರೆಯಲ್ಲಿರುವ 8 ಸೋಂಕಿತರೆಲ್ಲರೂ ಆರೋಗ್ಯದಿಂದ ಇದ್ದಾರೆ.

    ವೈದ್ಯ,ಸಿಬ್ಬಂದಿ ಕ್ವಾರಂಟೈನ್‌ಗೆ: ಮೇ 8 ರಿಂದ ಕರ್ತವ್ಯದಲ್ಲಿದ್ದ ಮುಖ್ಯಾಧಿಕಾರಿ ಸಹಿತ ನಾಲ್ವರು ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ತಮ್ಮ ಪಾಳಿ ಪೂರ್ಣಗೊಳಿಸಿ ಮನೆಗೂ ಹೋಗದೇ ಈಗ ಸಾಂಸ್ಥಿಕ ಕ್ವಾರಂಟೈನಲ್ಲಿದ್ದಾರೆ ಎಂದು ಫಿಜಿಶಿಯನ್ ಡಾ.ಸತೀಶ್ ತಿಳಿಸಿದ್ದಾರೆ.

    ಪ್ರಯೋಗಾಲಯ: ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಕೋವಿಡ್ ಪರೀಕ್ಷೆ ಪ್ರಯೋಗಾಲಯ ಸ್ಥಾಪನೆ ಸಿದ್ಧತೆ ಪೂರ್ಣಗೊಂಡಿದೆ. ಟೆಕ್ನಿಷಿಯನ್‌ಗಳಿಗೆ ತರಬೇತಿ ಕೂಡ ಆಗಿದ್ದು, ಪ್ರಯೋಗಾಲಯ ಕಾರ‌್ಯಾರಂಭಕ್ಕಾಗಿ ಡಿಕೋಡ್ ಹಾಗೂ ಇದರ ಉದ್ಘಾಟನೆಗೆಂದು ಜಿಲ್ಲಾ ಉಸ್ತುವಾರಿ ಸಚಿವರ ದಿನಾಂಕವನ್ನು ಆರೋಗ್ಯ ಇಲಾಖೆ ಎದುರು ನೋಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts